ಟಾಟಾ ಸ್ಟೀಲ್ ಮಾಸ್ಟರ್ಸ್ ಚೆಸ್ ಪಂದ್ಯಾವಳಿ | ಪ್ರಜ್ಞಾನಂದ, ಗುಕೇಶ್ ನಡುವಿನ ಪಂದ್ಯ ಡ್ರಾ
ಪ್ರಜ್ಞಾನಂದ, ಗುಕೇಶ್ | PC : X
ವಿಜ್ಕ್ ಆನ್ ಜೀ (ನೆದರ್ಲ್ಯಾಂಡ್ಸ್): ನೆದರ್ಲ್ಯಾಂಡ್ಸ್ನ ವಿಜ್ಕ್ ಆನ್ ಜೀ ಎಂಬ ಗ್ರಾಮದಲ್ಲಿ ನಡೆಯುತ್ತಿರುವ ಟಾಟಾ ಸ್ಟೀಲ್ ಮಾಸ್ಟರ್ಸ್ ಚೆಸ್ ಪಂದ್ಯಾವಳಿಯಲ್ಲಿ ತನ್ನ ಉತ್ತಮ ನಿರ್ವಹಣೆಯನ್ನು ಮುಂದುವರಿಸಿರುವ ಭಾರತೀಯ ಗ್ರಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ, ರವಿವಾರ ನಡೆದ ಎಂಟನೇ ಸುತ್ತಿನ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಡಿ. ಗುಕೇಶ್ ವಿರುದ್ಧ ಡ್ರಾ ಸಾಧಿಸುವಲ್ಲಿ ಯಶಸ್ವಿಯಾದರು.
ಬರ್ಲಿನ್ ಡಿಫೆನ್ಸ್ನಲ್ಲಿ ಬಿಳಿ ಕಾಯಿಗಳೊಂದಿಗೆ ಆಡಿದ ಪ್ರಜ್ಞಾನಂದ ಎದುರಾಳಿಗಿಂತ ಕೊಂಚ ಉತ್ತಮ ಪರಿಸ್ಥಿತಿಯಲ್ಲಿ ಆಡಿದರು. ಆದರೆ ಗುಕೇಶ್ ಯಾವತ್ತೂ ಎಚ್ಚರಿಕೆಯಲ್ಲಿದ್ದರು.
ಮಧ್ಯಮ ಅವಧಿಯ ಆರಂಭದಲ್ಲಿ ತನ್ನ ಕೌಂಟರ್ಪ್ಲೇಯನ್ನು ಮುಂದುವರಿಸುವುದಕ್ಕಾಗಿ ಗುಕೇಶ್ ಕಾಯಿಯೊಂದನ್ನು ತ್ಯಾಗಮಾಡಿದರು. ಅದರ ಪ್ರಯೋಜನ ಪಡೆಯಲು ಪ್ರಜ್ಞಾನಂದ ಪ್ರಯತ್ನಿಸಿದರೂ, ಪಂದ್ಯವು ಡ್ರಾದತ್ತ ಸಾಗಿತ್ತು. 33 ಗಂಟೆಗಳ ಬಳಿಕ, ಪಂದ್ಯವನ್ನು ಡ್ರಾಗೊಳಿಸಲಾಯಿತು.
ಈ ಡ್ರಾದೊಂದಿಗೆ, ಪ್ರಜ್ಞಾನಂದ ಮತ್ತು ಗುಕೇಶ್ ತಲಾ 5.5 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಅವರೊಂದಿಗೆ ಉಝ್ಬೆಕಿಸ್ತಾನದ ನೊಡಿರ್ಬೆಕ್ ಅಬ್ದುಸ್ಸತ್ತಾರೊವ್ ಕೂಡ 5.5 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದಾರೆ. ನೊಡಿರ್ಬೆಕ್ ಸ್ಲೊವೇನಿಯದ ವ್ಲಾದಿಮಿರ್ ಫೆಡೊಸೀವ್ರನ್ನು ಸೋಲಿಸಿದರು.
ಇನ್ನೋರ್ವ ಭಾರತೀಯ ಗ್ರಾಂಡ್ಮಾಸ್ಟರ್ ಪಿ. ಹರಿಕೃಷ್ಣ ಅಗ್ರ ಕ್ರಮಾಂಕದ ನೆದರ್ಲ್ಯಾಂಡ್ಸ್ನ ಅನೀಶ್ ಗಿರಿಯೊಂದಿಗೆ ಡ್ರಾ ಮಾಡಿಕೊಂಡರು. ಇದರೊಂದಿಗೆ ಹರಿಕೃಷ್ಣರ ಅಂಕ ನಾಲ್ಕಕ್ಕೇರಿತು. ಅನೀಶ್ ಸತತ ಏಳನೇ ಡ್ರಾದ ಮೂಲಕ 3.5 ಅಂಕ ಗಳಿಸಿದರು.
ಪಂದ್ಯಾವಳಿಯಲ್ಲಿ ಇನ್ನು ಐದು ಪಂದ್ಯಗಳು ಬಾಕಿಯಿವೆ. ಸೋಮವಾರ ವಿರಾಮದ ದಿನವಾಗಿದ್ದು, ಮಂಗಳವಾರ ಪಂದ್ಯಗಳು ಸ್ಪರ್ಧೆ ಮುಂದುವರಿಯಲಿದೆ.