ಸೆಪ್ಟಂಬರ್ ನಲ್ಲಿ ಉಸೇನ್ ಬೋಲ್ಟ್ ಭಾರತ ಪ್ರವಾಸ
ಉಸೇನ್ ಬೋಲ್ಟ್ | PC : NDTV
ಹೊಸದಿಲ್ಲಿ: ಎಂಟು ಒಲಿಂಪಿಕ್ ಚಿನ್ನ ವಿಜೇತ. ವೇಗದ ಓಟದ ದಂತಕತೆ ಜಮೈಕದ ಉಸೇನ್ ಬೋಲ್ಟ್ ಸೆಪ್ಟಂಬರ್ 26ರಿಂದ 28ರವರೆಗೆ ಭಾರತಕ್ಕೆ ಭೇಟಿ ನೀಡಲಿದ್ದಾರೆ.
ಇದು ಭಾರತಕ್ಕೆ ಅವರು ನೀಡುತ್ತಿರುವ ಎರಡನೇ ಭೇಟಿಯಾಗಿದೆ. ಇದಕ್ಕೂ ಮೊದಲು, ಅವರು 2014ರಲ್ಲಿ ಭಾರತಕ್ಕೆ ಬಂದಿದ್ದರು.
ತನ್ನ ಭಾರತ ಪ್ರವಾಸದ ಬಗ್ಗೆ ಮಾತನಾಡಿರುವ ಬೋಲ್ಟ್, ‘‘ಮತ್ತೊಮ್ಮೆ ಭಾರತಕ್ಕೆ ಹೋಗುವ ಬಗ್ಗೆ ನಾನು ರೋಮಾಂಚಿತನಾಗಿದ್ದೇನೆ. ಅಲ್ಲಿನ ಉತ್ಸಾಹ, ಜನರು ಮತ್ತು ಕ್ರೀಡೆಯ ಬಗ್ಗೆ ಅವರು ಹೊಂದಿರುವ ಮೋಹ ಎಲ್ಲವೂ ಅಪಾರ. ಭಾರತದಲ್ಲಿ ನನ್ನ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ವರ್ಷದ ಕೊನೆಯಲ್ಲಿ ಅಲ್ಲಿಗೆ ಬೇಟಿ ನೀಡುವುದನ್ನು ನಾನು ಎದುರು ನೋಡುತ್ತಿದ್ದೇನೆ’’ ಎಂದು ಹೇಳಿದ್ದಾರೆ.
ಅವರು ತನ್ನ ಭಾರತ ಪ್ರವಾಸದ ವೇಳೆ ದಿಲ್ಲಿ ಮತ್ತು ಮುಂಬೈನಲ್ಲಿ ಪ್ರಚಾರ ಕಾರ್ಯಗಳಲ್ಲಿ ಭಾಗವಹಿಸಲಿದ್ದಾರೆ.
ಶಾಲಾ ಮಕ್ಕಳ ರಾಷ್ಟ್ರವ್ಯಾಪಿ ಸ್ಪ್ರಿಂಟ್ ಚಾಲೆಂಜ್ (ವೇಗದ ಓಟದ ಸ್ಪರ್ಧೆ) ಫೈನಲ್‌ನಲ್ಲಿ ಬೋಲ್ಟ್ ಪಾಲ್ಗೊಳ್ಳಲಿದ್ದಾರೆ.