×
Ad

ವೈಭವ್ ಸೂರ್ಯವಂಶಿ ಇನ್ನೆರಡು ವರ್ಷಗಳಲ್ಲಿ ಭಾರತೀಯ ತಂಡದಲ್ಲಿ: ಕೋಚ್ ಭವಿಷ್ಯ

Update: 2025-05-23 21:58 IST

ವೈಭವ್ ಸೂರ್ಯವಂಶಿ | PC : NDTV 

ಹೊಸದಿಲ್ಲಿ: ರಾಜಸ್ಥಾನ ರಾಯಲ್ಸ್ ತಂಡದ 2025ರ ಆವೃತ್ತಿಯ ಐಪಿಎಲ್ ಅಭಿಯಾನ ಹಾದಿ ತಪ್ಪಿರಬಹುದು, ಆದರೆ ಅದು ಭವಿಷ್ಯದ ಸಂಭಾವ್ಯ ಭರವಸೆಯ ಆಟಗಾರ, 14 ವರ್ಷದ ಬ್ಯಾಟಿಂಗ್ ಪ್ರತಿಭೆ ವೈಭವ್ ಸೂರ್ಯವಂಶಿಯನ್ನು ಜಗತ್ತಿಗೆ ಪರಿಚಯಿಸಿದೆ.

ಹದಿಹರೆಯದ ಆಟಗಾರ ಹಾಲಿ ಐಪಿಎಲ್‌ನಲ್ಲಿ ತನ್ನ ಉತ್ಕೃಷ್ಟ ಸ್ಟ್ರೋಕ್-ಪ್ಲೇ ಮತ್ತು ಶಕ್ತಿಶಾಲಿ ಸಿಕ್ಸರ್‌ಗಳ ಮೂಲಕ ಸಂಚಲನ ಮೂಡಿಸಿದ್ದಾರೆ. ಅವರು ಕೇವಲ ಏಳು ಇನಿಂಗ್ಸ್‌ಗಳಿಂದ 252 ರನ್‌ಗಳನ್ನು ಕಲೆ ಹಾಕಿದ್ದಾರೆ.

ವೈಭವ್ ಅವರು ಗುಜರಾತ್ ಟೈಟಾನ್ಸ್ ವಿರುದ್ಧ ಬಾರಿಸಿದ 35 ಎಸೆತಗಳ ಶತಕ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸಿಡಿಸಿದ ಅರ್ಧ ಶತಕವನ್ನು ಅಭಿಮಾನಿಗಳು ಯಾವತ್ತೂ ನೆನಪಿನಲ್ಲಿಟ್ಟುಕೊಳ್ಳಬಲ್ಲರು. ಅವರು ಇನ್ನು ಜೂನ್-ಜುಲೈ ಅವಧಿಯಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳುವ ಭಾರತೀಯ ಅಂಡರ್-19 ತಂಡಕ್ಕೆ ಸೇರ್ಪಡೆಗೊಳ್ಳಲಿದ್ದಾರೆ.

ಇನ್ನು ಎರಡು ವರ್ಷಗಳಲ್ಲಿ ಭಾರತೀಯ ಹಿರಿಯರ ಅಂತರ್‌ರಾಷ್ಟ್ರೀಯ ಟಿ20 ತಂಡಕ್ಕೆ ಸೇರ್ಪಡೆಗೊಳ್ಳಲು ಬೇಕಾಗುವ ಸಾಮರ್ಥ್ಯವನ್ನು ವೈಭವ್ ಸೂರ್ಯವಂಶಿ ಹೊಂದಿದ್ದಾರೆ ಎಂದು ಬಿಹಾರ ಅಂಡರ್-19 ಮತ್ತು ಹಿರಿಯ ಪುರುಷರ ತಂಡಗಳಲ್ಲಿ ಸೂರ್ಯವಂಶಿಗೆ ತರಬೇತಿ ನೀಡಿರುವ ಅಶೋಕ್ ಕುಮಾರ್ ಹೇಳುತ್ತಾರೆ. ಇದನ್ನು ಸಾಧಿಸಲು ಅವರ ದೈಹಿಕ ಕ್ಷಮತೆ ಮತ್ತು ಫೀಲ್ಡಿಂಗ್ ಮೇಲೆ ಗಮನ ಹರಿಸಬೇಕಾಗಿದೆ ಎಂದು ಅವರು ಅಭಿಪ್ರಾಯಪಡುತ್ತಾರೆ.

‘‘ತನ್ನ ದೈಹಿಕ ಕ್ಷಮತೆ ಮತ್ತು ಫೀಲ್ಡಿಂಗ್ ಉತ್ತಮಪಡಿಸಲು ವೈಭವ್‌ ಗೆ ಸಾಧ್ಯವಾದರೆ, ಮುಂದಿನ 2 ವರ್ಷಗಳಲ್ಲಿ ಅವರು ಭಾರತೀಯ ಹಿರಿಯರ ಅಂತರ್‌ರಾಷ್ಟ್ರೀಯ ಟಿ20 ತಂಡದಲ್ಲಿ ಇರುತ್ತಾರೆ. ಬಿಸಿಸಿಐ ಅವರಿಗೆ ಅವಕಾಶ ಕೊಡುತ್ತದೆ ಎಂದು ನಾನು ಭಾವಿಸಿದ್ದೇನೆ. ಯಾಕೆಂದರೆ, 2-4 ಆಟಗಾರರನ್ನು ಹೊರತುಪಡಿಸಿದರೆ, ಅಂತರ್‌ರಾಷ್ಟ್ರೀಯ ಟಿ20 ತಂಡದ ಇತರ ಎಲ್ಲಾ ಸದಸ್ಯರು 25 ವರ್ಷ ಅಥವಾ ಅದಕ್ಕಿಂತ ಕಿರಿಯ ವಯಸ್ಸಿನವರಾಗಿದ್ದಾರೆ’’ ಎಂದು ಶುಕ್ರವಾರ ಐಎಎನ್‌ಎಸ್ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಕುಮಾರ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News