×
Ad

ವಿಜಯ್ ಹಝಾರೆ ಟ್ರೋಫಿ | ಮಿಂಚಿದ ಹಾರ್ದಿಕ್ ತಮೋರೆ, ಖಾನ್ ಸಹೋದರರು

ಉತ್ತರಾಖಂಡದ ವಿರುದ್ಧ ಗೆದ್ದು ಬೀಗಿದ ಮುಂಬೈ

Update: 2025-12-27 18:16 IST

 ಹಾರ್ದಿಕ್ ತಮೋರೆ | Photo Credit : PTI 

ಜೈಪುರ: ಮುಂಬೈ ತಂಡದ ನಾಯಕ ರೋಹಿತ್ ಶರ್ಮ ಶೂನ್ಯ ಸಂಪಾದನೆ ಮಾಡಿದರೂ, ಅವರ ತದ್ರೂಪಿನಂತಿರುವ ಹಾರ್ದಿಕ್ ತಮೋರೆಯ ಮನಮೋಹಕ ಬ್ಯಾಟಿಂಗ್ ನೆರವಿನಿಂದ ಉತ್ತರಾಖಂಡ ತಂಡದೆದುರು ಮುಂಬೈ ತಂಡ ಜಯಭೇರಿ ಬಾರಿಸಿದೆ.

ಬುಧವಾರ ಸಿಕ್ಕಿಂ ತಂಡದೆದುರು ನಡೆದ ಪಂದ್ಯದಲ್ಲಿ ಮಿಂಚಿನ 155 ರನ್ ಗಳಿಸಿದ್ದ ನಾಯಕ ರೋಹಿತ್ ಶರ್ಮ, ಶುಕ್ರವಾರ ಉತ್ತರಾಖಂಡ ತಂಡದೆದುರು ನಡೆದ ಪಂದ್ಯದಲ್ಲಿ ಮಾತ್ರ ಶೂನ್ಯ ಸಂಪಾದನೆ ಮಾಡಿದರು. ಇದು 2012ರ ನಂತರ ಲಿಸ್ಟ್ ಎ ಪಂದ್ಯವೊಂದರಲ್ಲಿ ಅವರ ಶೂನ್ಯ ಸಂಪಾದನೆಯಾಗಿದೆ.

ಒಂದು ಹಂತದಲ್ಲಿ, 32 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿದ್ದ ಮುಂಬೈ ಪರದಾಡುತ್ತಿತ್ತು. ಈ ಹಂತದಲ್ಲಿ ತಂಡಕ್ಕೆ ಭದ್ರ ಬುನಾದಿ ಹಾಕಿದ ಸರ್ಫರಾಝ್ ಖಾನ್ (55) ಹಾಗೂ ಮುಶೀರ್ ಖಾನ್ (55) ಸಹೋದರರು, ಮುಂಬೈ ತಂಡ 300 ರನ್ ಗಡಿ ದಾಟುವಲ್ಲಿ ಮಹತ್ವದ ಪಾತ್ರ ವಹಿಸಿದರು. ಇವರಿಗೆ ಉತ್ತಮ ಬೆಂಬಲ ನೀಡಿದ ಶಾರ್ದೂಲ್ ಠಾಕೂರ್ (29) ಹಾಗೂ ಶಾಮ್ಸ್ ಮುಲಾನಿ (48), ಮುಂಬೈ ತಂಡದ ಮೊತ್ತ 331 ರನ್ ಆಗಲು ಸಹಕರಿಸಿದರು. ನಾಯಕ ರೋಹಿತ್ ಶರ್ಮರ ತದ್ರೂಪಿನಂತಿರುವ ಹಾರ್ದಿಕ್ ತಮೋರೆ ಕೂಡಾ ಇನಿಂಗ್ಸ್ ಅಂತ್ಯದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು.

332 ರನ್ ಗಳ ಗೆಲುವಿನ ಗುರಿ ಬೆನ್ನತ್ತಿದ್ದ ಉತ್ತರಾಖಂಡ ತಂಡ, ಆರಂಭಿಕ ಬ್ಯಾಟರ್ ಯುವರಾಜ್ ಚೌಧರಿ 96 ರನ್ ನೆರವಿನಿಂದ ಗೆಲುವಿನ ಆಸೆ ಜೀವಂತವಿರಿಸಿಕೊಂಡಿತ್ತು. ಆದರೆ, ಉಳಿದ ಬ್ಯಾಟರ್ ಗಳು ಉತ್ತಮ ಬೆಂಬಲ ನೀಡದೆ ಇದ್ದುದರಿಂದ ಒಂಬತ್ತು ವಿಕೆಟ್ ನಷ್ಟಕ್ಕೆ 280 ರನ್ ಗಳಿಸಿ ಸೋಲನುಭವಿಸಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News