ವಿಜಯ ಹಝಾರೆ ಟ್ರೋಫಿ | ಪಡಿಕ್ಕಲ್ ಶತಕ; ಕರ್ನಾಟಕಕ್ಕೆ ದಾಖಲೆಯ ಜಯ
ಜಾರ್ಖಂಡ್ ನ ಇಶಾನ್ ಕಿಶನ್ ಶತಕ ವ್ಯರ್ಥ
ಪಡಿಕ್ಕಲ್ , ಇಶಾನ್ ಕಿಶನ್ | Photo Credit : PTI
ಆಹ್ಮದಾಬಾದ್, ಡಿ. 24: ದೇವದತ್ತ ಪಡಿಕ್ಕಲ್ ರ ಭವ್ಯ ಶತಕದ ನೆರವಿನಿಂದ ಹಾಲಿ ಚಾಂಪಿಯನ್ ಕರ್ನಾಟಕ ವಿಜಯ ಹಝಾರೆ ಟ್ರೋಫಿ ಪಂದ್ಯಾವಳಿಯಲ್ಲಿ ಬುಧವಾರ ಜಾರ್ಖಂಡ್ ತಂಡವನ್ನು ಐದು ವಿಕೆಟ್ಗಳಿಂದ ಸೋಲಿಸಿದೆ. ಇದರೊಂದಿಗೆ ಅದು ಬೃಹತ್ ಮೊತ್ತದ ಗುರಿಯನ್ನು ಯಶಸ್ವಿಯಾಗಿ ಬೆಂಬತ್ತಿ ದಾಖಲೆಯೊಂದನ್ನೂ ನಿರ್ಮಿಸಿದೆ.
ಅಹ್ಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಮ್ ನ ಬಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ದೇವದತ್ತ ಪಡಿಕ್ಕಲ್ 118 ಎಸೆತಗಳಲ್ಲಿ 147 ರನ್ ಗಳನ್ನು ಸಿಡಿಸಿದರು. ಈ ಮೂಲಕ ಜಾರ್ಖಂಡ್ ಪರವಾಗಿ ಇಶಾನ್ ಕಿಶನ್ ಸಿಡಿಸಿದ ಶತಕವನ್ನು ಮಂಕಾಗಿಸಿದರು.
ಮೊದಲು ಬ್ಯಾಟಿಂಗ್ ಮಾಡಿದ ಜಾರ್ಖಂಡ್ ಪರವಾಗಿ ಇಶಾನ್ ಕಿಶನ್ 39 ಎಸೆತಗಳಲ್ಲಿ 125 ರನ್ ಗಳನ್ನು ಸಿಡಿಸಿದ್ದರು. ಅವರ ಶತಕವು ಭಾರತೀಯರೊಬ್ಬರ ಎರಡನೇ ಅತಿ ವೇಗದ ಲಿಸ್ಟ್ ಎ ಶತಕವಾಗಿದೆ.
ಗೆಲ್ಲಲು 413 ರನ್ ಗಳ ಬೃಹತ್ ಗುರಿಯನ್ನು ಬೆಂಬತ್ತಿದ ಕರ್ನಾಟಕ ಇನ್ನೂ 15 ಎಸೆತಗಳು ಬಾಕಿಯಿರುವಂತೆಯೇ ಐದು ವಿಕೆಟ್ಗಳನ್ನು ಕಳೆದುಕೊಂಡು ವಿಜಯವನ್ನು ದಾಖಲಿಸಿತು.
ನಾಯಕ ಮಯಾಂಕ್ ಅಗರ್ವಾಲ್ (34 ಎಸೆತಗಳಲ್ಲಿ 54 ರನ್) ಕರ್ನಾಟಕಕ್ಕೆ ವೇಗದ ಆರಂಭವನ್ನು ನೀಡಿದರು. ಅವರು ಮೊದಲ ವಿಕೆಟ್ಗೆ 11.5 ಓವರ್ಗಳಲ್ಲಿ 114 ರನ್ ಗಳನ್ನು ಸೇರಿಸಿದರು.
ಪಡಿಕ್ಕಲ್ ಜೊತೆಗೆ ಕರುಣ್ ನಾಯರ್ (27 ಎಸೆತಗಳಲ್ಲಿ 29 ರನ್), ಆರ್. ಸ್ಮರಣ್ (21 ಎಸೆತಗಳಲ್ಲಿ 27 ರನ್) ಮತ್ತು ಕೆ.ಎಲ್. ಶ್ರೀಜಿತ್ (32 ಎಸೆತಗಳಲ್ಲಿ 38 ರನ್) ಕರ್ನಾಟಕದ ಇನಿಂಗ್ಸನ್ನು ಬೆಳೆಸಿದರು.
ಪಡಿಕ್ಕಲ್ 87 ಎಸೆತಗಳಲ್ಲಿ ಶತಕವನ್ನು ಪೂರೈಸಿದ ಬಳಿಕ, ರನ್ ಗಳಿಕೆಯ ಗತಿಯನ್ನು ವೃದ್ಧಿಸಿದರು.
ಪಡಿಕ್ಕಲ್ ನಿರ್ಗಮನದ ಬಳಿಕ, ಅಭಿನವ್ ಮನೋಹರ್ (32 ಎಸೆತಗಳಲ್ಲಿ 56 ರನ್) ಮತ್ತು ಚೊಚ್ಚಲ ಪಂದ್ಯ ಆಡುತ್ತಿರುವ ಧ್ರುವ ಪ್ರಭಾಕರ್ (22 ಎಸೆತಗಳಲ್ಲಿ 40 ರನ್) ಮುರಿಯದ ಆರನೇ ವಿಕೆಟ್ಗೆ 88 ರನ್ ಗಳ ಭಾಗೀದಾರಿಕೆ ನಿಭಾಯಿಸಿದರು ಹಾಗೂ ಕರ್ನಾಟಕದ ಅಮೋಘ ವಿಜಯವನ್ನು ಖಾತರಿಪಡಿಸಿದರು.
ಮೊದಲು ಬ್ಯಾಟಿಂಗ್ ಮಾಡಿದ ಜಾರ್ಖಂಡ್ ತಂಡದ ಪರವಾಗಿ ಅದರ ನಾಯಕ ಇಶಾನ್ ಕಿಶನ್ 33 ಎಸೆತಗಳಲ್ಲಿ ಶತಕ ಬಾರಿಸಿ ತಂಡವನ್ನು ಬೃಹತ್ ಮೊತ್ತದತ್ತ ಒಯ್ದರು. ಅವರು 14 ಸಿಕ್ಸರ್ಗಳನ್ನು ಸಿಡಿಸಿದರು. ಅವರ ಪ್ರಯತ್ನದ ಫಲವಾಗಿ ಜಾರ್ಖಂಡ್ 50 ಓವರ್ಗಳಲ್ಲಿ ಒಂಭತ್ತು ವಿಕೆಟ್ಗಳನ್ನು ಕಳೆದುಕೊಂಡು 412 ರನ್ ಗಳ ಬೃಹತ್ ಮೊತ್ತವನ್ನು ದಾಖಲಿಸಿತು.
ಸಂಕ್ಷಿಪ್ತ ಸ್ಕೋರ್
ಜಾರ್ಖಂಡ್ (50 ಓವರ್ಗಳಲ್ಲಿ) 412-9
ಶಿಖರ್ ಮೋಹನ್ 44, ವಿರಾಟ್ ಸಿಂಗ್ 88, ಕುಮಾರ್ ಕುಶಾಗ್ರ 63, ಇಶಾನ್ ಕಿಶನ್ 125
ಅಭಿಲಾಶ್ ಶೆಟ್ಟಿ 4-72, ವಿದ್ಯಾಧರ ಪಾಟೀಲ್ 2-66, ಶ್ರೇಯಸ್ ಗೋಪಾಲ್ 2-79
ಕರ್ನಾಟಕ (47.3 ಓವರ್ಗಳಲ್ಲಿ) 413-5
ಮಯಾಂಕ್ ಅಗರ್ವಾಲ್ 54, ದೇವದತ್ತ ಪಡಿಕ್ಕಲ್ 147, ಕೃಷ್ಣನ್ ಶ್ರೀಜಿತ್ 38, ಅಭಿನವ್ ಮನೋಹರ್ (ಅಜೇಯ) 56, ಧ್ರುವ ಪ್ರಭಾಕರ್ (ಅಜೇಯ) 40
ಸೌರಭ ಶೇಖರ್ 2-81, ಉತ್ಕರ್ಷ ಸಿಂಗ್ 2-71