ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ | ಬೆಳ್ಳಿ ಪದಕ ಗೆದ್ದ ಭಾರತದ ತನ್ವಿ ಶರ್ಮಾ
Photo: PTI
ಗುವಾಹಟಿ, ಅ.19: ಭಾರತದ ಯುವ ಬ್ಯಾಡ್ಮಿಂಟನ್ ತಾರೆ ತನ್ವಿ ಶರ್ಮಾ ಬಿಡಬ್ಲ್ಯುಎಫ್ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಥಾಯ್ಲೆಂಡ್‌ನ ಅನ್ಯಪತ್ ಫಿಚಿತ್‌ಪ್ರೀಚಾಸಕ್ ವಿರುದ್ಧ ಸೋಲನುಭವಿಸಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.
ಸೈನಾ ನೆಹ್ವಾಲ್ ಹಾಗೂ ಅಪರ್ಣಾ ಪೋಪಟ್ ನಂತರ ಪಂದ್ಯಾವಳಿಯಲ್ಲಿ ಫೈನಲ್‌ಗೆ ತಲುಪಿದ ಭಾರತದ 3ನೇ ಮಹಿಳಾ ಶಟ್ಲರ್ ಎನಿಸಿಕೊಂಡಿರುವ 16ರ ವಯಸ್ಸಿನ ತನ್ವಿ ರವಿವಾರ 2ನೇ ಶ್ರೇಯಾಂಕದ ಥಾಯ್ಲೆಂಡ್ ಆಟಗಾರ್ತಿಯ ಎದುರು 7-15, 12-15 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.
ತನ್ವಿ 17 ವರ್ಷಗಳ ನಂತರ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಮೊದಲ ಬಾರಿ ಬೆಳ್ಳಿ ಪದಕ ಗೆದ್ದುಕೊಟ್ಟರು. ಈ ಹಿಂದೆ ಸೈನಾ 2008ರಲ್ಲಿ ಚಿನ್ನ ಹಾಗೂ 2006ರಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಅಪರ್ಣಾ 1996ರಲ್ಲಿ ಬೆಳ್ಳಿ ಗೆದ್ದಿದ್ದರು.
ತನ್ವಿ ಇದೀಗ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ 5ನೇ ಬ್ಯಾಡ್ಮಿಂಟನ್ ತಾರೆ ಎನಿಸಿಕೊಂಡರು. ಅಪರ್ಣಾ ಪೋಪಟ್(1996), ಸೈನಾ ನೆಹ್ವಾಲ್(2006), ಸಿರಿಲ್ ವರ್ಮಾ(2015)ಹಾಗೂ ಶಂಕರ್ ಮುತ್ತುಸ್ವಾಮಿ(2022)ಈ ಹಿಂದೆ ಈ ಸಾಧನೆ ಮಾಡಿದ್ದರು.
ಸೈನಾ ಮಾತ್ರ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದಿರುವ ಭಾರತದ ಏಕೈಕ ಆಟಗಾರ್ತಿಯಾಗಿದ್ದಾರೆ. ಸೈನಾ 2008ರಲ್ಲಿ ಬಂಗಾರ ಗೆದ್ದಿದ್ದರು.
ಪಂದ್ಯದ ಆರಂಭದಲ್ಲಿ ತೀವ್ರ ಸ್ಪರ್ಧೆ ಕಂಡುಬಂದಿದ್ದು, ಇಬ್ಬರು ಆಟಗಾರ್ತಿಯರು 2-2 ಹಾಗೂ 4-4ರಿಂದ ಸಮಬಲಗೊಳಿಸಿದರು. ಥಾಯ್ಲೆಂಡ್ ಆಟಗಾರ್ತಿ ಮೊದಲ ಗೇಮ್‌ನಲ್ಲಿ 10-5 ಮುನ್ನಡೆ ಸಾಧಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿದರು.
2ನೇ ಗೇಮ್‌ನಲ್ಲಿ ತನ್ವಿ 6-1 ಮುನ್ನಡೆ ಸಾಧಿಸಿ ಉತ್ತಮ ಆರಂಭ ಪಡೆದರು. ಆದರೆ ಕೆಲವೊಂದು ತಪ್ಪುಗಳ ಮೂಲಕ ಥಾಯ್ಲೆಂಡ್ ಆಟಗಾರ್ತಿ ತಿರುಗೇಟು ನೀಡಲು ನೆರವಾದರು.