×
Ad

Vijay Hazare Trophy | ಮಯಾಂಕ್, ದೇವದತ್ತ ಪಡಿಕ್ಕಲ್ ಶತಕ; ಕರ್ನಾಟಕಕ್ಕೆ ಸತತ 4ನೇ ಜಯ

Update: 2025-12-31 21:11 IST

ಅಹ್ಮದಾಬಾದ್, ಡಿ.31: ನಾಯಕ ಮಯಾಂಕ್ ಅಗರ್ವಾಲ್ (132 ರನ್, 124 ಎಸೆತ, 15 ಬೌಂಡರಿ, 2 ಸಿಕ್ಸರ್) ಹಾಗೂ ದೇವದತ್ತ ಪಡಿಕ್ಕಲ್ (113 ರನ್, 116 ಎಸೆತ, 10 ಬೌಂಡರಿ, 4 ಸಿಕ್ಸರ್) ಅವರ ಶತಕಗಳು ಮತ್ತು ಕರುಣ್ ನಾಯರ್ ಅವರ ಔಟಾಗದೆ ಗಳಿಸಿದ ಅರ್ಧಶತಕ (62 ರನ್, 34 ಎಸೆತ, 4 ಬೌಂಡರಿ, 4 ಸಿಕ್ಸರ್) ನೆರವಿನಿಂದ ಕರ್ನಾಟಕ ಕ್ರಿಕೆಟ್ ತಂಡ ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಪುದುಚೇರಿ ತಂಡದ ವಿರುದ್ಧ 67 ರನ್‌ ಗಳ ಅಂತರದಿಂದ ಜಯ ಸಾಧಿಸಿದೆ.

ಈ ಮೂಲಕ ಮಯಾಂಕ್ ಬಳಗವು ಟೂರ್ನಿಯಲ್ಲಿ ಸತತ ನಾಲ್ಕನೇ ಪಂದ್ಯವನ್ನು ಗೆದ್ದು, ಅಂಕಪಟ್ಟಿಯ ‘ಎ’ ಗುಂಪಿನಲ್ಲಿ ಎರಡನೇ ಸ್ಥಾನವನ್ನು ಕಾಯ್ದುಕೊಂಡಿದೆ.

ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಮಯಾಂಕ್ ಮತ್ತು ಪಡಿಕ್ಕಲ್ ಮೊದಲ ವಿಕೆಟ್‌ ಗೆ 228 ರನ್‌ಗಳ ಜೊತೆಯಾಟ ನಡೆಸಿ, ಕರ್ನಾಟಕ ತಂಡ ನಿಗದಿತ 50 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 363 ರನ್ ಗಳಿಸಿತು.

ಗೆಲ್ಲಲು 364 ರನ್‌ಗಳ ಗುರಿ ಪಡೆದ ಪುದುಚೇರಿ ತಂಡ ಆರಂಭಿಕ ಬ್ಯಾಟರ್ ಶ್ಯಾಮ್ ಕಂಗಾಯನ್ (68 ರನ್, 66 ಎಸೆತ, 9 ಬೌಂಡರಿ, 1 ಸಿಕ್ಸರ್) ಹಾಗೂ ಜಯಂತ್ ಯಾದವ್ (54 ರನ್, 35 ಎಸೆತ, 4 ಬೌಂಡರಿ, 2 ಸಿಕ್ಸರ್) ಅವರ ಅರ್ಧಶತಕಗಳ ಹೊರತಾಗಿಯೂ, ನಿಗದಿತ 50 ಓವರ್‌ಗಳಲ್ಲಿ 296 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ನಾಯಕ ಅಮನ್ ಖಾನ್ (34 ರನ್, 20 ಎಸೆತ), ಅಜಯ್ ರೊಹೆರಾ (32 ರನ್, 41 ಎಸೆತ) ಹಾಗೂ ವಿಘ್ನೇಶ್ವರನ್ (31 ರನ್, 44 ಎಸೆತ) ಎರಡಂಕೆಯ ಸ್ಕೋರ್ ದಾಖಲಿಸಿದರು.

ಕರ್ನಾಟಕದ ಬೌಲಿಂಗ್ ವಿಭಾಗದಲ್ಲಿ ಮನ್ವಂತ್ ಕುಮಾರ್ (3–52) ಯಶಸ್ವಿ ಬೌಲರ್ ಎನಿಸಿಕೊಂಡರು. ವಿದ್ವತ್ ಕಾವೇರಪ್ಪ (2–30) ಹಾಗೂ ಕರುಣ್ ನಾಯರ್ (2–38) ತಲಾ ಎರಡು ವಿಕೆಟ್‌ಗಳನ್ನು ಪಡೆದರು.

ಸಂಕ್ಷಿಪ್ತ ಸ್ಕೋರ್

ಕರ್ನಾಟಕ: 50 ಓವರ್‌ಗಳಲ್ಲಿ 363/4

(ಮಯಾಂಕ್ ಅಗರ್ವಾಲ್ 132, ದೇವದತ್ತ ಪಡಿಕ್ಕಲ್ 113, ಕರುಣ್ ನಾಯರ್ ಔಟಾಗದೆ 62; ಪಾರ್ಥ ವಘಾನಿ 1–73)

ಪುದುಚೇರಿ: 50 ಓವರ್‌ಗಳಲ್ಲಿ 296/10

(ಶ್ಯಾಮ್ ಕಂಗಾಯನ್ 68, ಜಯಂತ್ ಯಾದವ್ 54, ಅಮನ್ ಖಾನ್ 34; ಮನ್ವಂತ್ ಕುಮಾರ್ 3–52, ವಿದ್ವತ್ ಕಾವೇರಪ್ಪ 2–30, ಕರುಣ್ ನಾಯರ್ 2–38)

ಪಂದ್ಯಶ್ರೇಷ್ಠ: ಮಯಾಂಕ್ ಅಗರ್ವಾಲ್

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News