×
Ad

ಟಾಟಾ ಸ್ಟೀಲ್ ಮಾಸ್ಟರ್ಸ್ ಚೆಸ್ ಟೂರ್ನಿ: ಪ್ರಜ್ಞಾನಂದಗೆ ಪ್ರಶಸ್ತಿ

Update: 2025-02-03 21:27 IST

Photo credit ; PTI

ವಿಯ್ಕ್ ಆನ್ ಝೀ(ನೆದರ್‌ಲ್ಯಾಂಡ್ಸ್): ಹಾಲಿ ವಿಶ್ವ ಚಾಂಪಿಯನ್ ಹಾಗೂ ತಮ್ಮದೇ ದೇಶದ ಡಿ.ಗುಕೇಶ್‌ರನ್ನು ಟೈ-ಬ್ರೇಕರ್‌ನಲ್ಲಿ ಮಣಿಸಿದ ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್. ಪ್ರಜ್ಞಾನಂದ ವರ್ಷದ ಪ್ರಮುಖ ಚೆಸ್ ಟೂರ್ನಿಯಾದ ಟಾಟಾ ಸ್ಟೀಲ್ ಮಾಸ್ಟರ್ಸ್‌ನಲ್ಲಿ ಚಾಂಪಿಯನ್ ಕಿರೀಟ ಧರಿಸಿದ್ದಾರೆ. ಈ ಮೂಲಕ ಅಂತರ್‌ರಾಷ್ಟ್ರೀಯ ಚೆಸ್‌ನಲ್ಲಿ ಭಾರತದ ಆಟಗಾರರ ಪ್ರಾಬಲ್ಯ ಮುಂದುವರಿದಿದೆ.

87ನೇ ಆವೃತ್ತಿಯ ಟೂರ್ನಿಯಲ್ಲಿ 12ನೇ ಸುತ್ತಿನ ನಂತರ ಪ್ರಜ್ಞಾನಂದ ಹಾಗೂ ಗುಕೇಶ್ ತಲಾ 8.5 ಅಂಕ ಸಂಗ್ರಹಿಸಿ ಅಗ್ರ ಸ್ಥಾನ ಹಂಚಿಕೊಂಡಿದ್ದರು. ಗುಕೇಶ್ ಅವರು ರವಿವಾರ 13ನೇ ಹಾಗೂ ಅಂತಿಮ ಸುತ್ತಿನಲ್ಲಿ ತಮ್ಮದೇ ದೇಶದ ಅರ್ಜುನ್ ಇರಿಗೇಶಿ ವಿರುದ್ಧ ಸೋತರು. ಆಗ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಲು ಪ್ರಜ್ಞಾನಂದಗೆ ಕೊನೆಯ ಸುತ್ತಿನಲ್ಲಿ ಜರ್ಮನಿಯ ವಿನ್ಸೆಂಟ್ ಕೀಮರ್ ವಿರುದ್ಧ ಕೇವಲ ಡ್ರಾ ಸಾಧಿಸುವ ಅಗತ್ಯವಿತ್ತು. ಆದರೆ, ಜರ್ಮನಿಯ ಚೆಸ್ ತಾರೆ ವಿನ್ಸೆಂಟ್ ಅವರು ಪ್ರಜ್ಞಾನಂದ ವಿರುದ್ಧ ಜಯ ಸಾಧಿಸಿದರು. ಆಗ ಗುಕೇಶ್‌ಗೆ ಪ್ರಶಸ್ತಿ ಗೆಲ್ಲಲು ಮತ್ತೊಂದು ಅವಕಾಶ ಲಭಿಸಿತು.

ಸ್ಕೋರ್ ಸಮನಾದ ಕಾರಣ ಅಲ್ಪಾವಧಿಯ ಟೈ-ಬ್ರೇಕರ್ ಜಾರಿಗೊಳಿಸಲಾಯಿತು. ಚೆನ್ನೈನ ಆಟಗಾರರಿಬ್ಬರ ನಡುವೆ ನಡೆದ ಪೈಪೋಟಿಯಲ್ಲಿ ಪ್ರಜ್ಞಾನಂದ ಅವರು ಗುಕೇಶ್‌ರನ್ನು 2-1 ಅಂತರದಿಂದ ಮಣಿಸಿದರು.

ನಾಟಕೀಯ ತಿರುವು ಪಡೆದ ಟೈ-ಬ್ರೇಕರ್‌ನ ಮೊದಲ ಎರಡು ಗೇಮ್‌ಗಳಲ್ಲಿ ಇಬ್ಬರೂ ತಲಾ ಒಂದರಲ್ಲಿ ಗೆದ್ದರು. ಮೊದಲ ಗೇಮ್ ಅನ್ನು ಗುಕೇಶ್ ಗೆದ್ದುಕೊಂಡರೆ, 2ನೇ ಗೇಮ್ ಅನ್ನು ಪ್ರಜ್ಞಾನಂದ ಗೆದ್ದುಕೊಂಡರು. ಆಗ ಸ್ಕೋರ್ 1-1ರಿಂದ ಸಮಬಲಗೊಂಡಿತು. ಆಗ ಪಂದ್ಯವು ‘ಸಡನ್ ಡೆತ್’ಗೆ ಪ್ರವೇಶಿಸಿತು. 2 ನಿಮಿಷ, 30 ಸೆಕೆಂಡ್‌ಗಳ ‘ಸಡನ್ ಡೆತ್’ ಪಂದ್ಯದಲ್ಲಿ ಸಂಪೂರ್ಣ ಅಂಕ ಗಳಿಸಲು ಸಮರ್ಪಕ ಟೆಕ್ನಿಕ್ ಪ್ರದರ್ಶಿಸಿದ 19 ವರ್ಷ ವಯಸ್ಸಿನ ಪ್ರಜ್ಞಾನಂದ ಗೆಲುವಿನ ನಗೆ ಬೀರಿದರು. ಈ ಮೂಲಕ ತನ್ನ ಚೊಚ್ಚಲ ಮಾಸ್ಟರ್ಸ್ ಕಿರೀಟ ಮುಡಿಗೇರಿಸಿಕೊಂಡರು.

ಗುಕೇಶ್ ಸತತ ಎರಡನೇ ವರ್ಷ ನಿರಾಶೆ ಅನುಭವಿಸಿದರು. 2024ರಲ್ಲಿ ಚೀನಾದ ವೀ ಯಿ ಜೊತೆಗೆ ಅಗ್ರ ಸ್ಥಾನದಲ್ಲಿ ಟೈ ಮಾಡಿಕೊಂಡಿದ್ದರು. ಆದರೆ ಟೈಬ್ರೇಕರ್‌ನಲ್ಲಿ ಚೀನಾದ ಆಟಗಾರನ ವಿರುದ್ಧ ಸೋತಿದ್ದರು.

ವಿಶ್ವನಾಥನ್ ಆನಂದ್ ನಂತರ ಈ ಪ್ರಶಸ್ತಿ ಗೆದ್ದ ಭಾರತದ ಮೊದಲ ಆಟಗಾರನೆಂಬ ಗೌರವಕ್ಕೆ ಪ್ರಜ್ಞಾನಂದ ಪಾತ್ರರಾದರು. ಈ ಹಿಂದೆ ಕೋರಸ್ ಚೆಸ್ ಟೂರ್ನಿ ಎಂಬ ಹೆಸರು ಹೊಂದಿದ್ದ ಈ ಟೂರ್ನಿಯನ್ನು ಆನಂದ್ 2003, 2004 ಹಾಗೂ 2006ರಲ್ಲಿ ಗೆದ್ದುಕೊಂಡಿದ್ದರು. 1989 ಹಾಗೂ 1998ರಲ್ಲಿ ಅವರು ಈ ಪ್ರಶಸ್ತಿಯನ್ನು ಹಂಚಿಕೊಂಡಿದ್ದರು.

‘‘ನಾನು ಇನ್ನೂ ಆ ಒತ್ತಡದ ಗುಂಗಿನಿಂದ ಹೊರ ಬಂದಿಲ್ಲ. ಈ ಸಂತಸವನ್ನು ಹೇಗೆ ಬಣ್ಣಿಸಬೇಕೆಂದು ತಿಳಿಯುತ್ತಿಲ್ಲ. ನಾನು ಗೆಲ್ಲುವೆನೆಂಬ ನಿರೀಕ್ಷೆ ಇರಲಿಲ್ಲ. ಫಲಿತಾಂಶ ಹೇಗೋ ನನ್ನ ಕಡೆ ವಾಲಿತು ’’ಎಂದು ಟೂರ್ನಿಯ ಅಧಿಕೃತ ವೆಬ್‌ಸೈಟ್‌ಗೆ ಪ್ರಜ್ಞಾನಂದ ತಿಳಿಸಿದ್ದಾರೆ.

ಟಾಟಾ ಸ್ಟೀಲ್ ಪ್ರಶಸ್ತಿಯನ್ನು ಗೆಲ್ಲುವುದು ನಿಮ್ಮ ಯುವ ವೃತ್ತಿಜೀವನದ ಪ್ರಮುಖ ಅಂಶವಾಗಿದೆಯೇ ಎಂದು ನಿರೂಪಕಿ ಫಿಯೋನಾ ಸ್ಟೀಲ್ ಆಂಟೋನಿ ಕೇಳಿದಾಗ, ‘‘ಹೌದು, ಖಂಡಿತ, ನಾನು ಇಲ್ಲಿಗೆ ಬಂದಾಗ ಈ ಪಂದ್ಯವನ್ನು ಗೆಲ್ಲಬೇಕೆಂದು ಬಯಸಿದ್ದೆ. ಆದರೆ ಸ್ಪರ್ಧೆ ತುಂಬಾ ಕಠಿಣವಾಗಿತ್ತು. ನಿನ್ನೆಯ ತನಕವೂ ಪ್ರಶಸ್ತಿ ಬಗ್ಗೆ ಯೋಚಿಸಿರಲಿಲ್ಲ. ನನಗೆ ನಿಜವಾಗಿಯೂ ಸಂತೋಷವಾಗಿದೆ’’ಎಂದು ಪ್ರಜ್ಞಾನಂದ ಹೇಳಿದರು.

ಗುಕೇಶ್ ಅವರನ್ನು ಸೋಲಿಸಿದ್ದಕ್ಕಾಗಿ ನನ್ನ ಆತ್ಮೀಯ ಸ್ನೇಹಿತ ಅರ್ಜುನ್ ಎರಿಗೆಸಿಗೆ ಬಹುಮಾನ ನೀಡಬೇಕೆಂದು ಭಾರತೀಯ ಪ್ರತಿಭೆ ಪ್ರಜ್ಞಾನಂದ ಪ್ರಶಸ್ತಿ ಸ್ವೀಕರಿಸಿದ ನಂತರ ತಮಾಷೆ ಮಾಡಿದರು.

ಚಾಲೆಂಜರ್ ವಿಭಾಗದಲ್ಲಿ ಝೆಕ್ ಗಣರಾಜ್ಯದ ಥಾಯ್ ಡೈ ವ್ಯಾನ್ ನುಯೆನ್ ಅಝರ್‌ಬೈಜಾನ್‌ನ ಐಡಿನ್‌ರನ್ನು ಟೈ-ಬ್ರೇಕರ್‌ನಲ್ಲಿ ರೋಚಕವಾಗಿ ಮಣಿಸಿದರು. ಈ ಗೆಲುವಿನೊಂದಿಗೆ ಅವರು 2026ರ ಮಾಸ್ಟರ್ಸ್ ಈವೆಂಟ್‌ನಲ್ಲಿ ಸ್ಥಾನ ಪಡೆದರು.

ಭಾರತದ ಆರ್.ವೈಶಾಲಿ 13ರಲ್ಲಿ 6 ಅಂಕ ಗಳಿಸಿ 9ನೇ ಸ್ಥಾನ ಪಡೆದರು.13ರಲ್ಲಿ 3.5 ಅಂಕ ಗಳಿಸಿದ ದಿವ್ಯಾ ದೇಶ್‌ಮುಖ್ 14 ಆಟಗಾರ್ತಿಯರ ಪೈಕಿ ಕೊನೆಯ ಸ್ಥಾನ ಪಡೆದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News