×
Ad

ಆರ್‌ಸಿಬಿ ಐಪಿಎಲ್ ಟ್ರೋಫಿ ಗೆದ್ದ ಬೆನ್ನಲ್ಲೇ ಸಂಭ್ರಮಪಟ್ಟ ವಿಜಯ್ ಮಲ್ಯ : ಕೊಹ್ಲಿಯನ್ನು ತಂಡಕ್ಕೆ ಆಯ್ಕೆ ಮಾಡಿಕೊಂಡ ಬಗ್ಗೆ ಭಾವುಕ ಪೋಸ್ಟ್

Update: 2025-06-04 10:44 IST

Photo | hindustantimes

ಹೊಸದಿಲ್ಲಿ : 18 ವರ್ಷಗಳ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಐಪಿಎಲ್ ಟ್ರೋಫಿಯನ್ನು ಗೆದ್ದುಕೊಂಡಿದೆ. ಈ ಸಂದರ್ಭದಲ್ಲಿ ತಂಡದ ಮಾಜಿ ಮಾಲಕ, ಭಾರತದ ವಿವಿಧ ಬ್ಯಾಂಕ್‌ಗಳಿಗೆ ಬಹುಕೋಟಿ ವಂಚಿಸಿ  ಲಂಡನ್‌ಗೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ತಂಡಕ್ಕೆ ಮಹತ್ವದ ಸಂದೇಶವನ್ನು ರವಾನಿಸಿದ್ದಾರೆ.

2025ರ ಐಪಿಎಲ್ ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ 18 ವರ್ಷಗಳ ಬಳಿಕ ಟ್ರೋಫಿಯನ್ನು ಗೆದ್ದುಕೊಂಡ ಆರ್‌ಸಿಬಿ ಇತಿಹಾಸವನ್ನು ನಿರ್ಮಿಸಿದೆ.

ಈ ಕುರಿತು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ವಿಜಯ್ ಮಲ್ಯ ಪೋಸ್ಟ್ ಮಾಡಿದ್ದು, ವಿರಾಟ್ ಕೊಹ್ಲಿಯನ್ನು ತಂಡಕ್ಕೆ ಆಯ್ಕೆ ಮಾಡಿದ್ದನ್ನು ನೆನಪಿಸಿಕೊಂಡರು ಮತ್ತು ಐಪಿಎಲ್ ಟ್ರೋಫಿಯನ್ನು ಗೆಲ್ಲುವುದು ದೊಡ್ಡ ಕನಸಾಗಿತ್ತು ಎಂದು ಹೇಳಿದರು.

"ನಾನು ಆರ್‌ಸಿಬಿ ತಂಡವನ್ನು ಕಟ್ಟಿದಾಗ ಬೆಂಗಳೂರಿಗೆ ಐಪಿಎಲ್ ಟ್ರೋಫಿ ಬರಬೇಕು ಎಂಬುದು ನನ್ನ ಕನಸಾಗಿತ್ತು. ಯುವಕನಾಗಿದ್ದ ಕಿಂಗ್ ಕೊಹ್ಲಿಯನ್ನು ಆಯ್ಕೆ ಮಾಡುವ ಸೌಭಾಗ್ಯ ನನಗಿತ್ತು ಮತ್ತು ಅವರು 18 ವರ್ಷಗಳಿಂದ  ಆರ್‌ಸಿಬಿಯೊಂದಿಗೆ ಇದ್ದಾರೆ ಎಂಬುದು ಗಮನಾರ್ಹ. ಆರ್‌ಸಿಬಿ ಇತಿಹಾಸದಲ್ಲಿ ಅಳಿಸಲಾಗದ ಭಾಗವಾಗಿ ಉಳಿದಿರುವ ಕ್ರಿಸ್ ಗೇಲ್ ಮತ್ತು ಎಬಿ ಡಿವಿಲಿಯರ್ಸ್ ಅವರನ್ನು ಆಯ್ಕೆ ಮಾಡುವ ಗೌರವವೂ ನನಗಿತ್ತುʼ ಎಂದು ಹೇಳಿದರು.

ಅಂತಿಮವಾಗಿ, ಐಪಿಎಲ್ ಟ್ರೋಫಿ ಬೆಂಗಳೂರಿಗೆ ಬಂದಿದೆ. ನನ್ನ ಕನಸನ್ನು ನನಸಾಗಿಸಿದ ಎಲ್ಲರಿಗೂ ಅಭಿನಂದನೆಗಳು. ಆರ್‌ಸಿಬಿ ಅಭಿಮಾನಿಗಳು ಅತ್ಯುತ್ತಮರು. ಅವರು ಐಪಿಎಲ್ ಟ್ರೋಫಿಗೆ ಅರ್ಹರು. ಈ ಸಲಾ ಕಪ್ ಬೆಂಗಳೂರಿಗೆ ಎಂದು ಅವರು ಬರೆದಿದ್ದಾರೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಹಲವು ಭಾರತೀಯ ಬ್ಯಾಂಕ್‌ಗಳಿಗೆ ಕೋಟ್ಯಾಂತರ ರೂ. ವಂಚಿಸಿ ವಿಜಯ್ ಮಲ್ಯ ಲಂಡನ್‌ಗೆ ಪರಾರಿಯಾಗಿದ್ದು, ಅವರ ವಿರುದ್ಧ ಭಾರತದಲ್ಲಿ ತನಿಖೆ ನಡೆಯುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News