T20 ರ‍್ಯಾಂಕಿಂಗ್ ನಲ್ಲಿ ಗರಿಷ್ಠ ರೇಟಿಂಗ್ ಪಾಯಿಂಟ್ಸ್; ಇತಿಹಾಸ ನಿರ್ಮಿಸಿದ ವರುಣ್ ಚಕ್ರವರ್ತಿ
ವರುಣ್ ಚಕ್ರವರ್ತಿ | Photo Credit : PTI
ಹೊಸದಿಲ್ಲಿ, ಡಿ.17: ಐಸಿಸಿ ಪುರುಷರ ಟಿ-20 ಬೌಲರ್ ಗಳ ರ‍್ಯಾಂಕಿಂಗ್ ನಲ್ಲಿ ಅಗ್ರ ಸ್ಥಾನದಲ್ಲಿರುವ ನಿಗೂಢ ಶೈಲಿಯ ಸ್ಪಿನ್ನರ್ ವರುಣ್ ಚಕ್ರವರ್ತಿ ಗರಿಷ್ಠ ರೇಟಿಂಗ್ ಪಾಯಿಂಟ್ಸ್ ಗಳಿಸುವ ಮೂಲಕ ಟಿ-20 ವಿಶ್ವಕಪ್ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ತಯಾರಿ ನಡೆಸುತ್ತಿರುವ ಭಾರತ ಕ್ರಿಕೆಟ್ ತಂಡದ ಪಾಳಯಕ್ಕೆ ಹೊಸ ಹುಮ್ಮಸ್ಸು ತುಂಬಿದ್ದಾರೆ.
ಬಲಗೈ ಸ್ಪಿನ್ನರ್ ವರುಣ್ ಜೀವನಶ್ರೇಷ್ಠ ರೇಟಿಂಗ್ ಪಾಯಿಂಟ್ಸ್ (818) ಪಡೆಯುವ ಮೂಲಕ ಟಿ-20 ಕ್ರಿಕೆಟ್‌ನಲ್ಲಿ ನಂ.1 ರ‍್ಯಾಂಕಿನ ಬೌಲರ್ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದ್ದಾರೆ.
ಈಗ ಸ್ವದೇಶದಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ವರುಣ್ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಮೊದಲ ಮೂರು ಪಂದ್ಯಗಳಲ್ಲಿ ಆರು ವಿಕೆಟ್ ಗಳನ್ನು ಉರುಳಿಸಿದ್ದಾರೆ. ಧರ್ಮಶಾಲಾದಲ್ಲಿ ನಡೆದಿದ್ದ ಪಂದ್ಯದಲ್ಲಿ ನಾಲ್ಕು ಓವರ್‌ಗಳಲ್ಲಿ 11 ರನ್ ನೀಡಿ ಎರಡು ವಿಕೆಟ್ ಗಳನ್ನು ಪಡೆದಿದ್ದರು. ಭಾರತಕ್ಕೆ ಏಳು ವಿಕೆಟ್‌ಗಳ ಸುಲಭ ಗೆಲುವು ತಂದುಕೊಟ್ಟಿದ್ದರು.
ವರುಣ್ ಚಕ್ರವರ್ತಿ (818 ರೇಟಿಂಗ್ ಪಾಯಿಂಟ್ಸ್) ಎರಡನೇ ಸ್ಥಾನದಲ್ಲಿರುವ ನ್ಯೂಝಿಲ್ಯಾಂಡ್ ವೇಗಿ ಜೇಕಬ್ ಡಫಿಗಿಂತ (699 ಅಂಕ) 119 ಅಂಕದಿಂದ ಮುನ್ನಡೆಯಲ್ಲಿದ್ದಾರೆ. 34ರ ಹರೆಯದ ಭಾರತೀಯ ಸ್ಪಿನ್ನರ್ ಶ್ರೇಷ್ಠ ರೇಟಿಂಗ್‌ನೊಂದಿಗೆ ಅಗ್ರ-10ರಲ್ಲಿ ಸ್ಥಾನ ಪಡೆದಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಟಿ-20 ಪಂದ್ಯದಲ್ಲಿ ‘ಪಂದ್ಯಶ್ರೇಷ್ಠ’ ಪ್ರಶಸ್ತಿ ಪಡೆದಿರುವ ಎಡಗೈ ವೇಗದ ಬೌಲರ್ ಅರ್ಷದೀಪ್ ಸಿಂಗ್ ನಾಲ್ಕು ಸ್ಥಾನ ಮೇಲಕ್ಕೇರಿ 16ನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಮಾರ್ಕೊ ಜಾನ್ಸನ್ 14 ಸ್ಥಾನ ಮೇಲಕ್ಕೇರಿ 25ನೇ ರ‍್ಯಾಂಕಿಗೆ ತಲುಪಿದ್ದಾರೆ.
ಟಿ-20 ಬ್ಯಾಟರ್ ಗಳ ರ‍್ಯಾಂಕಿಂಗ್ ನಲ್ಲಿ ಎರಡು ಸ್ಥಾನ ಭಡ್ತಿ ಪಡೆದಿರುವ ತಿಲಕ್ ವರ್ಮಾ ನಾಲ್ಕನೇ ಸ್ಥಾನಕ್ಕೇರಿದ್ದಾರೆ. ವರ್ಮಾ ಅವರ ಸಹ ಆಟಗಾರ ಅಭಿಷೇಕ್ ಶರ್ಮಾ ಟಿ-20 ರ‍್ಯಾಂಕಿಂ ಗ್‌ನಲ್ಲಿ ನಂ.1 ಬ್ಯಾಟರ್ ಆಗಿ ಮುಂದುವರಿದಿದ್ದಾರೆ.
ಪುರುಷರ ಟಿ-20–ಗರಿಷ್ಠ ಬೌಲರ್ ರೇಟಿಂಗ್ಸ್
ಬೌಲರ್ — ರೇಟಿಂಗ್
ಉಮರ್ ಗುಲ್ (ಪಾಕಿಸ್ತಾನ) — 865
ಸ್ಯಾಮುಯೆಲ್ ಬದ್ರೀ (ವಿಂಡೀಸ್) — 864
ಡೇನಿಯಲ್ ವೆಟೋರಿ (ನ್ಯೂಝಿಲ್ಯಾಂಡ್) — 858
ಸುನೀಲ್ ನರೇನ್ (ವೆಸ್ಟ್‌ಇಂಡೀಸ್) — 832
ರಶೀದ್ ಖಾನ್ (ಅಫ್ಘಾನಿಸ್ತಾನ) — 828
ತಬ್ರೈಝ್ ಶಮ್ಸಿ (ದಕ್ಷಿಣ ಆಫ್ರಿಕಾ) — 827
ಶಾಹಿದ್ ಅಫ್ರಿದಿ (ಪಾಕಿಸ್ತಾನ) — 822
ವರುಣ್ ಚಕ್ರವರ್ತಿ (ಭಾರತ) — 818
ಶಾದಾಬ್ ಖಾನ್ (ಪಾಕಿಸ್ತಾನ) — 811
ವನಿಂದು ಹಸರಂಗ (ಶ್ರೀಲಂಕಾ) — 809