T20 ವಿಶ್ವ ದಾಖಲೆ ಸರಿಗಟ್ಟಿದ ಬರೋಡದ ಅಮಿತ್ ಪಾಸ್ಸಿ
ಅಮಿತ್ ಪಾಸ್ಸಿ | Photo Credit : Instagram/@amitpassi.08
ಹೈದರಾಬಾದ್, ಡಿ.8: ಬರೋಡ ಕ್ರಿಕೆಟ್ ತಂಡದ ವಿಕೆಟ್ ಕೀಪರ್-ಬ್ಯಾಟರ್ ಅಮಿತ್ ಪಾಸ್ಸಿ ಅವರು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಸೋಮವಾರ ನಡೆದ ಗ್ರೂಪ್ ಹಂತದ T20 ಪಂದ್ಯದಲ್ಲಿ ಸರ್ವಿಸಸ್ ತಂಡದ ವಿರುದ್ಧ ಆಡಿದ ತನ್ನ ಚೊಚ್ಚಲ ಪಂದ್ಯದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸುವ ಮೂಲಕ ವಿಶ್ವ ದಾಖಲೆಯೊಂದನ್ನು ಸರಿಗಟ್ಟಿದರು.
ಅಮಿತ್ 55 ಎಸೆತಗಳಲ್ಲಿ 10 ಬೌಂಡರಿ ಹಾಗೂ 9 ಸಿಕ್ಸರ್ ಗಳ ಸಹಿತ 114 ರನ್ ಗಳಿಸಿದರು. ಇದರೊಂದಿಗೆ 2015ರಲ್ಲಿ ಪಾಕಿಸ್ತಾನ T20 ಲೀಗ್ ಪಂದ್ಯದಲ್ಲಿ ಸಿಯಾಲ್‌ಕೋಟ್ ಸ್ಟಾಲಿಯನ್ಸ್ ಪರ ಬಿಲಾಲ್ ಆಸಿಫ್ ನಿರ್ಮಿಸಿದ್ದ ದಾಖಲೆಯನ್ನು ಸರಿಗಟ್ಟಿದರು.
ರಾಷ್ಟ್ರೀಯ ತಂಡದಲ್ಲಿರುವ ಜಿತೇಶ್ ಶರ್ಮಾ ಬದಲಿಗೆ ಆಡಿದ 26ರ ವಯಸ್ಸಿನ ಅಮಿತ್ ಕೇವಲ 44 ಎಸೆತಗಳಲ್ಲಿ ತನ್ನ ಚೊಚ್ಚಲ T20 ಶತಕ ಗಳಿಸುವ ಮೊದಲು 24 ಎಸೆತಗಳಲ್ಲಿ ಅರ್ಧಶತಕ ತಲುಪಿದರು.
ಅಮಿತ್ ಚೊಚ್ಚಲ T20 ಪಂದ್ಯದಲ್ಲಿ ಶತಕ ಗಳಿಸಿದ ಭಾರತದ ಮೂರನೇ ಆಟಗಾರನಾಗಿದ್ದಾರೆ. ಅಕ್ಷತ್ ರೆಡ್ಡಿ(2010ರಲ್ಲಿ ಮುಂಬೈ ವಿರುದ್ಧ ಹೈದರಾಬಾದ್ ಪರ)ಹಾಗೂ ಶಿವಂ ಭಾಂಬ್ರಿ(2019ರಲ್ಲಿ ಹಿಮಾಚಲಪ್ರದೇಶದ ವಿರುದ್ದ ಚಂಡಿಗಡ ಪರ)ಈ ಹಿಂದೆ ಶತಕ ಗಳಿಸಿದ್ದರು.
ಅಮಿತ್ ಅವರು ಇದೀಗ T20 ಕ್ರಿಕೆಟಿನ ಚೊಚ್ಚಲ ಪಂದ್ಯದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ಭಾರತೀಯ ಬ್ಯಾಟರ್ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ.
ಬರೋಡ ತಂಡವು ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ಗಳ ನಷ್ಟಕ್ಕೆ 220 ರನ್ ಗಳಿಸಿದ್ದು, ಸರ್ವಿಸಸ್ ತಂಡಕ್ಕೆ 13 ರನ್ ಗಳಿಂದ ಸೋಲುಣಿಸಿದೆ. ಅಮಿತ್ ಈ ವರ್ಷದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಶತಕ ಗಳಿಸಿದ 15ನೇ ಆಟಗಾರನಾಗಿದ್ದಾರೆ. ಇದು ಪಂದ್ಯಾವಳಿಯಲ್ಲಿ ದಾಖಲೆಯಾಗಿದೆ. 2018-19ರಲ್ಲಿ ಹಾಗೂ 2023-24ರಲ್ಲಿ ತಲಾ 13 ಶತಕಗಳು, 2024-25ರಲ್ಲಿ 14 ಶತಕ ದಾಖಲಾಗಿದ್ದವು.
►ಚೊಚ್ಚಲ T20 ಪಂದ್ಯದಲ್ಲಿ ಗರಿಷ್ಠ ಸ್ಕೋರ್ ಗಳಿಸಿದ ಆಟಗಾರರು
114 ರನ್-ಅಮಿತ್ ಪಾಸ್ಸಿ(ಬರೋಡ)-2025
114 ರನ್-ಬಿಲಾಲ್ ಆಸಿಫ್(ಸಿಯಾಲ್‌ಕೋಟ್ ಸ್ಟಾಲಿಯನ್ಸ್)-2015
112-ಮೊಯೀನ್ ಖಾನ್ (ಕರಾಚಿ ಡಾಲ್ಫಿನ್ಸ್)-2005
108-ಎಂ. ಸ್ಪೂರ್ಸ್(ಕೆನಡ)-2022
106-ಶಿವಂ ಭಾಂಬ್ರಿ(ಚಂಡಿಗಡ)-2019