×
Ad

ಡೋಪಿಂಗ್ ಪರೀಕ್ಷೆಗೆ ಲಭ್ಯರಾಗದ ಮಾಜಿ ಕುಸ್ತಿಪಟು ವಿನೇಶ್ ಫೋಗಟ್‌ ಗೆ ನಾಡಾ ನೋಟಿಸ್

Update: 2024-09-25 22:27 IST

ವಿನೇಶ್ ಫೋಗಟ್‌ | PC : PTI

ಹೊಸದಿಲ್ಲಿ : ಡೋಪಿಂಗ್ ಪರೀಕ್ಷೆಗೆ ಲಭ್ಯರಾಗದ ಮಾಜಿ ಕುಸ್ತಿಪಟು ಹಾಗೂ ಕಾಂಗ್ರೆಸ್ ನಾಯಕಿ ವಿನೇಶ್ ಪೋಗಟ್‌ಗೆ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ(ನಾಡಾ)ಬುಧವಾರ ನೋಟಿಸ್ ನೀಡಿದ್ದು, 14 ದಿನಗಳಲ್ಲಿ ವಿವರ ನೀಡುವಂತೆ ತಿಳಿಸಿದೆ.

ಆಗಸ್ಟ್‌ ನಲ್ಲಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅನರ್ಹಗೊಂಡ ನಂತರ ವಿನೇಶ್ ತನ್ನ ನಿವೃತ್ತಿ ನಿರ್ಧಾರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು. ಕುಸ್ತಿಯಲ್ಲಿ ಮುಂದುವರಿಯುವ ಶಕ್ತಿ ನನಗಿಲ್ಲ ಎಂದಿದ್ದರು. 50 ಕೆಜಿ ವಿಭಾಗದ ಫೈನಲ್ ಪಂದ್ಯಕ್ಕಿಂತ ಮೊದಲು ನಡೆದ ತೂಕ ಪರೀಕ್ಷೆಯಲ್ಲಿ 100 ಗ್ರಾಮ್ ಹೆಚ್ಚು ತೂಕವಿದ್ದ ಕಾರಣಕ್ಕೆ 29ರ ವಯಸ್ಸಿನ ವಿನೇಶ್ ಅನರ್ಹರಾಗಿದ್ದರು.

ನಾಡಾದ ರಿಜಿಸ್ಟರ್ಡ್ ಟೆಸ್ಟಿಂಗ್ ಪೂಲ್(ಆರ್‌ಟಿಪಿ)ನಲ್ಲಿ ನೋಂದಾಯಿಸಿಕೊಂಡಿರುವ ಎಲ್ಲ ಕ್ರೀಡಾಪಟುಗಳು ಡೋಪಿಂಗ್ ಪರೀಕ್ಷೆಗೆ ತಮ್ಮ ಲಭ್ಯತೆಯ ಕುರಿತು ವಿವರಗಳನ್ನು ಒದಗಿಸುವ ಅಗತ್ಯವಿದೆ. ವಿನೇಶ್ ಕೂಡ ಇದರಲ್ಲಿದ್ದಾರೆ.

ಸೋನೆಪತ್‌ ನಲ್ಲಿರುವ ಖರ್ಖೋಡಾ ಗ್ರಾಮದ ತಮ್ಮ ನಿವಾಸದಲ್ಲಿ ಸೆಪ್ಟಂಬರ್ 9ರಂದು ಡೋಪಿಂಗ್ ಪರೀಕ್ಷೆಗೆ ವಿನೇಶ್ ಫೋಗಟ್ ಲಭ್ಯವಿರಲಿಲ್ಲ. ಈ ವಿಚಾರದ ಕುರಿತು ನಾವು ಅಂತಿಮ ನಿರ್ಧಾರಕ್ಕೆ ಬರುವ ಮೊದಲು ಹೇಳಿಕೆ ನೀಡುವಂತೆ ಆಹ್ವಾನಿಸಿದ್ದೇವೆ ಎಂದು ನಾಡಾ ತನ್ನ ನೋಟಿಸ್‌ ನಲ್ಲಿ ತಿಳಿಸಿದೆ.

ಪ್ಯಾರಿಸ್ ಒಲಿಂಪಿಕ್ಸ್ ಅಭಿಯಾನವು ಭಾರೀ ನಿರಾಶೆಯೊಂದಿಗೆ ಅಂತ್ಯವಾದ ನಂತರ ವಿನೇಶ್ ಅವರು ಕ್ರೀಡೆಯಿಂದ ನಿವೃತ್ತಿಯಾಗಿದ್ದರು. ಫೈನಲ್‌ಗೆ ತಲುಪಿದ್ದರೂ ಚಿನ್ನದ ಪದಕದ ಸುತ್ತಿನಲ್ಲಿ ಆಡುವ ಅರ್ಹತೆ ಪಡೆದಿರಲಿಲ್ಲ.

ವಿನೇಶ್ ಹಾಗೂ ಇನ್ನೋರ್ವ ಕುಸ್ತಿಪಟು ಬಜರಂಗ್ ಪುನಿಯಾ ಇತ್ತೀಚೆಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ವಿನೇಶ್ ಅವರು ಮುಂಬರುವ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಜುಲಾನಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News