×
Ad

U19 ಕೂಚ್ ಬೆಹಾರ್ ಕ್ರಿಕೆಟ್ ಟೂರ್ನಿ | ಗುಜರಾತ್ ವಿರುದ್ಧ ಕರ್ನಾಟಕ 160/3; ಧ್ರುವ ಕೃಷ್ಣನ್ ಅರ್ಧಶತಕ

Update: 2026-01-02 21:50 IST

ವಲ್ಸಾಡ್, ಜ.2: ಅಂಡರ್-19 ಕೂಚ್ ಬೆಹಾರ್ ಕ್ರಿಕೆಟ್ ಟೂರ್ನಿಯ ನಾಲ್ಕನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗುಜರಾತ್ ತಂಡದ ಬೃಹತ್ ಮೊತ್ತಕ್ಕೆ ಉತ್ತರಿಸಹೊರಟಿರುವ ಕರ್ನಾಟಕ ತಂಡ ಶುಕ್ರವಾರ ಎರಡನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್‌ ಗಳ ನಷ್ಟಕ್ಕೆ 160 ರನ್ ಗಳಿಸಿದೆ. ಆರಂಭಿಕ ಬ್ಯಾಟರ್ ಧ್ರುವ್ ಕೃಷ್ಣನ್ ಅರ್ಧಶತಕ (82 ರನ್, 124 ಎಸೆತ) ಗಳಿಸಿ ಗಮನ ಸೆಳೆದಿದ್ದಾರೆ.

ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕರ್ನಾಟಕದ ಇನಿಂಗ್ಸ್ ಆರಂಭಿಸಿದ ಧ್ರುವ್ ಹಾಗೂ ಆದೇಶ್ (37 ರನ್) ಮೊದಲ ವಿಕೆಟ್‌ ಗೆ 125 ರನ್‌ ಗಳ ಜೊತೆಯಾಟ ನಡೆಸಿ ಉತ್ತಮ ಆರಂಭ ಒದಗಿಸಿದರು. ಆದರೆ 139 ರನ್‌ ಗೆ 3 ವಿಕೆಟ್‌ ಗಳನ್ನು ಕಳೆದುಕೊಂಡ ಕರ್ನಾಟಕ ತಂಡ ದಿಢೀರ್ ಕುಸಿತ ಕಂಡಿತು.

ನಾಯಕ ಅನ್ವಯ್ ದ್ರಾವಿಡ್ (9) ಹಾಗೂ ವರುಣ್ ಪಟೇಲ್ (11 ರನ್) ನಾಲ್ಕನೇ ವಿಕೆಟ್‌ ಗೆ 21 ರನ್ ಸೇರಿಸಿ ತಂಡವನ್ನು ಆಧರಿಸಿದ್ದಾರೆ. ಕರ್ನಾಟಕ ತಂಡವು ಇನ್ನೂ 291 ರನ್ ಹಿನ್ನಡೆಯಲ್ಲಿದೆ.

►ಗುಜರಾತ್ 451 ರನ್; ಮಾನಸ್ ಶತಕ, ರತನ್‌ ಗೆ ನಾಲ್ಕು ವಿಕೆಟ್

ಇದಕ್ಕೂ ಮೊದಲು 9 ವಿಕೆಟ್‌ ಗಳ ನಷ್ಟಕ್ಕೆ 348 ರನ್‌ ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಗುಜರಾತ್ ತಂಡವು 451 ರನ್ ಗಳಿಸಿ ಆಲೌಟಾಯಿತು. ಮಧ್ಯಮ ಕ್ರಮಾಂಕದ ಬ್ಯಾಟರ್ ಮಾನಸ್ ಎಂ. ದವೆ 245 ಎಸೆತಗಳಲ್ಲಿ 184 ರನ್ ಗಳಿಸಿ ತಂಡದ ಪರ ಸರ್ವಾಧಿಕ ಸ್ಕೋರ್ ದಾಖಲಿಸಿದರು. ಮಲೈ ಶಾ (78 ರನ್) ಅರ್ಧಶತಕ ಗಳಿಸಿ ಮಾನಸ್‌ಗೆ ಸಾಥ್ ನೀಡಿದರು.

ದೈವಿಕ್ ಶಾ ಅವರೊಂದಿಗೆ 10ನೇ ವಿಕೆಟ್‌ ಗೆ 147 ರನ್‌ ಗಳ ಜೊತೆಯಾಟದಲ್ಲಿ ಭಾಗಿಯಾದ ಮಾನಸ್, ಗುಜರಾತ್ ತಂಡದ ಮೊತ್ತವನ್ನು 450ರ ಗಡಿ ದಾಟಿಸಿದರು. ಇದರಲ್ಲಿ ಮಾನಸ್ 127 ರನ್ ಹಾಗೂ ದೈವಿಕ್ 13 ರನ್ ಕೊಡುಗೆ ನೀಡಿದರು.

ಕರ್ನಾಟಕದ ಬೌಲಿಂಗ್ ವಿಭಾಗದಲ್ಲಿ ರತನ್ ಬಿ.ಆರ್. (4–120) ಯಶಸ್ವಿ ಪ್ರದರ್ಶನ ನೀಡಿದರು. ವೈಭವ್ ಶರ್ಮಾ (2–55), ಈಸಾ ಪುತ್ತಿಗೆ (2–56) ಹಾಗೂ ಧ್ಯಾನ್ ಎಂ. ಹಿರೇಮಠ (2–98) ತಲಾ ಎರಡು ವಿಕೆಟ್‌ ಗಳನ್ನು ಪಡೆದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News