T20 ವಿಶ್ವಕಪ್ ಟೂರ್ನಿ ವೇಳೆಗೆ ವಾಶಿಂಗ್ಟನ್ ಸುಂದರ್ ಸಂಪೂರ್ಣ ಫಿಟ್ ಆಗುವುದು ಅನುಮಾನ
ವಾಶಿಂಗ್ಟನ್ ಸುಂದರ್ | Photo Credit : PTI
ಹೊಸದಿಲ್ಲಿ, ಜ.15: ವಿಶ್ವಕಪ್ ಟೂರ್ನಿ ಆರಂಭವಾಗಲು ಇನ್ನೂ ಒಂದು ತಿಂಗಳಿಗೂ ಕಡಿಮೆ ಸಮಯವಿರುವಾಗ ಭಾರತದ ಟಿ-20 ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಆಲ್‌ರೌಂಡರ್ ವಾಶಿಂಗ್ಟನ್ ಸುಂದರ್ ಅವರು ಫೆಬ್ರವರಿ 7ರಿಂದ ಆರಂಭವಾಗಲಿರುವ ಬಹುರಾಷ್ಟ್ರಗಳ ಟೂರ್ನಿಯ ವೇಳೆಗೆ ಸಂಪೂರ್ಣ ಫಿಟ್ ಆಗುವ ಸಾಧ್ಯತೆ ಇಲ್ಲ ಎಂದು ವರದಿಯಾಗಿದೆ.
26 ವರ್ಷದ ಸುಂದರ್ ನ್ಯೂಝಿಲ್ಯಾಂಡ್ ತಂಡದ ವಿರುದ್ಧ ಜನವರಿ 21ರಿಂದ ಆರಂಭವಾಗಲಿರುವ ಐದು ಪಂದ್ಯಗಳ ಟಿ-20 ಸರಣಿಯಿಂದ ಹೊರಗುಳಿಯುವುದು ಬಹುತೇಕ ಖಚಿತವಾಗಿದೆ. ವಿಶ್ವಕಪ್ ಸಮಯಕ್ಕೆ ಸರಿಯಾಗಿ ಫಿಟ್ ಆಗಲು ಸುಂದರ್ ಅವರು ಶೀಘ್ರವೇ ಚೇತರಿಸಿಕೊಳ್ಳಬೇಕಿದೆ.
ಸುಂದರ್ ಅವರ ಗಾಯ ‘ಗಂಭೀರ’ವಾಗಿದೆ. ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ (ಸಿಒಇ)ನಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳುವ ಅಗತ್ಯವಿದೆ ಎಂದು ಆಂಗ್ಲಪತ್ರಿಕೆಯೊಂದು ವರದಿ ಮಾಡಿದೆ.
ಸುಂದರ್ ಅವರು ಸಂಕ್ರಾಂತಿ ಹಬ್ಬದ ಮರುದಿನವೇ ಬೆಂಗಳೂರಿಗೆ ತೆರಳುವ ಸಾಧ್ಯತೆಯಿದೆ. ಈ ವಾರಾಂತ್ಯದಲ್ಲಿ ಚೇತರಿಕೆಯ ಹಾದಿಗೆ ಮರಳಲು ಯತ್ನಿಸಲಿದ್ದಾರೆ. ಅವರು ಸದ್ಯ ನೋವಿನಿಂದ ಬಳಲುತ್ತಿದ್ದು, ಸಿಒಇನಲ್ಲಿ ಅವರ ಗಾಯದ ಪ್ರಮಾಣವು ಗೊತ್ತಾಗಲಿದೆ. ವಿವಿಧ ಆರ್‌ಟಿಪಿ ಶಿಷ್ಟಾಚಾರಗಳ ಮೂಲಕ ಇದನ್ನು ನಿರ್ಧರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ವಿಶ್ವಕಪ್ ನಲ್ಲಿ ಭಾಗವಹಿಸುವ ತಂಡಗಳಿಗೆ ಜನವರಿ 31ರ ತನಕ ಬದಲಾವಣೆಗಳನ್ನು ಮಾಡುವ ಅವಕಾಶವಿದೆ. ಭಾರತೀಯ ತಂಡಾಡಳಿತವು ಸುಂದರ್ ಅವರ ಚೇತರಿಕೆಯ ಬಗ್ಗೆ ತೀವ್ರ ನಿಗಾವಹಿಸಿದೆ. ಸುಂದರ್ ಈಗಾಗಲೇ ನ್ಯೂಝಿಲ್ಯಾಂಡ್ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ. ಐದು ಪಂದ್ಯಗಳ ಟಿ-20 ಸರಣಿಯಲ್ಲಿ ಸುಂದರ್ ಬದಲಿಗೆ ದಿಲ್ಲಿ ಬ್ಯಾಟರ್ ಆಯುಷ್ ಬದೋನಿ ಆಡಲಿದ್ದಾರೆಯೇ ಎಂಬುದು ಕಾದು ನೋಡಬೇಕಾಗಿದೆ.
ವಿಶ್ವಕಪ್ ಹತ್ತಿರವಾಗುತ್ತಿರುವಾಗಲೇ ಸುಂದರ್ ಗಾಯಗೊಂಡಿದ್ದಾರೆ. ಇದು ಆಯ್ಕೆಗಾರರಿಗೆ ತೀವ್ರ ತಲೆನೋವು ತಂದಿದೆ. ಈ ಹಿಂದೆ ಪ್ರಮುಖ ಆಟಗಾರರು ಗಾಯಗೊಂಡಾಗ ತಾಳ್ಮೆವಹಿಸಲಾಗುತ್ತಿತ್ತು. ಸುಂದರ್ ವಿಚಾರದಲ್ಲೂ ಇದೇ ರೀತಿಯ ಹಾದಿ ತುಳಿಯಲಾಗುತ್ತದೆಯೇ ಎಂಬುದು ಕುತೂಹಲಕಾರಿ.
‘‘ಸುಂದರ್ ಭಾರತೀಯ ಕ್ರಿಕೆಟ್ ತಂಡಕ್ಕೆ ಅತ್ಯಂತ ನಿರ್ಣಾಯಕ ಆಟಗಾರ. ಅವರು ಎಲ್ಲಾ ಮೂರು ಮಾದರಿಯ ಕ್ರಿಕೆಟ್ ಆಡುತ್ತಾರೆ. ಏಕದಿನ ಸರಣಿಗಿಂತ ಮೊದಲು ದೇಶೀಯ ಪಂದ್ಯಗಳನ್ನು ಆಡಿದ್ದರು. ವೈದ್ಯಕೀಯ ತಂಡವು ಅವರು ಯಾವ ರೀತಿಯ ಗಾಯವನ್ನು ಎದುರಿಸುತ್ತಿದ್ದಾರೆ ಎಂಬುದನ್ನು ಇನ್ನಷ್ಟೇ ಖಚಿತಪಡಿಸಬೇಕಾಗಿದೆ. ತಜ್ಞರು ಮಾತ್ರ ಇದಕ್ಕೆ ಉತ್ತರಿಸಬಲ್ಲರು. 2023ರ ವಿಶ್ವಕಪ್ ವೇಳೆಗೆ ಶುಭಮನ್ ಗಿಲ್ ಅವರು ಡೆಂಗಿಗೆ ಒಳಗಾದಾಗ ಟೀಮ್ ಮ್ಯಾನೇಜ್‌ಮೆಂಟ್ ತಾಳ್ಮೆಯಿಂದ ವರ್ತಿಸಿತ್ತು. ಆಸ್ಟ್ರೇಲಿಯಾ ಗಾಯಗೊಂಡಿದ್ದ ಟ್ರಾವಿಸ್ ಹೆಡ್ ಅವರನ್ನು ತಂಡದೊಂದಿಗೆ ಇಟ್ಟುಕೊಂಡಿದ್ದಲ್ಲದೆ ಬದಲಿ ಆಟಗಾರರನ್ನು ನೇಮಿಸಿರಲಿಲ್ಲ. ಹೀಗಾಗಿ ಸುಂದರ್ ಅವರು ವಿಶ್ವಕಪ್ ಟೂರ್ನಿಯ ವೇಳೆಗೆ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಬಹುದು’’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನ್ಯೂಝಿಲ್ಯಾಂಡ್ ತಂಡದ ವಿರುದ್ಧ ಮೊದಲ ಏಕದಿನ ಪಂದ್ಯದ ವೇಳೆ ಸುಂದರ್ ಸಾಕಷ್ಟು ನೋವು ಅನುಭವಿಸಿದ್ದು, ಕೇವಲ ಐದು ಓವರ್ ಬೌಲಿಂಗ್ ಮಾಡಿದ್ದರು. ರನ್ ಚೇಸ್ ವೇಳೆ 47ನೇ ಓವರ್‌ನಲ್ಲಿ ಬ್ಯಾಟಿಂಗ್‌ಗೆ ಇಳಿದಾಗ ಪರದಾಟ ನಡೆಸಿದ್ದರು.
ಭಾರತ ತಂಡವು ಟಿ-20 ವಿಶ್ವಕಪ್ ಟೂರ್ನಿಯ ತಯಾರಿಗೆ ತನ್ನ ಗಮನವನ್ನು ಹರಿಸುವ ಮೊದಲು ಜನವರಿ 18ರಂದು ನ್ಯೂಝಿಲ್ಯಾಂಡ್ ವಿರುದ್ಧ ಮೂರನೇ ಏಕದಿನ ಪಂದ್ಯವನ್ನು ಆಡಲಿದೆ. ಕಿವೀಸ್ ವಿರುದ್ಧ ಜನವರಿ 21ರಿಂದ ಐದು ಪಂದ್ಯಗಳ ಟಿ-20 ಸರಣಿ ನಡೆಯಲಿದೆ.