×
Ad

2030, 2034ರ ಫಿಫಾ ವಿಶ್ವಕಪ್ ಆತಿಥ್ಯ ದೇಶಗಳ ಹೆಸರು ಇಂದು ಅಧಿಕೃತವಾಗಿ ಪ್ರಕಟ

Update: 2024-12-10 22:09 IST

ಫಿಫಾ | PC : PTI 

ಹೊಸದಿಲ್ಲಿ: 2030 ಹಾಗೂ 2034ರ ವಿಶ್ವಕಪ್ ಆತಿಥ್ಯವಹಿಸಿಕೊಳ್ಳುವ ರಾಷ್ಟ್ರಗಳ ಹೆಸರುಗಳನ್ನು ಜಾಗತಿಕ ಫುಟ್ಬಾಲ್ ಆಡಳಿತ ಮಂಡಳಿ ಫಿಫಾ ಬುಧವಾರ ಅಧಿಕೃತವಾಗಿ ಪ್ರಕಟಿಸಲಿದೆ.

2030ರ ಪಂದ್ಯಾವಳಿಗಾಗಿ ಮೊರಾಕೊ, ಸ್ಪೇನ್ ಹಾಗೂ ಪೋರ್ಚುಗಲ್ ಜಂಟಿ ಬಿಡ್ ಸಲ್ಲಿಸಿದ್ದು, ಈ ಮೂರು ದೇಶಗಳು 2030ರ ವಿಶ್ವಕಪ್ ಆತಿಥ್ಯದ ಹಕ್ಕನ್ನು ಗಿಟ್ಟಿಸಿಕೊಳ್ಳುವ ನಿರೀಕ್ಷೆ ಇದೆ. ಸೌದಿ ಅರೇಬಿಯವು 2034ರಲ್ಲಿ ವಿಶ್ವಕಪ್ ಆತಿಥ್ಯವಹಿಸುವ ಸಾಧ್ಯತೆ ಇದೆ.

ವರ್ಚುವಲ್ ಫಿಫಾ ಕಾಂಗ್ರೆಸ್‌ನಲ್ಲಿ ಆತಿಥೇಯ ಹಕ್ಕುಗಳನ್ನು ಮತದ ಮೂಲಕ ನಿರ್ಧರಿಸಲಾಗುತ್ತದೆ. ಆದರೆ ಎರಡೂ ಬಿಡ್‌ಗಳು ಸ್ಪರ್ಧೆಯನ್ನು ಎದುರಿಸದ ಕಾರಣ ಫಲಿತಾಂಶ ಪೂರ್ವ ನಿರ್ಧರಿತವಾಗಿ ಕಂಡುಬರುತ್ತಿದೆ.

2030ರ ವಿಶ್ವಕಪ್ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದ್ದು, ಈ ಪಂದ್ಯಾವಳಿಯಲ್ಲಿ ಶತಮಾನೋತ್ಸವ ಆಚರಿಸಲಾಗುತ್ತದೆ. 1930ರಲ್ಲಿ ಉರುಗ್ವೆಯಲ್ಲಿ ಉದ್ಘಾಟನಾ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿ ನಡೆದಿತ್ತು.

ಮೊರಾಕೊ, ಸ್ಪೇನ್ ಹಾಗೂ ಪೋರ್ಚುಗಲ್ 2030ರ ವಿಶ್ವಕಪ್ ಆತಿಥ್ಯಕ್ಕೆ ಬಿಡ್ ಸಲ್ಲಿಸಿರುವ ಏಕೈಕ ಸ್ಪರ್ಧಿಯಾಗಿದೆ ಎಂದು ಒಂದು ವರ್ಷದ ಹಿಂದೆ ಫಿಫಾ ದೃಢಪಡಿಸಿತ್ತು. ಇತರ ಸಂಭಾವ್ಯ ಬಿಡ್‌ಗಳನ್ನು ಹಿಂಪಡೆಯಲಾಗಿತ್ತು.

ಯುರೋ 2028ರ ಅನ್ನು ಆಯೋಜಿಸುವುದರ ಮೇಲೆ ಗಮನ ಕೇಂದ್ರೀಕರಿಸಲು ಬ್ರಿಟಿಷ್ ಹಾಗೂ ಐರಿಷ್‌ನ ಜಂಟಿ ಬಿಡ್ ಅನ್ನು ಕೈಬಿಡಲಾಯಿತು.

2034ರ ವಿಶ್ವಕಪ್‌ಗೆ ಸಂಬಂಧಿಸಿದಂತೆ ಏಶ್ಯ ಅಥವಾ ಒಶಿಯಾನಿಯಾದಿಂದ ಮಾತ್ರ ಫಿಫಾ, ಬಿಡ್‌ಗಳನ್ನು ಆಹ್ವಾನಿಸಿತು. 2026ರ ವಿಶ್ವಕಪ್ ಅನ್ನು 48 ತಂಡಗಳಿಗೆ ವಿಸ್ತರಿಸಲಾಗಿದ್ದು, ಉತ್ತರ ಅಮೆರಿಕದಾದ್ಯಂತ ಇದನ್ನು ಆಯೋಜಿಸಲಾಗುತ್ತದೆ.

ಸಂಭಾವ್ಯ ಬಿಡ್‌ದಾರರಿಗೆ ಉಮೇದುವಾರಿಕೆಗಳನ್ನು ಸಲ್ಲಿಸಲು ಕಡಿಮೆ ಸಮಯವನ್ನು ಫಿಫಾ ನೀಡಿತು. ಇದು ವಿವಾದಕ್ಕೆ ಕಾರಣವಾಯಿತು. ಆಸ್ಟ್ರೇಲಿಯ ಹಾಗೂ ಇಂಡೋನೇಶ್ಯ ತಕ್ಷಣವೇ ತಮ್ಮ ಬಿಡ್ ಅನ್ನು ಹಿಂಪಡೆದವು.

ಇದರಿಂದಾಗಿ ಸೌದಿ ಅರೇಬಿಯಾ ಏಕೈಕ ಸ್ಪರ್ಧಿಯಾಗಿ ಉಳಿದಿದೆ. 2022ರ ನಂತರ ಗಲ್ಫ್ ನಾಡಿಗೆ ವಿಶ್ವಕಪ್ ಮರಳಲು ದಾರಿ ಮಾಡಿಕೊಡಲಾಗಿದೆ. 2022ರಲ್ಲಿ ಖತರ್ ದೇಶವು ವಿಶ್ವಕಪ್ ಆಯೋಜಿಸಿತ್ತು.

2034ರ ವಿಶ್ವಕಪ್ ಆತಿಥ್ಯದ ಹಕ್ಕನ್ನು ಪಡೆದುಕೊಳ್ಳುವುದು ಸೌದಿ ಅರೇಬಿಯಾಕ್ಕೆ ಗಮನಾರ್ಹ ಸಾಧನೆಯಾಗಿದೆ. ಪ್ರಸ್ತುತ ಸೌದಿಯಲ್ಲಿ 40,000 ಪ್ರೇಕ್ಷಕರ ಸಾಮರ್ಥ್ಯದ 2 ಕ್ರೀಡಾಂಗಣಗಳಿದ್ದು, ಇನ್ನೂ 14 ಕ್ರೀಡಾಂಗಣಗಳ ಅಗತ್ಯವಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News