×
Ad

ಟೆಸ್ಟ್ ಕ್ರಿಕೆಟ್‌ ನ ಶತಕವೀರರ ಪಟ್ಟಿಯಲ್ಲಿ ಟಾಪ್-5ರಲ್ಲಿ ಸ್ಥಾನ | ರಾಹುಲ್ ದ್ರಾವಿಡ್ ದಾಖಲೆ ಮುರಿದ ಜೋ ರೂಟ್

Update: 2025-07-11 22:02 IST

ಜೋ ರೂಟ್ | PC : X 

ಲಂಡನ್: ಮೂರನೇ ಟೆಸ್ಟ್ ಪಂದ್ಯದ 2ನೇ ದಿನವಾದ ಶುಕ್ರವಾರ ಔಟಾಗದೆ 99 ರನ್‌ ನಿಂದ ಬ್ಯಾಟಿಂಗ್ ಮುಂದುವರಿಸಿದ ಇಂಗ್ಲೆಂಡ್‌ನ ಬ್ಯಾಟಿಂಗ್ ಮಾಂತ್ರಿಕ ಜೋ ರೂಟ್ ಅವರು ಭಾರತದ ವೇಗದ ಬೌಲರ್ ಜಸ್‌ ಪ್ರಿತ್ ಬುಮ್ರಾ ಎಸೆದ ದಿನದ ಮೊದಲ ಎಸೆತವನ್ನು ಬೌಂಡರಿ ಗೆರೆ ದಾಟಿಸಿ ತನ್ನ 37ನೇ ಶತಕ ಪೂರೈಸಿದರು.

ರೂಟ್ ಶತಕ ತಲುಪಿದ ತಕ್ಷಣ ಲಾರ್ಡ್ಸ್ ಮೈದಾನದಲ್ಲಿ ನೆರೆದಿದ್ದ ಪ್ರೇಕ್ಷಕರು ‘ರೂಟ್’ಎಂದು ಒಗ್ಗಟ್ಟಿನಿಂದ ಕೂಗಿ ಹುರಿದುಂಬಿಸಿದರು.

ಈ ಶತಕದ ಮೂಲಕ ರೂಟ್ ಅವರು ಕ್ರಿಕೆಟ್‌ ನ ತವರಿನಲ್ಲಿ ತನ್ನ ಶ್ರೇಷ್ಠ ಪ್ರದರ್ಶನ ಮುಂದುವರಿಸಿದರು. ರೂಟ್ ಅವರು ಲಾರ್ಡ್ಸ್ ಕ್ರೀಡಾಂಗಣದಲ್ಲಿ ಹಿಂದಿನ 3 ಟೆಸ್ಟ್ ಪಂದ್ಯಗಳಲ್ಲಿ 143, 103 ಹಾಗೂ ಔಟಾಗದೆ 100 ರನ್ ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಮೈದಾನದಲ್ಲಿ ಸತತ ಮೂರು ಶತಕಗಳನ್ನು ಗಳಿಸಿದ 3ನೇ ಬ್ಯಾಟರ್ ಎನಿಸಿಕೊಂಡರು. ಲೆಜೆಂಡ್‌ ಗಳಾದ ಜಾಕ್ ಹೊಬ್ಸ್(1912-26)ಹಾಗೂ ಮೈಕಲ್ ವಾನ್(2004-05)ಈ ಸಾಧನೆ ಮಾಡಿದ್ದಾರೆ.

ಭಾರತ ವಿರುದ್ಧ ತನ್ನ 11ನೇ ಶತಕವನ್ನು ಗಳಿಸಿದ ರೂಟ್ ತನ್ನ ದಾಖಲೆಯನ್ನು ಉತ್ತಮಪಡಿಸಿಕೊಂಡರು. ಆಸ್ಟ್ರೇಲಿಯದ ಸ್ಟೀವ್ ಸ್ಮಿತ್ ಕೂಡ ಭಾರತದ ವಿರುದ್ಧ 11 ಶತಕಗಳನ್ನು ಗಳಿಸಿದ್ದಾರೆ.

11 ಶತಕಗಳನ್ನು ಗಳಿಸಲು ರೂಟ್ 60 ಇನಿಂಗ್ಸ್‌ ಗಳಲ್ಲಿ ಆಡಿದ್ದರೆ, ಸ್ಮಿತ್ ಕೇವಲ 46 ಇನಿಂಗ್ಸ್‌ ಗಳನ್ನು ಆಡಿದ್ದರು.

ಶತಕ ಗಳಿಸುವ ಮೂಲಕ ರೂಟ್ ಅವರು ಸಾರ್ವಕಾಲಿಕ ಟೆಸ್ಟ್ ಶತಕವೀರರ ಸಾಲಿಗೆ ಸೇರಿದರು.

ತನ್ನ 37ನೇ ಶತಕವನ್ನು ಸಿಡಿಸಿರುವ ರೂಟ್ ಅವರು ರಾಹುಲ್ ದ್ರಾವಿಡ್ ಹಾಗೂ ಸ್ಟೀವ್ ಸ್ಮಿತ್(ಇಬ್ಬರೂ 36 ಶತಕ)ದಾಖಲೆಯನ್ನು ಮುರಿದರು. ಈ ಮೂಲಕ ಅಗ್ರ-5ರಲ್ಲಿ ಸ್ಥಾನ ಪಡೆದರು.

►ಟೆಸ್ಟ್ ಕ್ರಿಕೆಟ್‌ ನಲ್ಲಿ ಗರಿಷ್ಠ ಶತಕ ಗಳಿಸಿದ ಬ್ಯಾಟರ್‌ ಗಳು

ಸಚಿನ್ ತೆಂಡುಲ್ಕರ್-51

ಜಾಕಸ್ ಕಾಲಿಸ್-45

ರಿಕಿ ಪಾಂಟಿಂಗ್-41

ಕುಮಾರ ಸಂಗಕ್ಕರ-38

ಜೋ ರೂಟ್-37

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News