ಸಾರ್ವಕಾಲಿಕ ಶ್ರೇಷ್ಠ ಸ್ಮರಣೀಯ ಬ್ಯಾಟಿಂಗ್ ಪ್ರದರ್ಶನಗಳು
Photo: twitter/aclasscricket92
ಮುಂಬೈ: ಅಫ್ಘಾನಿಸ್ತಾನ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡವು ರೋಚಕ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಗ್ಲೆನ್ ಮ್ಯಾಕ್ಸ್ ವೆಲ್ ಅವರ ಅಜೇಯ 201 ರನ್ ಗಳ ಬ್ಯಾಟಿಂಗ್ ಕುರಿತು ವಿಶ್ವಾದ್ಯಂತ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಈ ಹಿನ್ನೆಲೆಯಲ್ಲಿ 10 ಸಾರ್ವಕಾಲಿಕ ಶ್ರೇಷ್ಠ ಸ್ಮರಣೀಯ ಪ್ರದರ್ಶನಗಳ ಕುರಿತು ಒಂದು ಹಿನ್ನೋಟ:
ಗ್ಲೆನ್ ಮ್ಯಾಕ್ಸ್ ವೆಲ್: 2023ರ ವಿಶ್ವಕಪ್ ನಲ್ಲಿ ಅಫ್ಘಾನಿಸ್ತಾನ ತಂಡದೆದುರು ಸಿಡಿಸಿದ ಅಜೇಯ 201 ರನ್
ವಿಶ್ವಕಪ್ ಕ್ರಿಕೆಟ್ 2023ರಲ್ಲಿ ಮಂಗಳವಾರ ಅಫ್ಘಾನಿಸ್ತಾನದ ವಿರುದ್ಧ ಐದು ಬಾರಿಯ ವಿಶ್ವ ಚಾಂಪಿಯನ್ ಆಸ್ಟ್ರೇಲಿಯ ತಂಡವು ಅಮೋಘ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್, ವಿಶ್ವಕಪ್ ನ ಏಕದಿನ ಪಂದ್ಯವೊಂದರಲ್ಲಿ ಸಾರ್ವಕಾಲಿಕ ಶ್ರೇಷ್ಠ ಅಜೇಯ 201 ರನ್ ಗಳಿಸುವ ಮೂಲಕ ಸ್ಮರಣೀಯ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ.
ಅಫ್ಘಾನಿಸ್ತಾನ ನೀಡಿದ್ದ 292 ರನ್ ಗಳ ಗುರಿಯನ್ನು ಬೆನ್ನಟ್ಟಿದ್ದ ಆಸ್ಟ್ರೇಲಿಯ ತಂಡವು ಒಂಬತ್ತನೇ ಓವರ್ ನಲ್ಲಿ ಕೇವಲ 49 ರನ್ ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟ ಸ್ಥಿತಿಯಲ್ಲಿದ್ದಾಗ, ಬಹುತೇಕರು ಆಸ್ಟ್ರೇಲಿಯ ತಂಡದ ಗೆಲುವಿನ ಸಾಧ್ಯತೆಯನ್ನು ಊಹಿಸಿಯೇ ಇರಲಿಲ್ಲ.
ಆದರೆ, ಕೇವಲ 128 ಬಾಲ್ ಗಳಲ್ಲಿ 10 ಸಿಕ್ಸರ್ ಹಾಗೂ 21 ಬೌಂಡರಿಗಳನ್ನು ಸಿಡಿಸಿ, ಅಜೇಯ 201 ರನ್ ದಾಖಲಿಸುವ ಮೂಲಕ ಸ್ಫೋಟಕ ಬಲಗೈ ಬ್ಯಾಟರ್ ಆದ ಗ್ಲೆನ್ ಮ್ಯಾಕ್ಸ್ ವೆಲ್ ಅಫ್ಘಾನಿಸ್ತಾನದ ಕೈನಿಂದ ಪಂದ್ಯವನ್ನು ಅಕ್ಷರಶಃ ಕಸಿದುಕೊಂಡರು.
ಅಫ್ಘಾನಿಸ್ತಾನ ಒಡ್ಡಿದ್ದ ಗುರಿಯು ಆಸ್ಟ್ರೇಲಿಯಾ ತಂಡದ ಕೈಗೆಟಕುವ ಅಳತೆಯಲ್ಲೇ ಇದ್ದಾಗ ಒಂದು ಕಾಲಿನ ಸ್ನಾಯು ಸೆಳೆತಕ್ಕೆ ಮ್ಯಾಕ್ಸ್ ವೆಲ್ ತುತ್ತಾದರೂ, ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಪ್ರೇಮಿಗಳಿಗೆ ರಸದೌತಣ ನೀಡಿದರು.
ಸಿಕ್ಸರ್ ಸಿಡಿಸುವ ಮೂಲಕ ಆಸ್ಟ್ರೇಲಿಯಾ ತಂಡದ ಗೆಲುವನ್ನು ಗ್ಲೆನ್ ಮ್ಯಾಕ್ಸ್ ವೆಲ್ ಖಾತರಿಗೊಳಿಸಿದ ನಂತರ ಪ್ರತಿಕ್ರಿಯಿಸಿದ ಮಾಜಿ ನ್ಯೂಝಿಲೆಂಡ್ ವಿಕೆಟ್ ಕೀಪರ್ ಇಯಾನ್ ಸ್ಮಿತ್, “ನಂಬಲಸಾಧ್ಯ ಗ್ಲೆನ್ ಮ್ಯಾಕ್ಸ್ ವೆಲ್. ನೀವು ಕ್ರಿಕೆಟ್ ನಲ್ಲಿ ನೋಡಬಹುದಾದ ಕೆಲವೇ ಪ್ರದರ್ಶನಗಳ ಪೈಕಿ ಇದೂ ಒಂದು. ದಿಗ್ಭ್ರಮೆಗೊಳಿಸುವ, ಚೇತೋಹಾರಿ ಪ್ರದರ್ಶನ” ಎಂದು ಅವರನ್ನು ಶ್ಲಾಘಿಸಿದ್ದಾರೆ.
ಗ್ಲೆನ್ ಮ್ಯಾಕ್ಸ್ ವೆಲ್ ಹಾಗೂ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕುಮಿನ್ಸ್ ನಡುವಿನ ಅಜೇಯ 202 ರನ್ ಗಳ ಜೊತೆಯಾಟದಲ್ಲಿ ಪ್ಯಾಟ್ ಕುಮಿನ್ಸ್ ನೀಡಿದ ಕಾಣಿಕೆ ಕೇವಲ 12 ರನ್ ಮಾತ್ರ ಎಂಬುದೂ ವಿಶ್ವ ಕ್ರಿಕೆಟ್ ಇತಿಹಾಸದಲ್ಲಿ ಅಚ್ಚಳಿಯದೆ ದಾಖಲಾಗಲಿದೆ.
ಪಂದ್ಯದಲ್ಲಿ ಆಸ್ಟ್ರೇಲಿಯ ತಂಡವು ಗೆದ್ದು, ಸೆಮಿಫೈನಲ್ ಸ್ಥಾನವನ್ನು ಭದ್ರಪಡಿಸಿಕೊಂಡ ನಂತರ ಪ್ರತಿಕ್ರಿಯಿಸಿದ ಪ್ಯಾಟ್ ಕುಮಿನ್ಸ್, “ನಾನು ಈವರೆಗೆ ನೋಡಿರುವ ಅತ್ಯುದ್ಭುತ ಏಕದಿನ ಪಂದ್ಯದ ಇನಿಂಗ್ಸ್ ಅದು ಎಂದು ನನ್ನ ಭಾವನೆ. ಇಂತಹ ಪ್ರದರ್ಶನವನ್ನು ನಾನೆಂದೂ ಕಂಡಿರಲಿಲ್ಲ. ಇದು ಬಹುಶಃ ಎಂದೆಂದಿಗೂ ಅತ್ಯುದ್ಭುತ ಏಕದಿನ ಪಂದ್ಯದ ಇನಿಂಗ್ಸ್ ಆಗಿದೆ” ಎಂದು ಹೇಳಿದ್ದಾರೆ.
ರೋಹಿತ್ ಶರ್ಮ: 2014ರಲ್ಲಿ ಶ್ರೀಲಂಕಾ ತಂಡದೆದುರು ಗಳಿಸಿದ 264 ರನ್
2014ರಲ್ಲಿ ಶ್ರೀಲಂಕಾ ತಂಡದೆದುರು ಭಾರತ ತಂಡವು ಪೇರಿಸಿದ್ದ 404 ರನ್ ಗಳ ಬೃಹತ್ ಮೊತ್ತದಲ್ಲಿ ತಾವೊಬ್ಬರೇ 264 ರನ್ ಸಿಡಿಸಿದ್ದ ರೋಹಿತ್ ಶರ್ಮ, ಆ ಮೂಲಕ ಏಕದಿನ ಪಂದ್ಯಗಳಲ್ಲಿ ಇದುವರೆಗೆ ಅತ್ಯಧಿಕ ಮೊತ್ತವನ್ನು ದಾಖಲಿಸಿರುವ ಬ್ಯಾಟರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಶ್ರೀಲಂಕಾ ತಂಡದ ಬೌಲರ್ ನುವಾನ್ ಕುಲಸೇಕರ ಮಾಡಿದ ಪಂದ್ಯದ ಕೊನೆ ಬಾಲ್ ಅನ್ನು ಲಾಂಗ್ ಆಫ್ ಗೆ ಬಾರಿಸುವ ಪ್ರಯತ್ನದಲ್ಲಿ ಔಟಾಗುವುದಕ್ಕೂ ಮುನ್ನ ಭಾರತದ ಈ ಬಲಗೈ ಬ್ಯಾಟರ್, ಶ್ರೀಲಂಕಾ ಬೌಲರ್ ಗಳು ಎಸೆದ ಬಾಲುಗಳನ್ನು ಕ್ರೀಡಾಂಗಣದ ಮೂಲೆಮೂಲೆಗೂ ಅಟ್ಟಿದ್ದರು.
ರೋಹಿತ್ ಶರ್ಮ ತಮ್ಮ ಈ ದಾಖಲೆಯ ಮೊತ್ತವನ್ನು ಗಳಿಸಲು ಕೇವಲ 173 ಬಾಲ್ ಎದುರಿಸಿದ್ದರು. ಅವರು ತಮ್ಮ ಇನಿಂಗ್ಸ್ ನಲ್ಲಿ 9 ಸಿಕ್ಸರ್ ಹಾಗೂ 33 ಬೌಂಡರಿಗಳನ್ನು ಸಿಡಿಸಿದ್ದರು. ಏಕದಿನ ಪಂದ್ಯವೊಂದರಲ್ಲಿ ಯಾವುದೇ ಬ್ಯಾಟರ್ ಗಳಿಸಿರುವ ಅತಿ ಹೆಚ್ಚು ಬೌಂಡರಿಗಳ ದಾಖಲೆಯು ಈಗಲೂ ರೋಹಿತ್ ಶರ್ಮರ ಹೆಸರಿನಲ್ಲಿಯೇ ಉಳಿದಿದೆ.
ಮಾರ್ಟಿನ್ ಗುಪ್ಟಿಲ್: 2015ರ ವಿಶ್ವಕಪ್ ನಲ್ಲಿ ವೆಸ್ಟ್ ಇಂಡೀಸ್ ತಂಡದೆದುರು ಸಿಡಿಸಿದ ಅಜೇಯ 237 ರನ್
2015ರ ವಿಶ್ವಕಪ್ ನಲ್ಲಿ ವೆಸ್ಟ್ ಇಂಡೀಸ್ ತಂಡದ ವಿರುದ್ಧದ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ತಂಡದ ಆರಂಭಿಕ ಬ್ಯಾಟರ್ ಮಾರ್ಟಿನ್ ಗಪ್ಟಿಲ್ ಅಜೇಯ 237 ರನ್ ಗಳಿಸುವ ಮೂಲಕ ಯಾವುದೇ ವಿಶ್ವಕಪ್ ಪಂದ್ಯಾವಳಿಯಲ್ಲಿ ಗಳಿಸಿದ ಗರಿಷ್ಠ ವೈಯಕ್ತಿಕ ರನ್ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ.
ತಮ್ಮ ಶಕ್ತಿಶಾಲಿ ಪ್ರದರ್ಶನವನ್ನು ದೊಡ್ಡ ಪಂದ್ಯವೊಂದಕ್ಕೆ ಕಾಯ್ದಿರಿಸಿದಂತೆ ಅಂದು ಆಟವಾಡಿದ್ದ ಮಾರ್ಟಿನ್ ಗಪ್ಟಿಲ್, ವೆಸ್ಟ್ ಇಂಡೀಸ್ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ತಂಡಕ್ಕೆ ಗೆಲುವು ತಂದುಕೊಡುವ ಮೂಲಕ ನ್ಯೂಝಿಲ್ಯಾಂಡ್ ತಂಡವು ಅಂದಿನ ವಿಶ್ವಕಪ್ ಫೈನಲ್ ಪ್ರವೇಶಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು.
ಆ ಪಂದ್ಯದ ಇನಿಂಗ್ಸ್ ಉದ್ದಕ್ಕೂ ಬ್ಯಾಟಿಂಗ್ ಮಾಡಿದ್ದ ಮಾರ್ಟಿನ್ ಗಪ್ಟಿಲ್, ಅಜೇಯ 237 ರನ್ ಗಳಿಸಲು ಕೇವಲ 163 ಬಾಲ್ ಗಳನ್ನು ತೆಗೆದುಕೊಂಡಿದ್ದರು. 11 ಸಿಕ್ಸರ್ ಹಾಗೂ 24 ಬೌಂಡರಿಗಳನ್ನು ಸಿಡಿಸುವ ಮೂಲಕ ಎದುರಾಳಿ ತಂಡದ ಬೌಲರ್ ಗಳ ಮೇಲೆ ಸವಾರಿ ಮಾಡಿದ್ದ ಮಾರ್ಟಿನ್ ಗಪ್ಟಿಲ್ ರ ಆ ಇನಿಂಗ್ಸ್, ಆ ವಿಶ್ವಕಪ್ ನ ಮೈಲಿಗಲ್ಲು ಸಾಧನೆಯಾಗಿ ದಾಖಲಾಗಿದೆ.
ಎಬಿ ಡಿ ವಿಲಿಯರ್ಸ್: 2015ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಬಾರಿಸಿದ 149 ರನ್
ವೆಸ್ಟ್ ಇಂಡೀಸ್ ವಿರುದ್ಧ ನಡೆದಿದ್ದ ಆ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ನಾಯಕ ಎಬಿ ಡಿವಿಲಿಯರ್ಸ್, ಕೇವಲ 31 ಬಾಲ್ ಗಳಲ್ಲಿ ಶತಕ ಪೂರೈಸುವ ಮೂಲಕ ಏಕದಿನ ಪಂದ್ಯವೊಂದರಲ್ಲಿ ಅತಿ ವೇಗದ ಶತಕ ಬಾರಿಸಿದ ದಾಖಲೆಗೆ ಭಾಜನರಾಗಿದ್ದಾರೆ. ಈ ದಾಖಲೆ ಈಗಲೂ ಅವರ ಹೆಸರಿನಲ್ಲೇ ಇದೆ.
ಹಲವಾರು ವರ್ಷಗಳ ಕಾಲ ನೆನಪಿನಲ್ಲುಳಿಯುವಂಥ ಆಟವನ್ನು ಪ್ರದರ್ಶಿಸಿದ್ದ ಡಿವಿಲಿಯರ್ಸ್, ಕೇವಲ 44 ಬಾಲ್ ಗಳಲ್ಲಿ 16 ಸಿಕ್ಸರ್ ಮತ್ತು ಒಂಬತ್ತು ಬೌಂಡರಿಗಳ ನೆರವಿನಿಂದ ಬೃಹತ್ 149 ರನ್ ಪೇರಿಸಿದ್ದರು. ಆ ಮೂಲಕ ಏಕದಿನ ಪಂದ್ಯದಲ್ಲಿನ ಬ್ಯಾಟಿಂಗ್ ಮಾದರಿಯನ್ನೇ ಬದಲಿಸಿದ ಹಿರಿಮೆಗೆ ಪಾತ್ರರಾಗಿದ್ದರು.
ಕಪಿಲ್ ದೇವ್: 1983ರ ವಿಶ್ವಕಪ್ ನಲ್ಲಿ ಝಿಂಬಾಬ್ವೆ ತಂಡದೆದುರು ಸಿಡಿಸಿದ್ದ ಅಜೇಯ 175 ರನ್
ಝಿಂಬಾಬ್ವೆ ತಂಡದ ಎದುರಿನ ಪಂದ್ಯದಲ್ಲಿ ಕಪಿಲ್ ದೇವ್ ಅವರು ಕ್ರೀಸಿಗೆ ಆಗಮಿಸಿದಾಗ, ಭಾರತ ತಂಡವು ಕೇವಲ 9 ರನ್ ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿತ್ತು. ಅವರು ಕ್ರೀಸಿಗೆ ಬಂದ ಕೆಲವೇ ಕ್ಷಣಗಳಲ್ಲಿ 17 ರನ್ ಗೆ 5 ವಿಕೆಟ್ ಕಳೆದುಕೊಂಡು ಮತ್ತಷ್ಟು ಸಂಕಷ್ಟಕ್ಕೆ ತುತ್ತಾಗಿತ್ತು.
ಇಂತಹ ಸಂದರ್ಭದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದ ಕಪಿಲ್ ದೇವ್, ತಾವೆದುರಿಸಿದ 138 ಬಾಲ್ ಗಳಲ್ಲಿ ಆರು ಸಿಕ್ಸರ್ ಮತ್ತು 16 ಬೌಂಡರಿಗಳನ್ನು ಸಿಡಿಸುವ ಮೂಲಕ ಭಾರತ ತಂಡದ ಮೊತ್ತವನ್ನು ಆರು ವಿಕೆಟ್ ನಷ್ಟಕ್ಕೆ 266 ರನ್ ಗೆ ತಲುಪಿಸಿದ್ದರು. ನಂತರ ಆ ಪಂದ್ಯದಲ್ಲಿ ಗೆಲುವು ಸಾಧಿಸಿದ್ದ ಭಾರತ ತಂಡವು, ಪ್ರಥಮ ಬಾರಿಗೆ ವಿಶ್ವಕಪ್ ಕ್ರಿಕೆಟ್ ಟ್ರೋಫಿಯನ್ನು ಎತ್ತಿ ಹಿಡಿದಿತ್ತು.
ಹಾಲಿ ವಿಶ್ವಕಪ್ ಪಂದ್ಯಾವಳಿಯಲ್ಲಿ ಅಫ್ಘಾನಿಸ್ತಾನ ತಂಡದೆದುರಿನ ಪಂದ್ಯದಲ್ಲಿ ಆಸ್ಟ್ರೇಲಿಯ ಪರವಾಗಿ ಗ್ಲೆನ್ ಮ್ಯಾಕ್ಸ್ ವೆಲ್ ಅವರು ಅಜೇಯ 201 ಸಿಡಿಸುವವರೆಗೂ ಆರು ಅಥವಾ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದ ಯಾವುದೇ ಬ್ಯಾಟರ್ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗಳಿಸಿದ್ದ ಗರಿಷ್ಠ ಮೊತ್ತದ ದಾಖಲೆ ಅದುವರೆಗೆ ಕಪಿಲ್ ದೇವ್ ಅವರ ಹೆಸರಿನಲ್ಲೇ ಇತ್ತು.
ಆ ಸಂದರ್ಭದಲ್ಲಿನ ಪುರುಷರ ಏಕದಿನ ಪಂದ್ಯವೊಂದರಲ್ಲಿ ದಾಖಲಾಗಿದ್ದ ಗರಿಷ್ಠ ವೈಯಕ್ತಿಕ ಮೊತ್ತವೂ ಕಪಿಲ್ ದೇವ್ ಅವರದ್ದೇ ಆಗಿತ್ತು.
ಕ್ರಿಸ್ ಗೇಲ್: 2015ರ ವಿಶ್ವಕಪ್ ನಲ್ಲಿ ಝಿಂಬಾಬ್ವೆ ತಂಡದ ವಿರುದ್ಧ ಗಳಿಸಿದ 215 ರನ್
ಝಿಂಬಾಬ್ವೆ ತಂಡದ ವಿರುದ್ಧ ದ್ವಿಶತಕ ಬಾರಿಸುವ ಮೂಲಕ ಪುರುಷರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ 200ಕ್ಕೂ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎಂಬ ದಾಖಲೆಗೆ ಕ್ರಿಸ್ ಗೇಲ್ ಪಾತ್ರರಾಗಿದ್ದಾರೆ.
ತಾವೆದುರಿಸಿದ 147 ಬಾಲ್ ಗಳಲ್ಲಿ ಬೌಂಡರಿಗಳಿಗಿಂತ ಸಿಕ್ಸರ್ ಗಳನ್ನೇ ಹೆಚ್ಚು ಸಿಡಿಸಿದ್ದ ಕ್ರಿಸ್ ಗೇಲ್ 215 ರನ್ ಕಲೆ ಹಾಕಿದ್ದರು. ಆ ಇನಿಂಗ್ಸ್ ನಲ್ಲಿ ಅವರು 16 ಸಿಕ್ಸರ್ ಮತ್ತು 10 ಬೌಂಡರಿಗಳನ್ನು ಬಾರಿಸಿದ್ದರು. ಏಕದಿನ ಪಂದ್ಯದಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆ ನಿರ್ಮಿಸುವ ಪ್ರಯತ್ನದಲ್ಲಿ ತಮ್ಮ ಇನಿಂಗ್ಸ್ ನ ಕೊನೆಯ ಬಾಲ್ ಅನ್ನು ಪಾಯಿಂಟ್ ನಲ್ಲಿ ಕ್ಯಾಚಿತ್ತು ಅವರು ನಿರ್ಗಮಿಸಿದ್ದರು.
ಆ್ಯಡಮ್ ಗಿಲ್ ಕ್ರಿಸ್ಟ್: 2007 ರ ವಿಶ್ವಕಪ್ ನಲ್ಲಿ ಶ್ರೀಲಂಕಾ ತಂಡದ ವಿರುದ್ಧ ಗಳಿಸಿದ 149 ರನ್
ಅಂದಿನ ವಿಶ್ವಕಪ್ ಕ್ರಿಕೆಟ್ ಫೈನಲ್ ನಲ್ಲಿ ಮೊದಲಿಗೆ ಬ್ಯಾಟಿಂಗ್ ಗೆ ಇಳಿದಿದ್ದ ಆಸ್ಟ್ರೇಲಿಯ ತಂಡದ ಪರ ಆರಂಭಿಕ ಬ್ಯಾಟರ್ ಆಗಿ ಆಗಮಿಸಿದ್ದ ವಿಕೆಟ್ ಕೀಪರ್ ಬ್ಯಾಟರ್ ಆ್ಯಡಮ್ ಗಿಲ್ ಕ್ರಿಸ್ಟ್, ಪಂದ್ಯದ ಫಲಿತಾಂಶವನ್ನು ನಿರ್ಧರಿಸುವಂಥ ಆಟ ಪ್ರದರ್ಶಿಸಿ ಶ್ರೀಲಂಕಾ ತಂಡದಿಂದ ಪಂದ್ಯವನ್ನು ದೂರ ಒಯ್ದಿದ್ದರು.
ಕೇವಲ 104 ಬಾಲ್ ಗಳಲ್ಲಿ ಎಂಟು ಸಿಕ್ಸರ್ ಗಳು ಹಾಗೂ 13 ಬೌಂಡರಿಗಳನ್ನು ಸಿಡಿಸುವ ಮೂಲಕ ಆ್ಯಡಮ್ ಗಿಲ್ ಕ್ರಿಸ್ಟ್ 149 ರನ್ ಬಾರಿಸಿದ್ದರು. ಆಸ್ಟ್ರೇಲಿಯ ತಂಡದ ಇತರ ತಾರಾ ಬ್ಯಾಟರ್ ಗಳ ಅವರಿಗೆ ನೆರವು ನೀಡುವ ಪಾತ್ರವನ್ನು ನಿರ್ವಹಿಸಿದ್ದರು.
ಆ್ಯಡಮ್ ಗಿಲ್ ಕ್ರಿಸ್ಟ್ ಆ ಪಂದ್ಯದ 31ನೇ ಓವರ್ ನಲ್ಲಿ ಔಟಾದರಾದರೂ, ವಿಶ್ವಕಪ್ ಫೈನಲ್ ಪಂದ್ಯವೊಂದರಲ್ಲಿ ಗರಿಷ್ಠ ಮೊತ್ತ ಗಳಿಸಿದ ದಾಖಲೆ ಈಗಲೂ ಅವರ ಹೆಸರಿನಲ್ಲೇ ಇದೆ. ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ ತಂಡವು ಮೂರನೆಯ ವಿಶ್ವಕಪ್ ಟ್ರೋಫಿಯನ್ನು ಹೆಮ್ಮೆಯಿಂದ ಎತ್ತಿ ಹಿಡಿಯುವಂತಾಗಿತ್ತು.
ವಿವಿಯನ್ ರಿಚರ್ಡ್ಸ್: 1984ರಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಗಳಿಸಿದ ಅಜೇಯ 189 ರನ್
1984ರಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ವೆಸ್ಟ್ ಇಂಡೀಸ್ ನ ವಿವಿಯನ್ ರಿಚರ್ಡ್ಸ್ ಸಿಡಿಸಿದ ಅಜೇಯ 189 ರನ್, ಸುಮಾರು 13 ವರ್ಷಗಳ ಕಾಲ ಅಜೇಯ ದಾಖಲೆಯಾಗಿಯೇ ಉಳಿದಿತ್ತು. ಆ ದಾಖಲೆಯು ಹಲವಾರು ವರ್ಷಗಳ ಕಾಲ ಇತರರ ಪಾಲಿಗೆ ಮೈಲಿಗಲ್ಲಾಗಿತ್ತು.
ಆ ಪಂದ್ಯದಲ್ಲಿ ದೀರ್ಘಕಾಲ ಏಕಾಂಗಿಯಾಗಿ ಹೋರಾಡಿದ್ದ ವಿವಿಯನ್ ರಿಚರ್ಡ್ಸ್, 170 ಬಾಲ್ ಗಳಲ್ಲಿ ಐದು ಸಿಕ್ಸರ್ ಹಾಗೂ 21 ಬೌಂಡರಿಗಳ ಮೂಲಕ ಅಜೇಯ 189 ರನ್ ಗಳಿಸಿದ್ದರು. ವೆಸ್ಟ್ ಇಂಡೀಸ್ ತಂಡವು ಒಂಬತ್ತು ವಿಕೆಟ್ ಕಳೆದುಕೊಂಡು ಗಳಿಸಿದ್ದ 272 ರನ್ ಗಳ ಪೈಕಿ 26 ರನ್ ಅವರ ನಂತರದ ಗರಿಷ್ಠ ಮೊತ್ತವಾಗಿತ್ತು. ಅಷ್ಟರ ಮಟ್ಟಿಗೆ ವಿವಿಯನ್ ರಿಚರ್ಡ್ಸ್ ಪಂದ್ಯದುದ್ದಕ್ಕೂ ಏಕಾಂಗಿಯಾಗಿ ಹೋರಾಡಿದ್ದರು.
ಆ ಸಂದರ್ಭದಲ್ಲಿ ಯಾವುದೇ ತಂಡದ ಪಾಲಿಗೆ ಅತ್ಯಧಿಕ ಮೊತ್ತವಾಗಿದ್ದ 272 ರನ್ ಅನ್ನು ಕಲೆ ಹಾಕಿದ್ದ ವೆಸ್ಟ್ ಇಂಡೀಸ್ ತಂಡವು, ಎದುರಾಳಿ ಇಂಗ್ಲೆಂಡ್ ತಂಡವನ್ನು ಕೇವಲ 168 ರನ್ ಗೆ ಆಲೌಟ್ ಮಾಡಿತ್ತು. ಆ ಪಂದ್ಯದಲ್ಲಿ ಆಫ್ ಸ್ಪಿನ್ನರ್ ಅಗಿಯೂ ಬೌಲಿಂಗ್ ಮಾಡಿದ್ದ ವಿವಿಯನ್ ರಿಚರ್ಡ್ಸ್, 45 ರನ್ ನೀಡಿ 2 ವಿಕೆಟ್ ಕಬಳಿಸಿದ್ದರು.
ರಿಕಿ ಪಾಂಟಿಂಗ್: 2003ರ ವಿಶ್ವಕಪ್ ಫೈನಲ್ ನಲ್ಲಿ ಭಾರತ ತಂಡದೆದುರು ಸಿಡಿಸಿದ್ದ ಅಜೇಯ 140 ರನ್
ಆ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಆದರೆ, ಭಾರತ ತಂಡದ ನಿರ್ಧಾರವು ಹುಸಿ ಹೋಗುವಂತೆ ಬ್ಯಾಟಿಂಗ್ ಪ್ರದರ್ಶಿಸಿದ್ದ ಆಸ್ಟ್ರೇಲಿಯ ತಂಡವು ಕೇವಲ 2 ವಿಕೆಟ್ ಕಳೆದುಕೊಂಡು 359 ರನ್ ಗಳಿಸಿತ್ತು. ಆ ಮೂಲಕ ವಿಶ್ವಕಪ್ ಫೈನಲ್ ಪಂದ್ಯವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತ್ತು.
ಪಂದ್ಯದ ದಿಕ್ಕನ್ನು ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ನಾಯಕ ರಿಕಿ ಪಾಂಟಿಂಗ್, ಕಲಾತ್ಮಕ ಹಾಗೂ ಆಕ್ರಮಣಕಾರಿ ಬ್ಯಾಟಿಂಗ್ ಗಳೆರಡನ್ನೂ ಪ್ರದರ್ಶಿಸಿ 121 ಬಾಲ್ ಗಳಲ್ಲಿ ಅಜೇಯ 140 ರನ್ ಬಾರಿಸಿದ್ದರು.
ಆ ಪಂದ್ಯದಲ್ಲಿ ಪಾಂಟಿಂಗ್ ಬಾರಿಸಿದ ಎಂಟು ಸಿಕ್ಸರ್ ಗಳು ಅಲ್ಲಿಯವರೆಗಿನ ವಿಶ್ವಕಪ್ ಇನಿಂಗ್ಸ್ ಒಂದರಲ್ಲಿ ಯಾವುದೇ ಬ್ಯಾಟರ್ ಸಿಡಿಸಿದ್ದ ಅತ್ಯಧಿಕ ಸಿಕ್ಸರ್ ಆಗಿದ್ದವು. ಇದಲ್ಲದೆ ಅವರು ನಾಲ್ಕು ಬೌಂಡರಿಗಳನ್ನೂ ಹೊಡೆದಿದ್ದರು.
ಆವರೆಗಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಯಾವುದೇ ಬ್ಯಾಟರ್ ಗಳಿಸಿದ ಗರಿಷ್ಠ ಮೊತ್ತದ ದಾಖಲೆಯನ್ನು ರಿಕಿ ಪಾಂಟಿಂಗ್ ಬರೆಯುವ ಮೂಲಕ ಆಸ್ಟ್ರೇಲಿಯಾ ತಂಡವು ವಿಶ್ವಕಪ್ ಟ್ರೋಫಿಗೆ ಮುತ್ತಿಟ್ಟಿತ್ತು.
ಕೆವಿನ್ ಓ’ಬ್ರಿಯನ್: 2011ರ ವಿಶ್ವಕಪ್ ನಲ್ಲಿ ಇಂಗ್ಲೆಂಡ್ ತಂಡದೆದುರು ಗಳಿಸಿದ 113 ರನ್
ಐರ್ಲೆಂಡ್ ತಂಡವು ಇಂಗ್ಲೆಂಡ್ ತಂಡದ ವಿರುದ್ಧ ಗೆಲುವು ಸಾಧಿಸುವ ಮೂಲಕ ಪ್ರಪ್ರಥಮ ಏಕದಿನ ಪಂದ್ಯದ ಗೆಲುವು ಸಾಧಿಸುವಲ್ಲಿ ಮಧ್ಯಮ ಕ್ರಮಾಂಕದ ಕೆವಿನ್ ಓಬ್ರಿಯನ್ ಮಹತ್ವದ ಪಾತ್ರ ನಿರ್ವಹಿಸಿದ್ದರು. ಅದರಲ್ಲೂ ಆ ಗೆಲುವು ವಿಶ್ವಕಪ್ ನಲ್ಲಿ ದಾಖಲಾಗಿತ್ತು.
ಓ’ಬ್ರಿಯನ್ ಕೇವಲ 50 ಎಸೆತಗಳಲ್ಲಿ ತಮ್ಮ ಶತಕ ದಾಖಲಿಸಿದ್ದರು. ಆ ಶತಕವು ಅದುವರೆಗಿನ ವಿಶ್ವಕಪ್ ಗಳ ಪೈಕಿ ಅತಿ ವೇಗದ ಶತಕವಾಗಿ ದಾಖಲಾಗಿದೆ. ನಂತರ 63 ಬಾಲ್ ಗಳಲ್ಲಿ 6 ಸಿಕ್ಸರ್ ಹಾಗೂ 13 ಬೌಂಡರಿಗಳ ನೆರವಿನಿಂದ 113 ರನ್ ಗಳಿಸಿ ಅವರು ಔಟಾಗಿದ್ದರು. ಆ ಪಂದ್ಯದಲ್ಲಿನ ಗೆಲುವು ಏಕದಿನ ಪಂದ್ಯವೊಂದರಲ್ಲಿ ದೊಡ್ಡ ಮೊತ್ತವೊಂದನ್ನು ಬೆನ್ನತ್ತಿ ಸಾಧಿಸಿದ ಗೆಲುವುಗಳ ಪೈಕಿ ಒಂದಾಗಿ ಕ್ರಿಕೆಟ್ ಇತಿಹಾಸದಲ್ಲಿ ದಾಖಲಾಗಿದೆ.