×
Ad

ಭಾರತದ 3ನೇ ಮಹಿಳಾ ಚೆಸ್ ಗ್ರಾಂಡ್‍ಮಾಸ್ಟರ್ ಆದ ವೈಶಾಲಿ

Update: 2023-12-02 22:08 IST

ವೈಶಾಲಿ , ಆರ್. ಪ್ರಜ್ಞಾನಂದ |Photo: @MeghUpdates\ X

ಹೊಸದಿಲ್ಲಿ: ಭಾರತೀಯ ಚೆಸ್ ಆಟಗಾರ್ತಿ ಹಾಗೂ ಚೆಸ್ ಪ್ರತಿಭೆ ಆರ್. ಪ್ರಜ್ಞಾನಂದರ ಸಹೋದರಿ ವೈಶಾಲಿ ರಮೇಶ್‍ಬಾಬು ಶನಿವಾರ ಭಾರತದ ಮೂರನೇ ಮಹಿಳಾ ಗ್ರಾಂಡ್‍ಮಾಸ್ಟರ್ ಆಗಿ ಹೊರಹೊಮ್ಮಿದ್ದಾರೆ. ಅವರು ಶನಿವಾರ 2023 ಎಲೋಬ್ರೆಗಟ್ ಓಪನ್‍ನಲ್ಲಿ 2500 ರೇಟಿಂಗನ್ನು ದಾಟಿದ ಬಳಿಕ ಈ ಅರ್ಹತೆಯನ್ನು ಪಡೆದುಕೊಂಡಿದ್ದಾರೆ.

ಈ ಸಾಧನೆಯೊಂದಿಗೆ, ವೈಶಾಲಿ ಮತ್ತು ಅವರ ತಮ್ಮ ಪ್ರಜ್ಞಾನಂದ ಇತಿಹಾಸದ ಮೊತ್ತ ಮೊದಲ ಒಡಹುಟ್ಟಿದ ಗ್ರಾಂಡ್‍ಮಾಸ್ಟರ್ ಜೋಡಿಯಾಗಿದ್ದಾರೆ.

ಈ ಸಾಧನೆಗೈದ ವಿಶ್ವನಾಥನ್ ಆನಂದ್, ಕೊನೆರು ಹಂಪಿ, ಹರಿಕಾ ದ್ರೋಣವಲ್ಲಿ, ದಿಬ್ಯೇಂದು ಬರುವ, ಆರ್. ಪ್ರಜ್ಞಾನಂದ ಮುಂತಾದವರ ಸಾಲಿಗೆ ವೈಶಾಲಿ ಸೇರ್ಪಡೆಗೊಂಡಿದ್ದಾರೆ.

ಭಾರತದ ಇತರ ಇಬ್ಬರು ಮಹಿಳಾ ಗ್ರಾಂಡ್‍ಮಾಸ್ಟರ್‍ಗಳೆಂದರೆ ಕೊನೆರು ಹಂಪಿ ಮತ್ತು ದ್ರೋಣವಲ್ಲಿ.

ಮುಖ್ಯಮಂತ್ರಿ ಸ್ಟಾಲಿನ್ ಅಭಿನಂದನೆ:

ಈ ಸಾಧನೆಗಾಗಿ ತಮಿಳುನಾಡು ಮುಖ್ಯಮಂತ್ರಿ ಎಮ್.ಕೆ. ಸ್ಟಾಲಿನ್ ಅಕ್ಕ-ತಮ್ಮನನ್ನು ಅಭಿನಂದಿಸಿದ್ದಾರೆ.

“ಭಾರತದ ಮೂರನೇ ಮಹಿಳಾ ಗ್ರಾಂಡ್‍ಮಾಸ್ಟರ್ ಮತ್ತು ತಮಿಳುನಾಡಿನ ಮೊದಲ ಮಹಿಳಾ ಗ್ರಾಂಡ್‍ಮಾಸ್ಟರ್ ಆಗಿರುವ ವೈಶಾಲಿಗೆ ಅಭಿನಂದನೆಗಳು. 2023ರಲ್ಲಿ ನೀವು ಅಮೋಘ ಸಾಧನೆ ಮಾಡಿದ್ದೀರಿ. ನಿಮ್ಮ ಸಹೋದರ ಪ್ರಜ್ಞಾನಂದ ಜೊತೆಗೆ ಮೊದಲ ಒಡಹುಟ್ಟಿದ ಗ್ರಾಂಡ್‍ಮಾಸ್ಟರ್ ಜೋಡಿಯಾಗಿ ನೀವು ಇತಿಹಾಸ ಸೇರಿದ್ದೀರಿ. ನಿಮ್ಮ ಸಾಧನೆ ಬಗ್ಗೆ ನಮಗೆ ಅಗಾಧ ಹೆಮ್ಮೆಯಿದೆ. ನಿಮ್ಮ ಸಾಧನೆಯು ಚೆಸ್ ಆಕಾಂಕ್ಷಿಗಳಿಗೆ ಪ್ರೇರಣೆಯಾಗಿದೆ. ನಮ್ಮ ರಾಜ್ಯದಲ್ಲಿ ಮಹಿಳೆಯರ ಸಬಲೀಕರಣದ ಪ್ರತೀಕವಾಗಿದ್ದೀರಿ’’ ಎಂಬುದಾಗಿ ಸಾಮಾಜಿಕ ಮಾಧ್ಯಮ ಎಕ್ಸ್‍ನಲ್ಲಿ ಸ್ಟಾಲಿನ್ ಬರೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News