ಶ್ರೀಲಂಕಾ - ಇಂಗ್ಲೆಂಡ್ ಮೊದಲ ಟೆಸ್ಟ್‌ನಲ್ಲಿ ‘‘ಅನ್ಯಾಯವಾಗಿ’’ ಚೆಂಡು ಬದಲಿಸಿದ ವಿವಾದ
Image Source: X
ಮ್ಯಾಂಚೆಸ್ಟರ್: ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫರ್ಡ್ನಲ್ಲಿ ನಡೆದ ಪ್ರವಾಸಿ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ಶನಿವಾರ 5 ವಿಕೆಟ್ಗಳಿಂದ ಗೆದ್ದಿದೆ. ಆದರೆ, ಈಗ ಈ ಪಂದ್ಯವನ್ನು ವಿವಾದವೊಂದು ಸುತ್ತುವರಿದಿದೆ.
ಪಂದ್ಯದ ನಡುವೆ ‘‘ಅನ್ಯಾಯವಾಗಿ’’ ಚೆಂಡನ್ನು ಬದಲಿಸಿರುವುದಕ್ಕೆ ಶ್ರೀಲಂಕಾ ತಂಡದ ಆಲ್ರೌಂಡರ್ ಆ್ಯಂಜೆಲೊ ಮ್ಯಾಥ್ಯೂಸ್ ಪ್ರಬಲ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಶ್ರೀಲಂಕಾದ ಎರಡನೇ ಇನಿಂಗ್ಸ್ನಲ್ಲಿ ಚೆಂಡು ಬದಲಾವಣೆಗೊಂಡ ಘಟನೆ ನಡೆದಿದೆ. ಚೆಂಡು ಬದಲಾದ ಬಳಿಕ ಪಂದ್ಯವು ಇಂಗ್ಲೆಂಡ್ನತ್ತ ವಾಲಿತು. ಪಂದ್ಯದ ಗತಿಯನ್ನು ಬದಲಿಸುವಲ್ಲಿ ಈ ನಿರ್ಧಾರವು ಪ್ರಮುಖ ಪಾತ್ರ ವಹಿಸಿತು ಎಂದು ಮ್ಯಾಥ್ಯೂಸ್ ಭಾವಿಸಿದ್ದಾರೆ.
ಅತ್ಯಂತ ಮಹತ್ವದ ಘಟ್ಟದಲ್ಲಿ ಚೆಂಡು ಬದಲಾವಣೆಗೆ ಅಂಪಯರ್ಗಳಾದ ಕ್ರಿಸ್ ಗ್ಯಾಫನಿ ಮತ್ತು ಪೌಲ್ ರೈಫೆಲ್ ಅನುಮತಿ ನೀಡಿದರು. ಶ್ರೀಲಂಕಾದ ಎರಡನೇ ಇನಿಂಗ್ಸ್ನ 41ನೇ ಓವರ್ನಲ್ಲಿ ಚೆಂಡು ಬದಲಾಯಿತು. ಆಗ ತಂಡವು 4 ವಿಕೆಟ್ಗಳನ್ನು ಕಳೆದುಕೊಂಡು 146 ರನ್ಗಳನ್ನು ಗಳಿಸಿ 24 ರನ್ಗಳ ಅಲ್ಪ ಮುನ್ನಡೆಯನ್ನು ಗಳಿಸಿತ್ತು. ಆಗ ಮ್ಯಾಥ್ಯೂಸ್ 59 ರನ್ ಗಳಿಸಿ ಕ್ರೀಸ್ನಲ್ಲಿ ನೆಲೆಯೂರಿದ್ದರು. ಅವರಿಗೆ 33 ರನ್ ಗಳಿಸಿದ್ದ ಕಮಿಂಡು ಮೆಂಡಿಸ್ ಸಮರ್ಥ ಬೆಂಬಲ ನೀಡಿದ್ದರು.
ಚೆಂಡಿನ ಹೊಳಪನ್ನು ತೆಗೆದುಹಾಕಲು ಶ್ರೀಲಂಕಾವು ಕಠಿಣ ಪ್ರಯತ್ನ ನಡೆಸಿತ್ತು. ಅದರಿಂದಾಗಿ ಇಂಗ್ಲೆಂಡ್ ಬೌಲಿಂಗ್ ದಾಳಿಯ ಮೊನಚು ಕಡಿಮೆಯಾಗಿತ್ತು ಎಂದು ಮ್ಯಾಥ್ಯೂಸ್ ಹೇಳಿದರು. ಆದರೆ, ಚೆಂಡು ಬದಲಾದ ಬಳಿಕ, ಆಟದ ಗತಿ ಬದಲಾಯಿತು ಮತ್ತು ಇಂಗ್ಲೆಂಡ್ ಬೌಲರ್ಗಳು ಪಂದ್ಯದ ಮೇಲೆ ನಿಯಂತ್ರಣ ಪಡೆದರು ಎಂದರು.
ಚೆಂಡು ಬದಲಾದ ಬಳಿಕ 10ನೇ ಓವರ್ನಲ್ಲಿ ಕ್ರಿಸ್ ವೋಕ್ಸ್, ಮ್ಯಾಥ್ಯೂಸ್ರನ್ನು ಔಟ್ ಮಾಡಿದರು. ಅದರೊಂದಿಗೆ 78 ರನ್ಗಳ ಐದನೇ ವಿಕೆಟ್ ಭಾಗೀದಾರಿಕೆ ಕೊನೆಗೊಂಡಿತು.
ಅಂತಿಮವಾಗಿ ಇಂಗ್ಲೆಂಡ್ ಪಂದ್ಯದ ನಾಲ್ಕನೇ ದಿನವಾದ ಶನಿವಾರ ಐದು ವಿಕೆಟ್ಗಳ ಜಯ ಗಳಿಸುವಲ್ಲಿ ಯಶಸ್ವಿಯಾಯಿತು.
ಟಾಸ್ ಗೆದ್ದ ಶ್ರೀಲಂಕಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಅದು ತನ್ನ ಮೊದಲ ಇನಿಂಗ್ಸ್ನಲ್ಲಿ ಮಿಲನ್ ರತ್ನ ನಾಯಕೆಯ 72 ರನ್ಗಳ ನೆರವಿನಿಂದ 236 ರನ್ಗಳನ್ನು ಗಳಿಸಿತು.
ಬಳಿಕ, ಇಂಗ್ಲೆಂಡ್ ತನ್ನ ಮೊದಲ ಇನಿಂಗ್ಸ್ನಲ್ಲಿ ಜೇಮೀ ಸ್ಮಿತ್ರ ಭವ್ಯ ಶತಕ (111)ದ ನೆರವಿನಿಂದ 358 ರನ್ ಕಲೆ ಹಾಕಿತು.
ಶ್ರೀಲಂಕಾ ತನ್ನ ದ್ವಿತೀಯ ಇನಿಂಗ್ಸ್ನಲ್ಲಿ, ಆ್ಯಂಜೆಲೋ ಮ್ಯಾಥ್ಯೂಸ್ರ 65, ದಿನೇಶ್ ಚಂಡಿಮಾಲ್ರ 79 ಮತ್ತು ಕಮಿಂಡು ಮೆಂಡಿಸ್ರ ಶತಕ (113)ದ ನೆರವಿನಿಂದ 326 ರನ್ ಕಲೆ ಹಾಕಿತು.
ಅಂತಿಮವಾಗಿ, ಪಂದ್ಯದ ನಾಲ್ಕನೇ ದಿನ ದ್ವಿತೀಯ ಇನಿಂಗ್ಸ್ನಲ್ಲಿ ಗೆಲ್ಲಲು 205 ರನ್ಗಳ ಗುರಿಯನ್ನು ಪಡೆದ ಇಂಗ್ಲೆಂಡ್ 5 ವಿಕೆಟ್ಗಳ ನಷ್ಟಕ್ಕೆ 205 ರನ್ಗಳನ್ನು ಗಳಿಸಿ ಜಯಭೇರಿ ಬಾರಿಸಿತು.
ಇಂಗ್ಲೆಂಡ್ನ ಜೇಮೀ ಸ್ಮಿತ್ರನ್ನು ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕರಿಸಲಾಯಿತು.