×
Ad

ವೈಭವ್ ಸೂರ್ಯವಂಶಿ ಐತಿಹಾಸಿಕ ಶತಕ; ಹಲವು ದಾಖಲೆಗಳು ಪತನ

Update: 2025-04-29 17:56 IST

ವೈಭವ್ ಸೂರ್ಯವಂಶಿ | PC : X 

ಹೊಸದಿಲ್ಲಿ: ಗುಜರಾತ್ ಟೈಟಾನ್ಸ್ ವಿರುದ್ಧ ಸೋಮವಾರ ನಡೆದ ಐಪಿಎಲ್ ಪಂದ್ಯದಲ್ಲಿ ಟಿ-20 ಕ್ರಿಕೆಟ್ ಇತಿಹಾಸದಲ್ಲಿ 2ನೇ ಅತ್ಯಂತ ವೇಗದ ಶತಕ ಸಿಡಿಸಿರುವ ರಾಜಸ್ಥಾನ ರಾಯಲ್ಸ್ ತಂಡದ 14 ವರ್ಷದ ಆಟಗಾರ ವೈಭವ್ ಸೂರ್ಯವಂಶಿ ಹಲವು ದಾಖಲೆಗಳನ್ನು ಪುಡಿಗಟ್ಟಿದ್ದಾರೆ.

ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ 210 ರನ್ ಚೇಸ್ ವೇಳೆ ಬಿರುಗಾಳಿ ವೇಗದಲ್ಲಿ ಬ್ಯಾಟ್ ಬೀಸಿ ಎಲ್ಲರನ್ನು ನಿಬ್ಬೆರಗಾಗಿಸಿದ ವೈಭವ್ ಕೇವಲ 35 ಎಸೆತಗಳಲ್ಲಿ ತನ್ನ ಚೊಚ್ಚಲ ಐಪಿಎಲ್ ಶತಕ ಪೂರೈಸಿದರು.

ವೈಭವ್ ಟಿ-20 ಕ್ರಿಕೆಟ್‌ನಲ್ಲಿ ಶತಕ ಗಳಿಸಿದ ಕಿರಿಯ ವಯಸ್ಸಿನ ಆಟಗಾರ ಎನಿಸಿಕೊಂಡು ವಿಜಯ್ ರೆಲ್ ದಾಖಲೆ ಮುರಿದರು. ವಿಜಯ್ 2013ರಲ್ಲಿ ಮುಂಬೈ ವಿರುದ್ಧ 18 ವರ್ಷ, 118 ದಿನಗಳ ಪ್ರಾಯದಲ್ಲಿ ಟಿ-20 ಶತಕ ಗಳಿಸಿದ್ದರು.

ಐಪಿಎಲ್‌ನಲ್ಲಿ ವೇಗದ ಶತಕ ಗಳಿಸಿದ ಭಾರತೀಯ ಆಟಗಾರ ಎನಿಸಿಕೊಂಡಿರುವ ವೈಭವ್ ಅವರು ಯೂಸುಫ್ ಪಠಾಣ್‌ರ (210ರಲ್ಲಿ 37 ಎಸೆತಗಳಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಶತಕ) ದಾಖಲೆ ಪುಡಿಗಟ್ಟಿದರು.

ಒಟ್ಟು 11 ಸಿಕ್ಸರ್‌ಗಳನ್ನು ಸಿಡಿಸಿದ ವೈಭವ್ ಐಪಿಎಲ್ ಇನಿಂಗ್ಸ್‌ನಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಎಂ.ವಿಜಯ್ (11 ಸಿಕ್ಸರ್) ದಾಖಲೆ ಸರಿಗಟ್ಟಿದರು. 2010ರಲ್ಲಿ ವಿಜಯ್ ರಾಜಸ್ಥಾನದ ವಿರುದ್ದ 127 ರನ್ ಗಳಿಸಿದ್ದಾಗ ಈ ಸಾಧನೆ ಮಾಡಿದ್ದರು. 2018ರಲ್ಲಿ ಆರ್‌ಸಿಬಿ ವಿರುದ್ಧ 10 ಸಿಕ್ಸರ್‌ಗಳನ್ನು ಸಿಡಿಸಿದ್ದ ಸಂಜು ಸ್ಯಾಮ್ಸನ್‌ರ ದಾಖಲೆಯನ್ನು ವೈಭವ್ ಮುರಿದರು.

ವೈಭವ್ 101 ರನ್ ಪೈಕಿ 94 ರನ್‌ಗಳನ್ನು ಬೌಂಡರಿ ಹಾಗೂ ಸಿಕ್ಸರ್‌ಗಳ ಮೂಲಕವೇ ಗಳಿಸಿ ಗಮನ ಸೆಳೆದರು. ಇದು ಟಿ-20 ಕ್ರಿಕೆಟ್‌ನಲ್ಲಿ ಶ್ರೇಷ್ಠ ಸಾಧನೆಯಾಗಿದೆ. ಈ ಹಿಂದೆ ಅಭಿಷೇಕ್ ಶರ್ಮಾ ಔಟಾಗದೆ 106 ರನ್ ಗಳಿಸಿದ್ದಾಗ ಬೌಂಡರಿ, ಸಿಕ್ಸರ್‌ಗಳ ಮೂಲಕ 98 ರನ್ ಗಳಿಸಿದ್ದರು.

ವೈಭವ್ ಟಿ-20 ಕ್ರಿಕೆಟ್‌ನಲ್ಲಿ ಫಿಫ್ಟಿ ಪ್ಲಸ್ ಸ್ಕೋರ್ ಗಳಿಸಿದ ಕಿರಿಯ ವಯಸ್ಸಿನ ಆಟಗಾರ ಎನಿಸಿಕೊಂಡಿದ್ದು, ಮುಹಮ್ಮದ್ ನಬಿ ಅವರ ಪುತ್ರ ಹಸನ್ (15 ವರ್ಷ, 360ದಿನಗಳು)ದಾಖಲೆಯನ್ನು ಮುರಿದರು.

ವೈಭವ್ ಸೂರ್ಯವಂಶಿ ಪುಡಿಗಟ್ಟಿರುವ ದಾಖಲೆಗಳತ್ತ ಒಂದು ನೋಟ:

►ಕಿರಿಯ ವಯಸ್ಸಿನಲ್ಲಿ ಹಿರಿಯ ಸಾಧನೆ

-ಟಿ-20 ಕ್ರಿಕೆಟ್ ಇತಿಹಾಸದಲ್ಲಿ 50 ರನ್ ಗಳಿಸಿದ ಕಿರಿಯ ಕ್ರಿಕೆಟಿಗ(14 ವರ್ಷ, 32 ದಿನಗಳು)

-ಟಿ-20 ಕ್ರಿಕೆಟ್ ಇತಿಹಾಸದಲ್ಲಿ 100 ರನ್ ಗಳಿಸಿದ ಕಿರಿಯ ಕ್ರಿಕೆಟಿಗ(14 ವರ್ಷ, 32 ದಿನಗಳು)

-ಐಪಿಎಲ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಕಿರಿಯ ವಯಸ್ಸಿನ ಆಟಗಾರ. ಮುಜೀಬ್‌ವುರ‌್ರಹ್ಮಾನ್ ಹಾಗೂ ವಾಶಿಂಗ್ಟನ್ ಸುಂದರ್ ದಾಖಲೆ(14 ವರ್ಷ, 32 ದಿನ)ಪತನ.

►ಬ್ಯಾಟಿಂಗ್ ದಾಖಲೆಗಳು

-ಐಪಿಎಲ್‌ನಲ್ಲಿ ವೇಗದ ಶತಕ ಗಳಿಸಿದ ಮೊದಲ ಭಾರತೀಯ(35 ಎಸೆತಗಳು)

-ಐಪಿಎಲ್ ರನ್ ಚೇಸ್ ವೇಳೆ ವೇಗದ ಶತಕ(35 ಎಸೆತಗಳು)

-ಐಪಿಎಲ್ ಶತಕ ಗಳಿಸಲು ಕಡಿಮೆ ಇನಿಂಗ್ಸ್ ತೆಗೆದುಕೊಂಡ ಭಾರತೀಯ ಆಟಗಾರ(3ನೇ ಐಪಿಎಲ್ ಇನಿಂಗ್ಸ್)

-ಐಪಿಎಲ್ ಇತಿಹಾಸದಲ್ಲಿ 11 ಓವರ್‌ನೊಳಗೆ ಶತಕ ಗಳಿಸಿದ ಏಕೈಕ ಭಾರತೀಯ

-ಕರೀಮ್ ಜನತ್ ಎಸೆದ ಓವರ್‌ರೊಂದರಲ್ಲಿ 30 ರನ್ ಸೂರೆಗೈದರು. ಜನತ್ ತನ್ನ ಚೊಚ್ಚಲ ಐಪಿಎಲ್ ಪಂದ್ಯದ ಮೊದಲ ಓವರ್‌ನಲ್ಲಿ ಗರಿಷ್ಠ ರನ್ ನೀಡಿದ್ದಾರೆ.

►ಸಿಕ್ಸ್ ಹಿಟ್ಟಿಂಗ್ ಹಾಗೂ ಪವರ್ ರೆಕಾರ್ಡ್ಸ್

-ಐಪಿಎಲ್ ಇನಿಂಗ್ಸ್‌ವೊಂದರಲ್ಲಿ ಕಿರಿಯ ಆಟಗಾರನಿಂದ ಗರಿಷ್ಠ ಸಿಕ್ಸರ್‌ಗಳು(11)

-ಐಪಿಎಲ್ ಇನಿಂಗ್ಸ್‌ನಲ್ಲಿ ಭಾರತೀಯ ಆಟಗಾರನಿಂದ ಜಂಟಿ ಗರಿಷ್ಠ ಸಿಕ್ಸರ್(11)

-ಐಪಿಎಲ್ ರನ್ ಚೇಸ್ ವೇಳೆ ಗರಿಷ್ಠ ಸಿಕ್ಸರ್‌ಗಳ ಸುರಿಮಳೆ

-ಯೂಸುಫ್ ಪಠಾಣ್ ಅವರ 15 ವರ್ಷಗಳ ಹಳೆಯ ದಾಖಲೆ ಪತನ. 2010ರಲ್ಲಿ ಯೂಸುಫ್ 37 ಎಸೆತಗಳಲ್ಲಿ 100 ರನ್ ಗಳಿಸಿ ಐಪಿಎಲ್‌ನಲ್ಲಿ ವೇಗದ ಶತಕ ಗಳಿಸಿದ ಭಾರತೀಯ ಆಟಗಾರನಾಗಿದ್ದರು. ವೈಭವ್ 35 ಎಸೆತಗಳಲ್ಲಿ ಶತಕ ಗಳಿಸಿದ್ದಾರೆ.

-ವೈಭವ್ ತನ್ನ ಚೊಚ್ಚಲ ಐಪಿಎಲ್ ಪಂದ್ಯದಲ್ಲಿ ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸಿ ಎಲ್ಲರ ಗಮನ ಸೆಳೆದಿದ್ದರು. ಸೋಮವಾರ 38 ಎಸೆತಗಳಲ್ಲಿ 101 ರನ್(7 ಬೌಂಡರಿ,11 ಸಿಕ್ಸರ್)ಗಳಿಸಿ ವಿಶ್ವ ಕ್ರಿಕೆಟ್‌ನ್ನು ತನ್ನತ್ತ ಸೆಳೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News