ಚೊಚ್ಚಲ ಪಂದ್ಯದಲ್ಲಿ ಗರಿಷ್ಠ ವಿಕೆಟ್; ವರುಣ್ ಚಕ್ರವರ್ತಿ ದಾಖಲೆ
PC: x.com/ImTanujSingh
ಹೊಸದಿಲ್ಲಿ: ಭಾರತದ ಪರ ಚಾಂಪಿಯನ್ಸ್ ಟ್ರೋಫಿಯ ಚೊಚ್ಚಲ ಪಂದ್ಯದಲ್ಲೇ ಗರಿಷ್ಠ ವಿಕೆಟ್ ಗಳಿಸಿದ ದಾಖಲೆಗೆ ಯುವ ಸ್ಪಿನ್ನರ್ ವರುಣ್ ಚಕ್ರವರ್ತಿ ರವಿವಾರ ಪಾತ್ರರಾದರು.
ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನ್ಯೂಝಿಲೆಂಡ್ ವಿರುದ್ಧದ ಪಂದ್ಯದಲ್ಲಿ 42 ರನ್ ಗಳಿಗೆ 5 ವಿಕೆಟ್ ಗಳಿಸಿದ ವರಣ್ ಈ ವಿಶಿಷ್ಟ ದಾಖಲೆ ನಿರ್ಮಿಸಿದರು. ಇವರ ಅದ್ಭುತ ಬೌಲಿಂಗ್ ನಿಂದಾಗಿ ಭಾರತ ತಂಡ ಎದುರಾಳಿ ವಿರುದ್ಧ 44 ರನ್ ಗಳ ಸುಲಭ ಜಯ ದಾಖಲಿಸಿತು. ಇದಕ್ಕೂ ಮುನ್ನ ಇದೇ ಕ್ರೀಡಾಂಗಣದಲ್ಲಿ ಮೊಹ್ಮದ್ ಶಮಿ 53 ರನ್ ಗಳಿಗೆ 5 ವಿಕೆಟ್ ಗಳಿಸಿದ್ದು, ಚಾಂಪಿಯನ್ಸ್ ಟ್ರೋಫಿಯ ಚೊಚ್ಚಲ ಪಂದ್ಯದಲ್ಲಿ ಗರಿಷ್ಠ ವಿಕೆಟ್ ಪಡೆದ ದಾಖಲೆ ಸೃಷ್ಟಿಸಿದ್ದರು. ಒಟ್ಟಾರೆಯಾಗಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಗರಿಷ್ಠ ವಿಕೆಟ್ ಸಾಧನೆ ಮಾಡಿದ ಭಾರತೀಯರ ಸಾಲಿನಲ್ಲಿ ವರುಣ್ ಎರಡನೇ ಸ್ಥಾನದಲ್ಲಿದ್ದಾರೆ. ರವೀಂದ್ರ ಜಡೇಜಾ 2013ರಲ್ಲಿ ಓವಲ್ ನಲ್ಲಿ ನಡೆದ ಪಂದ್ಯದಲ್ಲಿ 36 ರನ್ ಗಳಿಗೆ 5 ವಿಕೆಟ್ ಗಳಿಸಿದ್ದರು.
ಚಾಂಪಿಯನ್ಸ್ ಟ್ರೋಫಿಯ ಚೊಚ್ಚಲ ಪಂದ್ಯದಲ್ಲಿ ಗರಿಷ್ಠ ವಿಕೆಟ್ ಪಡೆದವರಲ್ಲಿ ಜೋಸ್ ಹೇಝಲ್ ವುಡ್ (6/52) ಅಗ್ರಸ್ಥಾನದಲ್ಲಿದ್ದಾರೆ. ಎಡ್ಜ್ ಬಾಸ್ಟನ್ ನಲ್ಲಿ 2017ರಲ್ಲಿ ನ್ಯೂಜಿಲೆಂಡ್ ವಿರುದ್ಧ ಅವರು ಈ ಸಾಧನೆ ಮಾಡಿದ್ದರು. ಇದೀಗ ವರುಣ್ (5/42) ಎರಡನೇ ಸ್ಥಾನದಲ್ಲಿದ್ದಾರೆ.
ಚಾಂಪಿಯನ್ಸ್ ಟ್ರೋಫಿಯ ಒಂದೇ ಪಂದ್ಯದಲ್ಲಿ ಇಬ್ಬರು ಆಟಗಾರರು ಐದು ವಿಕೆಟ್ ಕಬಳಿಸಿದ ಮತ್ತೊಂದು ದಾಖಲೆಯೂ ಈ ಪಂದ್ಯದಲ್ಲಿ ಸೃಷ್ಟಿಯಾಯಿತು. ನ್ಯೂಜಿಲೆಂಡ್ ವೇಗಿ ಮ್ಯಾಟ್ ಹೆನ್ರಿ ಕೂಡಾ ಭಾರತದ ವಿರುದ್ಧ ಐದು ವಿಕೆಟ್ ಪಡೆದರು.