×
Ad

ಪ್ಯಾರಿಸ್ ನಿಂದ ತವರಿಗೆ ಹಿಂದಿರುಗಿದ ವಿನೇಶ್ ಫೋಗಟ್: ಗದ್ಗದಿತರಾದ ತಾರಾ ಕುಸ್ತಿಪಟು

Update: 2024-08-17 13:12 IST

Photo:X/ANI

ಹೊಸದಿಲ್ಲಿ: ಪ್ಯಾರಿಸ್ ನಿಂದ ದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮರಳಿದ ಭಾರತದ ತಾರಾ ಕುಸ್ತಿಪಟು ವಿನೇಶ್ ಫೋಗಟ್, ಗದ್ಗದಿತರೂ ಆಗಿರುವುದು ಕಂಡು ಬಂದಿತು ಎಂದು TOI ಸುದ್ದಿ ಸಂಸ್ಥೆ ವರದಿ ಮಾಡಿದೆ.

50 ಕೆಜಿ ವಿಭಾಗದ ಕುಸ್ತಿಯಲ್ಲಿ ಫೈನಲ್ ತಲುಪಿದ್ದ ವಿನೇಶ್ ಫೋಗಟ್, ಅನಿರೀಕ್ಷಿತ ಪರಿಸ್ಥಿತಿಯಲ್ಲಿ ಒಲಿಂಪಿಕ್ಸ್ ಫೈನಲ್ ಪಂದ್ಯದಿಂದ ಅನರ್ಹಗೊಂಡಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.

ಈ ವೈಫಲ್ಯದ ನಂತರ ತವರಿಗೆ ಮರಳಿದ ವಿನೇಶ್ ಫೋಗಟ್ ಅವರಿಗೆ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರಿ ಬಿಗಿ ಭದ್ರತೆ ಒದಗಿಸಲಾಗಿತ್ತು. ಅವರನ್ನು ಸ್ವಾಗತಿಸಲು ಅವರ ಕುಟುಂಬದ ಸದಸ್ಯರಲ್ಲದೆ, ಸ್ನೇಹಿತರು, ಬಜರಂಗ್ ಪುನಿಯಾ ಹಾಗೂ ಸಾಕ್ಷಿ ಮಲಿಕ್ ಕೂಡಾ ವಿಮಾನ ನಿಲ್ದಾಣದಲ್ಲಿ ಹಾಜರಿದ್ದರು.

ನಂತರ, ಸುದ್ದಿಗಾರರೊಂದಿಗೆ ಮಾತನಾಡಿದ ವಿನೇಶ್ ಫೋಗಟ್ ಅವರ ಸಹೋದರ ಹರ್ವಿಂದರ್ ಫೋಗಟ್, “ಆಕೆಯನ್ನು ಸ್ವಾಗತಿಸಲು ಜನರೂ ಗ್ರಾಮದಲ್ಲಿ ಕಾಯುತ್ತಿದ್ದಾರೆ. ವಿನೇಶ್ ಅವರನ್ನು ಭೇಟಿಯಾಗಲು ಮತ್ತು ಅವರನ್ನು ಪ್ರೋತ್ಸಾಹಿಸಲು ಜನರು ಉತ್ಸುಕರಾಗಿದ್ದಾರೆ” ಎಂದು ಹೇಳಿದರು.

50 ಕೆಜಿ ಕುಸ್ತಿ ವಿಭಾಗದಲ್ಲಿ 100 ಗ್ರಾಂ ತೂಕ ಹೆಚ್ಚಿದ್ದ ಕಾರಣಕ್ಕೆ ಒಲಿಂಪಿಕ್ಸ್ ಫೈನಲ್ ಪಂದ್ಯದಲ್ಲಿ ಆಡುವ ಅರ್ಹತೆ ಕಳೆದುಕೊಂಡಿದ್ದ ವಿನೇಶ್ ಫೋಗಟ್, ಈ ಕುರಿತು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಈ ಮೇಲ್ಮನವಿಯಲ್ಲಿ ತನಗೆ ಜಂಟಿ ಬೆಳ್ಳಿ ಪದಕ ಘೋಷಿಸಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದರು. ತೀರ್ಪಿನ ನಿರೀಕ್ಷೆಯಲ್ಲಿ ಅವರು ಪ್ಯಾರಿಸ್ ನಲ್ಲೇ ಉಳಿದುಕೊಂಡಿದ್ದರು. ಆದರೆ, ಬುಧವಾರ ಅವರ ಮೇಲ್ಮನವಿಯನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ವಜಾಗೊಳಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News