ಭ್ರಷ್ಟಾಚಾರರಹಿತ ಸಂಸ್ಥೆಯ ಪ್ರತಿಷ್ಠೆ ಹಾಳು ಮಾಡಲು ಭ್ರಷ್ಟ, ದುರಂಹಕಾರಿ ವ್ಯಕ್ತಿಯೊಬ್ಬನೇ ಸಾಕು: ವೆಂಕಟೇಶ್ ಪ್ರಸಾದ್ ಟ್ವೀಟ್ ವೈರಲ್
Photo: PTI
ಹೊಸದಿಲ್ಲಿ: ಭಾರತ ತಂಡದ ಪ್ರಮುಖ ಟೀಕಾಕಾರರಲ್ಲಿ ಒಬ್ಬರಾದ ವೆಂಕಟೇಶ್ ಪ್ರಸಾದ್ ಅವರು ಕ್ರಿಕೆಟ್ ವ್ಯವಹಾರಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸುತ್ತಾರೆ. ಈ ಹಿಂದೆ ಕೆ.ಎಲ್. ರಾಹುಲ್ ಹಾಗೂ ಇತರ ಕೆಲವು ಕ್ರಿಕೆಟಿಗರನ್ನು ಸಾರ್ವಜನಿಕವಾಗಿ ಟೀಕಿಸಿದ್ದ ಪ್ರಸಾದ್, ಭಾರತ ಮತ್ತು ಪಾಕಿಸ್ತಾನದ ಸೂಪರ್ 4 ಪಂದ್ಯಕ್ಕೆ ಮಾತ್ರ 'ರಿಸರ್ವ್ ಡೇ' ಅನ್ನು ಏಶ್ಯನ್ ಕ್ರಿಕೆಟ್ ಮಂಡಳಿ ಘೋಷಿಸಿದ ನಂತರ ಇತ್ತೀಚೆಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅನ್ನು ತರಾಟೆಗೆ ತೆಗೆದುಕೊಂಡಿದ್ದರು. ಜಯ್ ಶಾ ನೇತೃತ್ವದ ಎಸಿಸಿ ವಿರುದ್ಧ ಪ್ರಸಾದ್ ಅವರ ವಾಗ್ದಾಳಿಯು ಅಭಿಮಾನಿಗಳ ಗಮನವನ್ನು ಸೆಳೆದಿತ್ತು, ಎಕ್ಸ್ ನಲ್ಲಿ ಅವರ ಪೋಸ್ಟ್ ಇನ್ನೂ ದೊಡ್ಡ ಬಿರುಗಾಳಿಯನ್ನು ಎಬ್ಬಿಸಿತ್ತು.
ತನ್ನ ಪೋಸ್ಟ್ ಅನ್ನು ಬೇರೆ ರೀತಿಯಲ್ಲಿ ಗ್ರಹಿಸಲಾಗುತ್ತಿದೆ ಎಂದು ಹೇಳಿರುವ ಪ್ರಸಾದ್ ಅವರು ಇಂದು ಬೆಳಗ್ಗೆ ತಮ್ಮ ಪೋಸ್ಟ್ ಅನ್ನು ಅಳಿಸಲು ನಿರ್ಧರಿಸಿದರು. ಆದರೆ, ಭಾರತದ ಮಾಜಿ ವೇಗಿ ಕೆಲವು ಬದಲಾವಣೆಗಳೊಂದಿಗೆ ಮತ್ತೊಮ್ಮೆ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
ಒಂದು ಭ್ರಷ್ಟಾಚಾರರಹಿತ ಸಂಸ್ಥೆಯೊಂದರ ಪ್ರತಿಷ್ಠೆಯನ್ನು ಹಾಳು ಮಾಡಲು ಭ್ರಷ್ಟ ಹಾಗೂ ದುರಂಹಕಾರಿ ವ್ಯಕ್ತಿಯೊಬ್ಬನೇ ಸಾಕು. ಅದರ ಪರಿಣಾಮ ಇಡೀ ಸಂಸ್ಥೆಯ ಮೇಲೆ ಸಣ್ಣಮಟ್ಟದಲ್ಲಲ್ಲ ದೊಡ್ಡ ಮಟ್ಟದಲ್ಲಿ ಬೀರುತ್ತದೆ ಇದು ರಾಜಕೀಯ, ಕ್ರೀಡೆ, ಪತ್ರಿಕೋದ್ಯಮ, ಕಾರ್ಪೊರೇಟ್ ಆಗಿರಲಿ ಪ್ರತಿಯೊಂದು ಕ್ಷೇತ್ರದಲ್ಲೂ ನಿಜವಾಗಿದೆ ಎಂದು ಪ್ರಸಾದ್ ಹೊಸ ಪೋಸ್ಟ್ ನಲ್ಲಿ ಬರೆದಿದ್ದಾರೆ
ಅದು ಸಾಮಾನ್ಯ ಟ್ವೀಟ್ ಆಗಿದ್ದು, ಒಬ್ಬ ಭ್ರಷ್ಟ ವ್ಯಕ್ತಿಯು ತನ್ನ ಸಂಸ್ಥೆಯ ಬಹಳಷ್ಟು ಒಳ್ಳೆಯ ಕೆಲಸವನ್ನು ಹೇಗೆ ಹಾಳು ಮಾಡಬಹುದು, ಅದು ಯಾವುದೇ ಕ್ಷೇತ್ರದಲ್ಲಿ ಸಣ್ಣ ಹಾಗೂ ದೊಡ್ಡ ಪ್ರಮಾಣದ ಪರಿಣಾಮಗಳನ್ನು ಉಂಟುಮಾಡಬಹುದು ಎಂಬುದರ ಕುರಿತು ನಾನು ಮಾತನಾಡಿದ್ದೇನೆ. ನಾನು ಇತರ ಟ್ವೀಟ್ ಗಳಲ್ಲಿ ವಿಶ್ವಕಪ್ ಟಿಕೆಟ್ ಗಳ ಸುತ್ತ ಬಿಸಿಸಿಐನ ಅಸಮರ್ಥತೆಯ ಬಗ್ಗೆ ಮಾತನಾಡುತ್ತಿರುವುದರಿಂದ ಇದು ಗೊಂದಲಕ್ಕೆ ಕಾರಣವಾಯಿತು. ಹೀಗಾಗಿ ಅದನ್ನು ಅಳಿಸಲಾಗಿದೆ'' ಎಂದು ಮೊದಲಿನ ಟ್ವೀಟ್ ಅಳಿಸಿದ್ದೇಕೆ ಎಂಬ ಎಕ್ಸ್ ಬಳಕೆದಾರರ ಪ್ರಶ್ನೆಗೆ ಪ್ರಸಾದ್ ಸ್ಪಷ್ಟನೆ ನೀಡಿದರು
ಮುಂಬರುವ ಐಸಿಸಿ ಏಕದಿನ ವಿಶ್ವಕಪ್ ನ ಟಿಕೆಟ್ ಗಳನ್ನು ಮಾರಾಟಕ್ಕೆ ಇಟ್ಟಿರುವ ವಿಧಾನದ ಬಗ್ಗೆ ಪ್ರಸಾದ್ ಈ ಹಿಂದೆ ಬಿಸಿಸಿಐ ಅನ್ನು ಟೀಕಿಸಿದ್ದರು. ಭಾರತ ತಂಡದ ಆಯ್ಕೆಯ ವಿಷಯವಾಗಲಿ, ಮಂಡಳಿಯ ಕಾರ್ಯವೈಖರಿಯಾಗಲಿ ಅಥವಾ ವ್ಯಕ್ತಿಗಳ ಪ್ರದರ್ಶನದ ಕುರಿತಾಗಿ ಪ್ರಸಾದ್ ತಮ್ಮ ವಿಮರ್ಶಾತ್ಮಕ ಅಭಿಪ್ರಾಯವನ್ನು ಹಂಚಿಕೊಂಡಿದ್ದರು.