ಮೂರನೇ ಬಾರಿ ಇರಾನಿ ಕಪ್ ಪ್ರಶಸ್ತಿ ಗೆದ್ದ ವಿದರ್ಭ ತಂಡ : ಶೇಷ ಭಾರತ ವಿರುದ್ಧ 93 ರನ್‌ಗಳ ಗೆಲುವು
Photo Credit : NDTV
ನಾಗಪುರ, ಅ.5: ಇರಾನಿ ಕಪ್ ಪಂದ್ಯದಲ್ಲಿ ತನ್ನ ಪ್ರಾಬಲ್ಯ ಕಾಯ್ದುಕೊಂಡಿರುವ ಹಾಲಿ ರಣಜಿ ಚಾಂಪಿಯನ್ ವಿದರ್ಭ ಕ್ರಿಕೆಟ್ ತಂಡವು ಶೇಷ ಭಾರತ ತಂಡವನ್ನು 93 ರನ್‌ಗಳ ಅಂತರದಿಂದ ಮಣಿಸಿ 2017-18ರ ನಂತರ ಮೂರನೇ ಬಾರಿ ಪ್ರಶಸ್ತಿ ಎತ್ತಿ ಹಿಡಿದಿದೆ.
ಎಲ್ಲ ಐವರು ಬೌಲರ್‌ಗಳು ವಿಕೆಟ್‌ಗಳನ್ನು ಕಬಳಿಸಿದ್ದು, ಯಶ್ ಠಾಕೂರ್(2-47) ಸತತ ಎಸೆತಗಳಲ್ಲಿ ಅಗ್ರ ಸ್ಕೋರರ್ ಯಶ್ ಧುಲ್ (92 ರನ್, 117 ಎಸೆತ, 8 ಬೌಂಡರಿ,1 ಸಿಕ್ಸರ್)ಹಾಗೂ ಅಂಶುಲ್ ಕಾಂಬೋಜ್(0) ವಿಕೆಟ್‌ಗಳನ್ನು ಪಡೆದರು. ಹರ್ಷ ದುಬೆ(4-73)ಯಶಸ್ವಿ ಬೌಲರ್ ಎನಿಸಿಕೊಂಡಿದ್ದು, ಆದಿತ್ಯ ಠಾಕರೆ(2-27)ಕೂಡ ಎರಡು ವಿಕೆಟ್ ಪಡೆದರು.
ಐದನೇ ಹಾಗೂ ಕೊನೆಯ ದಿನವಾದ ರವಿವಾರ ಗೆಲ್ಲಲು 361 ರನ್ ಬೆನ್ನಟ್ಟಿದ ಶೇಷ ಭಾರತ ತಂಡವನ್ನು ವಿದರ್ಭ ತಂಡವು 267 ರನ್‌ಗೆ ಆಲೌಟ್ ಮಾಡಿತು.
93 ರನ್ ಅಂತರದಿಂದ ಜಯಶಾಲಿಯಾಗಿರುವ ವಿದರ್ಭ ತಂಡವು ಪ್ರತೀ ಬಾರಿಯೂ ರಣಜಿ ಟ್ರೋಫಿ ಹಾಗೂ ಇರಾನಿ ಕಪ್ ಗೆಲ್ಲುವ ಸಂಪ್ರದಾಯವನ್ನು ಮುಂದುವರಿಸಿದೆ.
ಗೆಲ್ಲಲು ಕಠಿಣ ರನ್ ಗುರಿ ಪಡೆದಿದ್ದ ಶೇಷ ಭಾರತ ತಂಡವು ರವಿವಾರ 2 ವಿಕೆಟ್‌ಗಳ ನಷ್ಟಕ್ಕೆ 30 ರನ್‌ನಿಂದ ತನ್ನ ಹೋರಾಟ ಮುಂದುವರಿಸಿತು. ಇಂದು ದಿನದಾಟ ಆರಂಭವಾದ ಒಂದು ಗಂಟೆಯಲ್ಲಿ ಶೇಷ ಭಾರತ ತಂಡವು 80 ರನ್‌ಗೆ 5 ವಿಕೆಟ್‌ಗಳನ್ನು ಕಳೆದುಕೊಂಡಿತು.
2 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ನಾಯಕ ರಜತ್ ಪಾಟಿದಾರ್ ಅವರು 10 ರನ್ ಗಳಿಸಿ ನೀಳಕಾಯದ ವೇಗಿ ಆದಿತ್ಯ ಠಾಕರೆ ವಿಕೆಟ್ ಒಪ್ಪಿಸಿದರು. ಋತುರಾಜ್ ಗಾಯಕ್ವಾಡ್(7 ರನ್) ಕೇವಲ 19 ಎಸೆತಗಳನ್ನು ಎದುರಿಸಿ ಪಂದ್ಯದಲ್ಲಿ 2ನೇ ಬಾರಿ ಒಂದಂಕಿ ಸ್ಕೋರ್ ಗಳಿಸಿ ವೇಗದ ಬೌಲರ್ ದರ್ಶನ್ ನಾಲ್ಕಂಡೆಗೆ ವಿಕೆಟ್ ಒಪ್ಪಿಸಿದರು.
ಇಶಾನ್ ಕಿಶನ್ ಅವರು 65 ಎಸೆತಗಳಲ್ಲಿ 35 ರನ್ ಗಳಿಸಿ ಸ್ಪಿನ್ನರ್ ಹರ್ಷ ದುಬೆಗೆ ವಿಕೆಟ್ ಒಪ್ಪಿಸಿದರು. ಸಾರಾಂಶ್ ಜೈನ್(29 ರನ್) ಎಡಗೈ ಸ್ಪಿನ್ನರ್ ಹರ್ಷ ರಾಖಡೆಗೆ ವಿಕೆಟ್ ಒಪ್ಪಿಸಿದಾಗ ಶೇಷ ಭಾರತ ತಂಡವು 133 ರನ್‌ಗೆ 6ನೇ ವಿಕೆಟ್ ಕಳೆದುಕೊಂಡಿತು. ಆಗ ವಿದರ್ಭ ತಂಡ ಭರ್ಜರಿ ಗೆಲುವು ಗಳಿಸುವುದು ಖಚಿತವಾಯಿತು.
6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ 22ರ ವಯಸ್ಸಿನ ಧುಲ್ ಅವರು ಮಾನವ್ ಸುಥರ್(ಔಟಾಗದೆ 56 ರನ್, 113 ಎಸೆತ, 4 ಬೌಂಡರಿ, 1 ಸಿಕ್ಸರ್)ಅವರೊಂದಿಗೆ ಏಳನೇ ವಿಕೆಟ್‌ಗೆ 104 ರನ್ ಜೊತೆಯಾಟ ನಡೆಸಿ ಶೇಷ ಭಾರತಕ್ಕೆ ಗೆಲುವಿನ ವಿಶ್ವಾಸ ಮೂಡಿಸಿದರು.
117 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್ ಸಹಿತ 92 ರನ್ ಗಳಿಸಿದ ಧುಲ್ ಅವರು ಯಶ್ ಠಾಕೂರ್‌ಗೆ ವಿಕೆಟ್ ಒಪ್ಪಿಸಿ ಕೇವಲ 8 ರನ್‌ನಿಂದ ಶತಕ ವಂಚಿತರಾದರು. ಯಶ್ ಠಾಕೂರ್ ಅವರು ಅಂಶುಲ್ ಕಾಂಬೋಜ್ ವಿಕೆಟ್ ಉರುಳಿಸಿದಾಗ ಶೇಷ ಭಾರತ ತಂಡವು 237 ರನ್‌ಗೆ 8ನೇ ವಿಕೆಟ್ ಕಳೆದುಕೊಂಡಿತು.
ಎಡಗೈ ಆಟಗಾರ ಸಾರಾಂಶ್ ಜೈನ್ ಜೊತೆಗೂಡಿ 6ನೇ ವಿಕೆಟ್‌ಗೆ 53 ರನ್ ಸೇರಿಸಿದ ಯಶ್ ಪ್ರತಿರೋಧ ಒಡ್ಡಿದರು. ಎಡಗೈ ಸ್ಪಿನ್ನರ್ ಪಾರ್ಥ ರೆಖಾಡೆ ಅವರು ಸಾರಾಂಶ್‌ಗೆ ಪೆವಿಲಿಯನ್ ಹಾದಿ ತೋರಿಸಿದರು.
8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ಸುಥರ್ ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ತನ್ನ 6ನೇ ಅರ್ಧಶತಕವನ್ನು ಗಳಿಸಿದರು.
ವಿದರ್ಭ ತಂಡವು ತನ್ನ ಮೊದಲ ಇನಿಂಗ್ಸ್‌ನಲ್ಲಿ ಆರಂಭಿಕ ಆಟಗಾರ ಅಥರ್ವ ಟೈಡ್ ಅವರ 143 ರನ್ ಹಾಗೂ ಯಶ್ ರಾಥೋಡ್ ಅವರ 91 ರನ್ ಬೆಂಬಲದಿಂದ 342 ರನ್ ಕಲೆ ಹಾಕಿತು.
ಪಾಟಿದಾರ್(66 ರನ್) ಹಾಗೂ ಅಭಿಮನ್ಯು ಈಶ್ವರನ್(52 ರನ್) ಅರ್ಧಶತಕದ ಕೊಡುಗೆ ನೀಡಿದ ಹೊರತಾಗಿಯೂ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ ಯಶ್ ಠಾಕೂರ್ ಶೇಷ ಭಾರತ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ 214 ರನ್‌ಗೆ ನಿಯಂತ್ರಿಸಿದರು.
ನಾಲ್ಕು ವಿಕೆಟ್ ಗೊಂಚಲು ಪಡೆದ ಅಂಶುಲ್ ಕಾಂಬೋಜ್(4-34) ಅವರು ವಿದರ್ಭ ತಂಡವನ್ನು 2ನೇ ಇನಿಂಗ್ಸ್‌ನಲ್ಲಿ 232 ರನ್‌ಗೆ ನಿಯಂತ್ರಿಸಿದರು. ಆದರೆ 4ನೇ ಇನಿಂಗ್ಸ್‌ನಲ್ಲಿ 361 ರನ್ ಗುರಿ ಪಡೆದ ಶೇಷ ಭಾರತ ತಂಡಕ್ಕೆ ಗೆಲುವು ಮರೀಚಿಕೆಯಾಯಿತು.
ಸಂಕ್ಷಿಪ್ತ ಸ್ಕೋರ್
ವಿದರ್ಭ ಮೊದಲ ಇನಿಂಗ್ಸ್: 342 ರನ್
ಶೇಷ ಭಾರತ ಮೊದಲ ಇನಿಂಗ್ಸ್: 214 ರನ್
ವಿದರ್ಭ ಎರಡನೇ ಇನಿಂಗ್ಸ್: 232 ರನ್
ಶೇಷ ಭಾರತ ಎರಡನೇ ಇನಿಂಗ್ಸ್: 267 ರನ್
(ಯಶ್ ಧುಲ್ 92, ಮಾನವ್ ಸುಥರ್ ಔಟಾಗದೆ 56, ಇಶಾನ್ ಕಿಶನ್ 35, ಸಾರಾಂಶ್ ಜೈನ್ 29, ಹರ್ಷ ದುಬೆ 4-73, ಆದಿತ್ಯ ಠಾಕರೆ 2-27, ಯಶ್ ಠಾಕೂರ್ 2-47)
ಪಂದ್ಯಶ್ರೇಷ್ಠ: ಅಥರ್ವ ಟೈಡ್