ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಆಸ್ಟ್ರೇಲಿಯಾ ಬ್ಯಾಟರ್ ಉಸ್ಮಾನ್ ಖ್ವಾಜಾ
Australia ಕ್ರಿಕೆಟ್ ನಲ್ಲಿರುವ ಜನಾಂಗೀಯ ದ್ವೇಷದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಖ್ವಾಜಾ!
ಉಸ್ಮಾನ್ ಖ್ವಾಜಾ (Photo credit: X/@ICC)
ಸಿಡ್ನಿ: ಆಸ್ಟ್ರೇಲಿಯಾ–ಇಂಗ್ಲೆಂಡ್ ನಡುವಿನ ಐದನೇ ಹಾಗೂ ಅಂತಿಮ ಆಶಸ್ ಟೆಸ್ಟ್ ಪಂದ್ಯವೇ ತನ್ನ ಅಂತಾರಾಷ್ಟ್ರೀಯ ಟೆಸ್ಟ್ ವೃತ್ತಿಜೀವನದ ಕೊನೆಯ ಪಂದ್ಯವಾಗಲಿದೆ ಎಂದು ಆಸ್ಟ್ರೇಲಿಯಾದ ಹಿರಿಯ ಬ್ಯಾಟರ್ ಉಸ್ಮಾನ್ ಖ್ವಾಜಾ ಪ್ರಕಟಿಸಿದ್ದಾರೆ. 2011ರಲ್ಲಿ ಸಿಡ್ನಿ ಕ್ರಿಕೆಟ್ ಮೈದಾನದಲ್ಲೇ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಖ್ವಾಜಾ, ಅದೇ ಮೈದಾನದಲ್ಲಿ ವಿದಾಯ ಹೇಳಲು ನಿರ್ಧರಿಸಿದ್ದಾರೆ.
ಆಶಸ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡ 3–1 ಅಂತರದ ಮುನ್ನಡೆ ಸಾಧಿಸಿರುವ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಂಡಿರುವುದಾಗಿ ಖ್ವಾಜಾ ತಿಳಿಸಿದ್ದಾರೆ. ಶುಕ್ರವಾರ ಸಹ ಆಟಗಾರರಿಗೆ ತಮ್ಮ ನಿರ್ಧಾರವನ್ನು ತಿಳಿಸಿದ ಅವರು, ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಕುಟುಂಬದೊಂದಿಗೆ ನಿವೃತ್ತಿಯನ್ನು ಅಧಿಕೃತವಾಗಿ ಘೋಷಿಸಿದರು.
ಪ್ರಸಕ್ತ ಆಶಸ್ ಸರಣಿಯಿಡೀ ಖ್ವಾಜಾ ಅವರ ಭವಿಷ್ಯ ಚರ್ಚೆಯ ವಿಷಯವಾಗಿತ್ತು. ಸರಣಿಯ ಆರಂಭದಲ್ಲಿ ಬೆನ್ನುನೋವಿನಿಂದ ಬಳಲಿದ್ದ ಅವರು ಟೀಕೆಗೆ ಗುರಿಯಾಗಿದ್ದರು. ಗಾಯದ ಹಿನ್ನೆಲೆಯಲ್ಲಿ ಅವರ ಸಿದ್ಧತೆ ಹಾಗೂ ಬದ್ಧತೆಯ ಕುರಿತು ಕೆಲ ಮಾಜಿ ಆಟಗಾರರು ಮತ್ತು ಮಾಧ್ಯಮಗಳು ಪ್ರಶ್ನೆ ಎತ್ತಿದ್ದವು. ಗಾಯಕ್ಕೂ ಕೆಲ ದಿನಗಳ ಮೊದಲು ಗಾಲ್ಫ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದನ್ನು ಉಲ್ಲೇಖಿಸಿ ಟೀಕೆಗಳು ತೀವ್ರಗೊಂಡಿದ್ದವು.
ಈ ಕುರಿತು ಪ್ರತಿಕ್ರಿಯಿಸಿದ ಖ್ವಾಜಾ, “ನಾನು ಯಾವಾಗಲೂ ಸ್ವಲ್ಪ ವಿಭಿನ್ನವಾಗಿ ಕಾಣಿಸಿಕೊಂಡಿದ್ದೇನೆ. ಆಸ್ಟ್ರೇಲಿಯಾ ಕ್ರಿಕೆಟ್ ನಮ್ಮೆಲ್ಲರ ಹೆಮ್ಮೆ. ಆದರೆ ನನ್ನ ವಿಚಾರದಲ್ಲಿ ನಡೆದ ಟೀಕೆಗಳು ಪ್ರದರ್ಶನಕ್ಕೆ ಸೀಮಿತವಾಗಿರಲಿಲ್ಲ; ಅವು ವೈಯಕ್ತಿಕವಾಗಿದ್ದವು” ಎಂದು ಹೇಳಿದರು.
“ಗಾಯ ಎನ್ನುವುದು ನನ್ನ ನಿಯಂತ್ರಣದಲ್ಲಿರದ ವಿಷಯ. ಆದರೆ ನನ್ನ ಸಿದ್ಧತೆ, ಬದ್ಧತೆ ಮತ್ತು ವ್ಯಕ್ತಿತ್ವದ ಮೇಲೆ ನಡೆದ ದಾಳಿಗಳು ನಾನು ಜೀವನಪೂರ್ತಿ ಎದುರಿಸಿಕೊಂಡು ಬಂದ ಜನಾಂಗೀಯ ದ್ವೇಷಗಳು ಮತ್ತೆ ನೆನಪಿಸಿತು” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಪಾಕಿಸ್ತಾನದಲ್ಲಿ ಜನಿಸಿದ ಖ್ವಾಜಾ, ಆಸ್ಟ್ರೇಲಿಯಾವನ್ನು ಪ್ರತಿನಿಧಿಸಿದ ಮೊದಲ ಮುಸ್ಲಿಂ ಕ್ರಿಕೆಟಿಗರಾಗಿದ್ದಾರೆ. ಅವರ ವೃತ್ತಿಜೀವನ ಸರಳವಾಗಿರಲಿಲ್ಲ. ಆರಂಭಿಕ ಹಿನ್ನಡೆಗಳ ಬಳಿಕ ಅವರು ತಮ್ಮನ್ನು ವಿಶ್ವಾಸಾರ್ಹ ಆರಂಭಿಕ ಬ್ಯಾಟರ್ ಹಾಗೂ ಅನುಭವೀ ನಾಯಕತ್ವದ ಧ್ವನಿಯಾಗಿ ರೂಪುಗೊಂಡರು . 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆದ್ದ ಆಸ್ಟ್ರೇಲಿಯಾ ತಂಡದಲ್ಲೂ ಅವರು ಪ್ರಮುಖ ಪಾತ್ರವಹಿಸಿದ್ದರು.
ಆಸ್ಟ್ರೇಲಿಯಾ ಕ್ರಿಕೆಟ್ ವಲಯದಲ್ಲಿ ಗಾಯಗೊಂಡ ಆಟಗಾರರ ಬಗ್ಗೆ ವಿಭಿನ್ನ ಮಾನದಂಡ ಅನುಸರಿಸಲಾಗುತ್ತಿದೆ ಎಂದು ಉಸ್ಮಾನ್ ಖ್ವಾಜಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಶಸ್ ಸರಣಿಯ ವೇಳೆ ತಾನು ಬೆನ್ನುನೋವಿನಿಂದ ಬಳಲುತ್ತಿದ್ದಾಗ, ಸಹಾನುಭೂತಿಯ ಬದಲು ಅನುಮಾನ ಮತ್ತು ಟೀಕೆ ಎದುರಿಸಬೇಕಾಯಿತು ಎಂದು ಅವರು ಹೇಳಿದ್ದಾರೆ.
“ಸಾಮಾನ್ಯವಾಗಿ ಯಾರಾದರೂ ಗಾಯಗೊಂಡಾಗ ‘ಪಾಪ ಜೋಶ್ ಹ್ಯಾಜಲ್‌ವುಡ್’ ಅಥವಾ ‘ಪಾಪ ನಾಥನ್ ಲಿಯಾನ್’ ಎಂಬ ರೀತಿಯ ಪ್ರತಿಕ್ರಿಯೆ ಬರುತ್ತದೆ. ಆದರೆ ನಾನು ಗಾಯಗೊಂಡಾಗ ನನ್ನ ವಿಶ್ವಾಸಾರ್ಹತೆ, ಸಿದ್ಧತೆ ಮತ್ತು ಬದ್ಧತೆಯನ್ನೇ ಪ್ರಶ್ನಿಸಲಾಯಿತು” ಎಂದು ಖ್ವಾಜಾ ಹೇಳಿದರು.
“ಗಾಯ ಎನ್ನುವುದು ನನ್ನ ನಿಯಂತ್ರಣದಲ್ಲಿರದ ವಿಷಯ. ನನ್ನ ಮೇಲಿನ ಟೀಕೆಗಳು ಪ್ರದರ್ಶನದ ಕುರಿತು ಇರಲಿಲ್ಲ. ಅವು ವೈಯಕ್ತಿಕವಾಗಿದ್ದವು. ಒಬ್ಬ ಆಟಗಾರನಾಗಿ ಮಾತ್ರವಲ್ಲ, ಒಬ್ಬ ವ್ಯಕ್ತಿಯಾಗಿ ನಾನು ಯಾರೆಂಬುದರ ಕುರಿತು ದಾಳಿ ನಡೆಯಿತು. ಅದು ನನಗೆ ಬಹಳ ನೋವು ತಂದಿತು” ಎಂದು ಅವರು ಸ್ಪಷ್ಟಪಡಿಸಿದರು.
ಆಸ್ಟ್ರೇಲಿಯನ್ ಕ್ರಿಕೆಟ್‌ನಲ್ಲಿ ಜನಾಂಗೀಯ ಸ್ಟೀರಿಯೊಟೈಪ್‌ಗಳು ಇನ್ನೂ ಸಂಪೂರ್ಣವಾಗಿ ಅಳಿದುಹೋಗಿಲ್ಲ ಎಂಬ ಅಭಿಪ್ರಾಯವನ್ನು ಖ್ವಾಜಾ ವ್ಯಕ್ತಪಡಿಸಿದರು. “ನಾನು ಬೇರೆ 'ಬಣ್ಣದ' ಕ್ರಿಕೆಟಿಗ. ಆಸ್ಟ್ರೇಲಿಯಾ ತಂಡ ನಮ್ಮೆಲ್ಲರ ಹೆಮ್ಮೆ. ಆದರೆ ನನ್ನ ವಿಚಾರದಲ್ಲಿ ನಡೆದ ವರ್ತನೆ ವಿಭಿನ್ನವಾಗಿತ್ತು. ನಾನು ಕ್ರಿಕೆಟ್‌ನ ಹೊರಗಿನ ವಿಚಾರಗಳ ಬಗ್ಗೆ ಮಾತನಾಡಿದಾಗಲೆಲ್ಲಾ ಗುರಿಯಾಗುತ್ತೇನೆ ಎಂಬುದು ನನಗೆ ತಿಳಿದಿದೆ” ಎಂದು ಹೇಳಿದರು.
“ನಾವು ಈ ಹಂತವನ್ನು ಮೀರಿ ಹೋಗಿದ್ದೇವೆ ಎಂದು ಭಾವಿಸಿದ್ದೆ. ಆದರೆ ವಾಸ್ತವದಲ್ಲಿ ಅಂಥದ್ದಾಗಿಲ್ಲ ಎಂಬುದು ನೋವು ತಂದಿತು” ಎಂದು ಅವರು ಅಭಿಪ್ರಾಯಪಟ್ಟರು.
ಈ ಆಶಸ್ ಸರಣಿಯಲ್ಲಿ ಮೆಲ್ಬೋರ್ನ್ ಟೆಸ್ಟ್‌ನಲ್ಲಿ 82 ರನ್ ಗಳಿಸುವ ಮೂಲಕ ಖ್ವಾಜಾ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದರು. 2025ರಲ್ಲಿ ಅವರು 18 ಇನ್ನಿಂಗ್ಸ್‌ಗಳಿಂದ 614 ರನ್ ಗಳಿಸಿದ್ದು, ಶ್ರೀಲಂಕಾ ವಿರುದ್ಧದ ಅವರ 232 ರನ್‌ಗಳ ಇನಿಂಗ್ಸ್ ಗಮನಾರ್ಹವಾಗಿದೆ.
ಉಸ್ಮಾನ್ ಖ್ವಾಜಾ ತಮ್ಮ ವೃತ್ತಿಜೀವನವನ್ನು 87 ಟೆಸ್ಟ್, 40 ಏಕದಿನ ಹಾಗೂ 9 ಟಿ20 ಅಂತಾರಾಷ್ಟ್ರೀಯ ಪಂದ್ಯಗಳೊಂದಿಗೆ ಮುಗಿಸುತ್ತಿದ್ದು, ಒಟ್ಟು 8,001 ಅಂತರರಾಷ್ಟ್ರೀಯ ರನ್‌ಗಳನ್ನು ಗಳಿಸಿದ್ದಾರೆ. ಮುಂದಿನ ಜೀವನದ ಪಯಣ ವಿಭಿನ್ನವಾಗಿರಲಿದೆ ಎಂದು ಅವರು ತಿಳಿಸಿದ್ದಾರೆ.