×
Ad

ರಣಜಿ| ಪಂಜಾಬ್ ವಿರುದ್ಧ ಕರ್ನಾಟಕಕ್ಕೆ 255/6: ಕೆ.ಎಲ್.ರಾಹುಲ್ ಅರ್ಧಶತಕ

Update: 2026-01-30 21:38 IST

ಕೆ.ಎಲ್.ರಾಹುಲ್ | Photo Credit : X/@BCCI

ಮೊಹಾಲಿ, ಜ.30: ಆರಂಭಿಕ ಆಟಗಾರರಾದ ಕೆ.ಎಲ್.ರಾಹುಲ್ (59 ರನ್, 87 ಎಸೆತ, 9 ಬೌಂಡರಿ)ಹಾಗೂ ಮಯಾಂಕ್ ಅಗರ್ವಾಲ್(46 ರನ್, 64 ಎಸೆತ, 6 ಬೌಂಡರಿ)ಮೊದಲ ವಿಕೆಟ್‌ಗೆ 102 ರನ್ ಜೊತೆಯಾಟ ನಡೆಸಿದ ಹೊರತಾಗಿಯೂ ಕರ್ನಾಟಕ ಕ್ರಿಕೆಟ್ ತಂಡವು ಆತಿಥೇಯ ಪಂಜಾಬ್ ತಂಡದ ವಿರುದ್ಧ ರಣಜಿ ಟ್ರೋಫಿ ಟೂರ್ನಿಯ ‘ಬಿ’ ಗುಂಪಿನ ಪಂದ್ಯದಲ್ಲಿ ಬ್ಯಾಟಿಂಗ್ ಕುಸಿತಕ್ಕೆ ಒಳಗಾಗಿದೆ.

ಶುಕ್ರವಾರ ಎರಡನೇ ದಿನದಾಟದಂತ್ಯಕ್ಕೆ ಕರ್ನಾಟಕ ತಂಡ ತನ್ನ ಮೊದಲ ಇನಿಂಗ್ಸ್‌ನಲ್ಲಿ 255 ರನ್‌ಗೆ ಆರು ವಿಕೆಟ್‌ಗಳನ್ನು ಕಳೆದುಕೊಂಡಿದೆ.

ಆಲ್‌ರೌಂಡರ್ ಶ್ರೇಯಸ್ ಗೋಪಾಲ್(ಔಟಾಗದೆ 42 ರನ್, 124 ಎಸೆತ, 3 ಬೌಂಡರಿ)ಹಾಗೂ ಬೌಲರ್ ವಿದ್ಯಾಧರ ಪಾಟೀಲ್(ಔಟಾಗದೆ 23, 56 ಎಸೆತ, 4 ಬೌಂಡರಿ)ಕ್ರೀಸ್ ಕಾಯ್ದುಕೊಂಡಿದ್ದಾರೆ. ಈ ಜೋಡಿ ಏಳನೇ ವಿಕೆಟ್‌ಗೆ 42 ರನ್ ಜೊತೆಯಾಟ ನಡೆಸಿ ತಂಡದ ಮೊತ್ತವನ್ನು 250ರ ಗಡಿ ದಾಟಿಸಿತು.

9 ವಿಕೆಟ್‌ಗಳ ನಷ್ಟಕ್ಕೆ 303 ರನ್‌ನಿಂದ ತನ್ನ ಮೊದಲ ಇನಿಂಗ್ಸ್ ಆರಂಭಿಸಿದ ಪಂಜಾಬ್ ತಂಡವು ನಿನ್ನೆಯ ಮೊತ್ತಕ್ಕೆ ಕೇವಲ ಆರು ರನ್ ಸೇರಿಸಿ ಆಲೌಟಾಯಿತು. ಔಟಾಗದೆ 77 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಎಮನ್‌ಜೋತ್ ಸಿಂಗ್ 83 ರನ್ ಗಳಿಸಿ ಕರ್ನಾಟಕದ ಯಶಸ್ವಿ ಬೌಲರ್ ವಿದ್ಯಾಧರ ಪಾಟೀಲ್‌ಗೆ(4-52) ವಿಕೆಟ್ ಒಪ್ಪಿಸಿದರು.

ಶ್ರೇಯಸ್ ಗೋಪಾಲ್ (3-48)ಹಾಗೂ ಮುಹ್ಸಿನ್ ಖಾನ್(2-85)ಐದು ವಿಕೆಟ್‌ಗಳನ್ನು ಹಂಚಿಕೊಂಡರು.

ಮೊದಲ ಇನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡದ ಪರ 21.3 ಓವರ್‌ಗಳಲ್ಲಿ 102 ರನ್ ಕಲೆ ಹಾಕಿದ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಉತ್ತಮ ಆರಂಭ ಒದಗಿಸಿದರು. ಅಗರ್ವಾಲ್, ರಾಹುಲ್ ಹಾಗೂ ನಾಯಕ ದೇವದತ್ತ ಪಡಿಕ್ಕಲ್(9 ರನ್)ಔಟಾದಾಗ ಕರ್ನಾಟಕ 137 ರನ್‌ಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು.

ಆರ್. ಸ್ಮರಣ್(9 ರನ್),ಕೆ.ವಿ. ಅನೀಶ್(32 ರನ್, 75 ಎಸೆತ)ಹಾಗೂ ಕೃತಿಕ್ ಕೃಷ್ಣ(28 ರನ್, 83 ಎಸೆತ)ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ.

ಪಂಜಾಬ್ ತಂಡದ ಬೌಲಿಂಗ್ ವಿಭಾಗದಲ್ಲಿ ವೇಗದ ಬೌಲರ್ ಹರ್‌ಪ್ರೀತ್ ಬ್ರಾರ್(4-101)ಯಶಸ್ವಿ ಪ್ರದರ್ಶನ ನೀಡಿದರು.

ಸುಖದೀಪ್ ಸಿಂಗ್(1-22)ಹಾಗೂ ಎಮನ್‌ಜೋತ್ ಸಿಂಗ್(1-55)ತಲಾ ಒಂದು ವಿಕೆಟ್‌ಗಳನ್ನು ಕಬಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News