ಐಪಿಎಲ್ ನೀತಿ ಸಂಹಿತೆ ಉಲ್ಲಂಘನೆ: ಕೊಹ್ಲಿಗೆ ಪಂದ್ಯ ಶುಲ್ಕದ 50 ಶೇ. ದಂಡ

Update: 2024-04-22 16:11 GMT

ವಿರಾಟ್ ಕೊಹ್ಲಿ | PC : PTI 

ಮುಂಬೈ: ರವಿವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯವೊಂದರಲ್ಲಿ ಅಂಪಯರ್ಗಳ ಜೊತೆಗೆ ವಾಗ್ವಾದ ನಡೆಸಿರುವುದಕ್ಕಾಗಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್  ಸಿ ಬಿ) ತಂಡದ ಆಟಗಾರ ವಿರಾಟ್ ಕೊಹ್ಲಿಗೆ ಸೋಮವಾರ ಪಂದ್ಯ ಶುಲ್ಕದ ಅರ್ಧದಷ್ಟು ದಂಡ ವಿಧಿಸಲಾಗಿದೆ.

ಕೋಲ್ಕತದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಕೋಲ್ಕತ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧದ ಪಂದ್ಯದ ವೇಳೆ ಘಟನೆ ನಡೆದಿತ್ತು. ಕೋಲ್ಕತ ನೈಟ್ ರೈಡರ್ಸ್ ನ ಹರ್ಶಿತ್ ರಾಣಾರ ಸೊಂಟಕ್ಕಿಂತ ಎತ್ತರದಲ್ಲಿ ಹಾದು ಹೋದ ಫುಲ್ ಟಾಸ್ ಎಸೆತವೊಂದನ್ನು ಕೊಹ್ಲಿ ಕ್ಯಾಚ್ ನೀಡಿದ್ದರು. ಈ ಪಂದ್ಯದಲ್ಲಿ ಬಳಿಕ ಆರ್ಸಿಬಿ ಒಂದು ರನ್ನ ಸೋಲನುಭವಿಸಿದೆ.

ಆ ಎಸೆತ ಸೊಂಟದಿಂದ ಎತ್ತರದಲ್ಲಿ ಫುಲ್ ಟಾಸ್ ಆಗಿ ಹೋಗಿರುವುದರಿಂದ ಅದನ್ನು ‘ನೋಬಾಲ್’ ಎಂದು ಘೋಷಿಸಬೇಕು ಎನ್ನುವುದು ಕೊಹ್ಲಿಯ ಬೇಡಿಕೆಯಾಗಿತ್ತು. ಆದರೆ, ಅಂಪಯರ್ ಅದು ಸರಿಯಾದ ಎಸೆತವಾಗಿದೆ ಎಂಬ ತೀರ್ಪು ನೀಡಿದರು.

ಆಗ 7 ಎಸೆತಗಳಲ್ಲಿ 18 ರನ್ಗಳನ್ನು ಗಳಿಸಿದ್ದ ಕೊಹ್ಲಿ ಮೈದಾನದ ಅಂಪಯರ್ ಜೊತೆಗೆ ವಾದಿಸಿದರು. ಯಾವುದೇ ಫಲ ಸಿಗದಾಗ ಪೆವಿಲಿಯನ್ಗೆ ವಾಪಸಾದರು. ವಾಪಸ್ ಹೋಗುವ ದಾರಿಯಲ್ಲಿ ಕೋಪದಿಂದ ಕಸದ ತೊಟ್ಟಿಯೊಂದನ್ನು ತುಳಿದರು.

ಅದು ಸರಿಯಾದ ಎಸೆತವೇ ಎನ್ನುವುದನ್ನು ನಿರ್ಧರಿಸಲು ಅಂಪಯರ್ಗಳು ಹಾಕ್-ಐ ತಂತ್ರಜ್ಞಾನವನ್ನು ಬಳಸಿದ್ದರು. ಈ ತಂತ್ರಜ್ಞಾನವು ನೋಬಾಲ್ಗಳ ಎತ್ತರವನ್ನು ಅಳೆಯುತ್ತದೆ.

ಕೊಹ್ಲಿ ಈ ಎಸೆತವನ್ನು ಎದುರಿಸಿದಾಗ ಕ್ರೀಸ್ನಿಂದ ಹೊರಗಿದ್ದರು. ಅವರ ಬ್ಯಾಟ್ ಚೆಂಡಿಗೆ ತಗಲಿದಾಗ ಚೆಂಡು ಅವರ ಸೊಂಟಕ್ಕಿಂತ ಹೆಚ್ಚಿನ ಎತ್ತರದಲ್ಲಿತ್ತಾದರೂ, ಅದು ಕೆಳಮುಖವಾಗಿ ಸಾಗುತ್ತಿತ್ತು. ಒಂದು ವೇಳೆ ಅವರು ಕ್ರೀಸ್ನಲ್ಲಿದ್ದಿದ್ದರೆ, ಚೆಂಡು ಅವರ ಸೊಂಟಕ್ಕಿಂತ ಕೆಳಮಟ್ಟದಲ್ಲಿ ಹಾದು ಹೋಗುತ್ತಿತ್ತು ಎನ್ನುವುದನ್ನು ಎಸೆತದ ಪಥ ತೋರಿಸಿತು. ಹಾಗಾಗಿ, ಅಂಪಯರ್ ಆ ಎಸೆತವನ್ನು ನೋಬಾಲ್ ಎಂದು ಘೋಷಿಸಲಿಲ್ಲ.

‘‘ಕೋಲ್ಕತ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಐಪಿಎಲ್ ನೀತಿ ಸಂಹಿತೆಯ ವಿಧಿ 2.8ರಡಿಯಲ್ಲಿ ಒಂದನೇ ಮಟ್ಟದ ಅಪರಾಧವನ್ನು ಮಾಡಿದ್ದಾರೆ. ಅದಕ್ಕಾಗಿ ಅವರಿಗೆ ಅವರ ಪಂದ್ಯ ಶಲ್ಕದ 50 ಶೇಕಡ ದಂಡ ವಿಧಿಸಲಾಗಿದೆ’’ ಎಂದು ಐಪಿಎಲ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News