ಅಂಡರ್-19 ವಿಶ್ವಕಪ್| ಬಾಂಗ್ಲಾದೇಶ ಕ್ರಿಕೆಟ್ ತಂಡ ಪ್ರಕಟ, ಅಝಿಝುಲ್ ಹಕೀಂ ನಾಯಕ
ಅಝಿಝುಲ್ ಹಕೀಂ | Photo Credit : @BCBtigers
ಢಾಕಾ, ಜ.3: ಝಿಂಬಾಬ್ವೆ ಹಾಗೂ ನಮೀಬಿಯಾದ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಮುಂಬರುವ ಪುರುಷರ ಐಸಿಸಿ ಅಂಡರ್-19 ವಿಶ್ವಕಪ್ ಟೂರ್ನಿಗಾಗಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ(ಬಿಸಿಬಿ)ಬಲಿಷ್ಠ ತಂಡವನ್ನು ಶನಿವಾರ ಪ್ರಕಟಿಸಿದೆ.
ಕ್ರಿಕೆಟ್ ಮಂಡಳಿಯು ಅಝಿಝುಲ್ ಹಕೀಂರನ್ನು ನಾಯಕರನ್ನಾಗಿ ಹಾಗೂ ಝವಾದ್ ಅಬ್ರಾರ್‌ರನ್ನು ಉಪ ನಾಯಕರನ್ನಾಗಿ ನೇಮಕ ಮಾಡಿದೆ.
ಜನವರಿ 17ರಂದು ಭಾರತ ತಂಡವನ್ನು ಎದುರಿಸುವ ಮೂಲಕ ಬಾಂಗ್ಲಾದೇಶ ತಂಡವು ಪಂದ್ಯಾವಳಿಯಲ್ಲಿ ತನ್ನ ಅಭಿಯಾನವನ್ನು ಆರಂಭಿಸಲಿದೆ.
ಪಂದ್ಯಾವಳಿಯಲ್ಲಿ ಆಟಗಾರರಿಗೆ ಗಾಯವಾದರೆ ಅವರ ಬದಲಿಗೆ ಆಡಲು 8 ಮೀಸಲು ಆಟಗಾರರೊಂದಿಗೆ ಒಟ್ಟು 15 ಆಟಗಾರರನ್ನು ಪ್ರಧಾನ ತಂಡಕ್ಕೆ ಆಯ್ಕೆ ಮಾಡಲಾಗಿದೆ.
ಯೂತ್ ಕ್ರಿಕೆಟ್‌ನಲ್ಲಿ ನಾಯಕ ಅಝಿಝುಲ್ ಹಕೀಂ ಹಾಗೂ ಉಪ ನಾಯಕ ಝವಾದ್ ಅಬ್ರಾರ್ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದ್ದಾರೆ.
ಹಿಂದಿನ ಅಂಡರ್-19 ವಿಶ್ವಕಪ್ ಟೂರ್ನಿಯ ನಂತರ ಉಭಯ ಆಟಗಾರರು 1,000ಕ್ಕೂ ಅಧಿಕ ರನ್ ಗಳಿಸಿದ್ದಾರೆ.
ಇನ್ನೋರ್ವ ಬ್ಯಾಟರ್ ಕಲಾಂ ಸಿದ್ದಿಕಿ ಇದೇ ಅವಧಿಯಲ್ಲಿ 857 ರನ್ ಗಳಿಸಿ ತಂಡವನ್ನು ಆಧರಿಸಿದ್ದಾರೆ.
ವೇಗದ ಬೌಲರ್ ಇಕ್ಬಾಲ್ ಹುಸೇನ್ ಹಾಗೂ ಅಲ್ ಫಹಾದ್ ವೇಗದ ವಿಭಾಗವನ್ನು ಮುನ್ನಡೆಸುವ ನಿರೀಕ್ಷೆ ಇದೆ. ಹಿಂದಿನ ಅಂಡರ್-19 ವಿಶ್ವಕಪ್ ನಂತರ ಇಕ್ಬಾಲ್ 45 ವಿಕೆಟ್‌ಗಳನ್ನು ಹಾಗೂ ಅಲ್ ಫಹಾದ್ 43 ವಿಕೆಟ್‌ಗಳನ್ನು ಉರುಳಿಸಿದ್ದಾರೆ.
ಬಾಂಗ್ಲಾದೇಶ ತಂಡವು ‘ಬಿ’ ಗುಂಪಿನಲ್ಲಿ ಭಾರತ, ನ್ಯೂಝಿಲ್ಯಾಂಡ್ ಹಾಗೂ ಅಮೆರಿಕ ತಂಡಗಳೊಂದಿಗೆ ಸ್ಥಾನ ಪಡೆದಿದೆ. ಪ್ರತೀ ಗುಂಪಿನ ಮೂರು ತಂಡಗಳು ಸೂಪರ್ ಸಿಕ್ಸ್ ಹಂತಕ್ಕೇರಲಿವೆ. ಪ್ರತಿ ಪಂದ್ಯವೂ ಅತ್ಯಂತ ಮುಖ್ಯವಾಗಿದೆ. 2026ರ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 16 ತಂಡಗಳು ಭಾಗವಹಿಸಲಿವೆ. ಫೈನಲ್ ಪಂದ್ಯಕ್ಕಿಂತ ಮೊದಲು 41 ಪಂದ್ಯಗಳನ್ನು ಆಡಲಾಗುತ್ತದೆ.