×
Ad

ಟಾಟಾ ಸ್ಟೀಲ್ ಚೆಸ್ ಪಂದ್ಯಾವಳಿ | ಅಗ್ರಸ್ಥಾನದಲ್ಲಿ ಗುಕೇಶ್, 3ನೇ ಸ್ಥಾನದಲ್ಲಿ ಪ್ರಜ್ಞಾನಂದ

Update: 2025-01-30 21:34 IST

 ಗುಕೇಶ್,  ಪ್ರಜ್ಞಾನಂದ |  NDTV 

ವಿಜ್ಕ್ ಆನ್ ಝೀ (ನೆದರ್‌ಲ್ಯಾಂಡ್ಸ್): ನೆದರ್‌ಲ್ಯಾಂಡ್ಸ್‌ನ ವಿಜ್ಕ್ ಆನ್ ಝೀ ಗ್ರಾಮದಲ್ಲಿ ನಡೆಯುತ್ತಿರುವ ಟಾಟಾ ಸ್ಟೀಲ್ ಚೆಸ್ ಪಂದ್ಯಾವಳಿಯಲ್ಲಿ ಭಾರತೀಯ ಗ್ರಾಂಡ್ ಮಾಸ್ಟರ್ ಡಿ. ಗುಕೇಶ್ ತನ್ನ ಅಜೇಯ ಅಭಿಯಾನವನ್ನು ಮುಂದುವರಿಸಿದ್ದಾರೆ. ಅವರು ಬುಧವಾರ ನಡೆದ 10ನೇ ಪಂದ್ಯದಲ್ಲಿ ನೆದರ್‌ಲ್ಯಾಂಡ್ಸ್‌ನ ಗ್ರಾಂಡ್ ಮಾಸ್ಟರ್ ಮ್ಯಾಕ್ಸ್ ವಾರ್ಮರ್‌ಡಮ್‌ರನ್ನು ಸೋಲಿಸಿದ್ದಾರೆ. ಇದರೊಂದಿಗೆ ಅವರೀಗ 7.5 ಅಂಕಗಳೊಂದಿಗೆ ಒಂಟಿ ಮುನ್ನಡೆಯಲ್ಲಿದ್ದಾರೆ.

ಅತ್ಯಂತ ಕಿರಿಯ ವಿಶ್ವ ಚಾಂಪಿಯನ್ ಆಗಿರುವ ಗುಕೇಶ್ ಕ್ಲೋಸ್ಟ್ ಸಿಸಿಲಿಯನ್‌ನಲ್ಲಿ ತನ್ನ ಎದುರಾಳಿಯ ತಪ್ಪು ಲೆಕ್ಕಾಚಾರದ ಪ್ರಯೋಜನವನ್ನು ಪಡೆದುಕೊಂಡರು ಹಾಗೂ 34ನೇ ನಡೆಯಲ್ಲಿ ವಿಜಯಿಯಾಗಿ ಹೊರ ಹೊಮ್ಮಿದರು.

ಗುಕೇಶ್ ಈಗ ಎರಡನೇ ಸ್ಥಾನದಲ್ಲಿರುವ ಉಝ್ಬೆಕಿಸ್ತಾನದ ನೊಡಿರ್‌ಬೇಕ್ ಅಬ್ದುಸತ್ತೊರೊವ್‌ಗಿಂತ ಅರ್ಧ ಅಂಕ ಮುಂದಿದ್ದಾರೆ. ಭಾರತದವರೇ ಆಗಿರುವ ಆರ್. ಪ್ರಜ್ಞಾನಂದ 6.5 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಪ್ರಜ್ಞಾನಂದ ಸ್ಲೊವೇನಿಯದ ವ್ಲಾದಿಮಿರ್ ಫೆಡೊಸೀವ್‌ರನ್ನು ಸೋಲಿಸಿದರು.

ಅರ್ಜುನ್ ಎರಿಗಸಿಯ ವಿಜಯವೊಂದನ್ನು ಪಡೆಯುವ ಹಂಬಲ 10ನೇ ಸುತ್ತಿನಲ್ಲೂ ಈಡೇರಲಿಲ್ಲ. ಅವರ ಮತ್ತು ಜರ್ಮನಿಯ ವಿನ್ಸೆಂಟ್ ಕೇಮರ್ ನಡುವಿನ 10ನೇ ಸುತ್ತಿನ ಪಂದ್ಯವು ಡ್ರಾಗೊಂಡಿತು.

ಇನ್ನೊಂದು ಪಂದ್ಯದಲ್ಲಿ, ಭಾರತದ ಪಿ. ಹರಿಕೃಷ್ಣ ಅಗ್ರ ಶ್ರೇಯಾಂಕದ ಫೆಬಿಯಾನೊ ಕರುವಾನ ವಿರುದ್ಧದ ಪಂದ್ಯವನ್ನು ಡ್ರಾಗೊಳಿಸುವಲ್ಲಿ ಯಶಸ್ವಿಯಾದರು.

ಚಾಲೆಂಜರ್‌ಗಳ ವಿಭಾಗದಲ್ಲಿ, ಆರ್. ವೈಶಾಲಿ ಝೆಕ್ ರಿಪಬ್ಲಿಕ್‌ನ ನಗುಯೆನ್ ತಾಯ್ ವಾನ್ ಡೈ ವಿರುದ್ಧದ ಪಂದ್ಯದಲ್ಲಿ ಸೋಲನುಭವಿಸಿದರು.

ಇನ್ನು ಕೇವಲ ಮೂರು ಸುತ್ತುಗಳು ಬಾಕಿಯುಳಿದಿದ್ದು, ಗುಕೇಶ್ ವಿಜಯದತ್ತ ದಿಟ್ಟ ಹೆಜ್ಜೆಗಳನ್ನು ಇಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News