×
Ad

ವಿರಾಟ್ ಕೊಹ್ಲಿ ದಾಖಲೆ ಮುರಿಯುವತ್ತ ರಿಷಭ್ ಪಂತ್ ಚಿತ್ತ

Update: 2025-06-30 19:47 IST

ವಿರಾಟ್ ಕೊಹ್ಲಿ ,  ರಿಷಭ್ ಪಂತ್ | PC : X 

ಬರ್ಮಿಂಗ್‌ ಹ್ಯಾಮ್: ಭಾರತ ಕ್ರಿಕೆಟ್ ತಂಡದ ವಿಕೆಟ್‌ಕೀಪರ್-ಬ್ಯಾಟರ್ ರಿಷಭ್ ಪಂತ್ ಎಜ್‌ ಬಾಸ್ಟನ್‌ ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ದ್ವಿತೀಯ ಟೆಸ್ಟ್ ಪಂದ್ಯದ ವೇಳೆ ಐತಿಹಾಸಿಕ ಸಾಧನೆ ಮಾಡುವತ್ತ ಚಿತ್ತ ಹರಿಸಿದ್ದಾರೆ.

ಹೆಡ್ಡಿಂಗ್ಲೆಯಲ್ಲಿ ನಡೆದ ಸರಣಿಯ ಆರಂಭಿಕ ಪಂದ್ಯದಲ್ಲಿ ಸತತ ಶತಕಗಳನ್ನು ಸಿಡಿಸಿದ್ದ ಪಂತ್ ಅವರು ಇನ್ನೊಂದು ಶತಕ ಗಳಿಸಿದರೆ ಸ್ಪೆಷಲ್ ಲಿಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಲಿದ್ದಾರೆ.

ಪಂತ್ ಮೊದಲ ಟೆಸ್ಟ್‌ನಲ್ಲಿ ಆಕ್ರಮಣಕಾರಿ ಬ್ಯಾಟಿಂಗ್‌ನ ಮೂಲಕ ಇಂಗ್ಲೆಂಡ್ ಬೌಲರ್‌ಗಳನ್ನು ಚೆಂಡಾಡಿದ್ದರು. ಎರಡು ಇನಿಂಗ್ಸ್‌ಗಳಲ್ಲಿ 134 ಹಾಗೂ 118 ರನ್ ಗಳಿಸಿದ್ದರು. ಆದರೆ ಪಂತ್ ವೀರೋಚಿತ ಪ್ರದರ್ಶನದ ಹೊರತಾಗಿಯೂ ಇಂಗ್ಲೆಂಡ್ ತಂಡವು 371 ರನ್ ಚೇಸ್ ಮಾಡುವಲ್ಲಿ ಯಶಸ್ವಿಯಾಗಿತ್ತು.

ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ 5 ಶತಕಗಳನ್ನು ಸಿಡಿಸಿರುವ ಪಂತ್ ಬರ್ಮಿಂಗ್‌ ಹ್ಯಾಮ್‌ ನಲ್ಲಿ ಇನ್ನೊಂದು ಶತಕ ಗಳಿಸಿದರೆ ಕೊಹ್ಲಿ ಅವರ ಆಂಗ್ಲರ ವಿರುದ್ಧ ಶತಕದ ದಾಖಲೆ(5)ಮುರಿಯಲಿದ್ದಾರೆ. ಇಂಗ್ಲೆಂಡ್ ವಿರುದ್ಧ 6 ಶತಕಗಳನ್ನು ಗಳಿಸಿರುವ ಮುಹಮ್ಮದ್ ಅಝರುದ್ದೀನ್ ದಾಖಲೆಯನ್ನು ಸರಿಗಟ್ಟಲಿದ್ದಾರೆ. ಸಚಿನ್ ತೆಂಡುಲ್ಕರ್ ಹಾಗೂ ರಾಹುಲ್ ದ್ರಾವಿಡ್ ಮಾತ್ರ ಆಂಗ್ಲರ ಎದುರು ಹೆಚ್ಚು(ತಲಾ 7) ಶತಕಗಳನ್ನು ಗಳಿಸಿದ್ದಾರೆ.

ಪಂತ್ ಅವರ ದಾಖಲೆಯು ಇಂಗ್ಲೆಂಡ್ ವಾತಾವರಣವನ್ನು ಎದುರಿಸುವ ಅವರ ಸಾಮರ್ಥ್ಯವನ್ನು ತೋರಿಸುತ್ತದೆ. ಪಂತ್ ಕೇವಲ 10 ಟೆಸ್ಟ್ ಪಂದ್ಯಗಳ 19 ಇನಿಂಗ್ಸ್‌ಗಳಲ್ಲಿ 42.52ರ ಸರಾಸರಿಯಲ್ಲಿ 4 ಶತಕ ಹಾಗೂ 2 ಅರ್ಧಶತಕಗಳ ಸಹಿತ ಒಟ್ಟು 808 ರನ್ ಗಳಿಸಿದ್ದಾರೆ.

ಒಂದು ವೇಳೆ ಪಂತ್ ಅವರು 2ನೇ ಟೆಸ್ಟ್‌ನಲ್ಲಿ ಶತಕ ಗಳಿಸಿದರೆ, ಇಂಗ್ಲೆಂಡ್ ನೆಲದಲ್ಲಿ ಸತತ 3 ಶತಕಗಳನ್ನು ಗಳಿಸಿದ ಪ್ರವಾಸಿ ತಂಡದ 7ನೇ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. ಈ ಪ್ರಮುಖ ಪಟ್ಟಿಯಲ್ಲಿ ಲೆಜೆಂಡ್‌ಗಳಾದ ಡಾನ್ ಬ್ರಾಡ್ಮನ್, ಬ್ರಿಯಾನ್ ಲಾರಾ ಹಾಗೂ ರಾಹುಲ್ ದ್ರಾವಿಡ್ ಅವರಿದ್ದಾರೆ. ದ್ರಾವಿಡ್ 2001ರಲ್ಲಿ ಈ ಸಾಧನೆ ಮಾಡಿದ ಏಕೈಕ ಭಾರತೀಯನಾಗಿದ್ದಾರೆ.

ಭಾರತ ತಂಡ ವು ಸರಣಿಯನ್ನು ಸಮಬಲಗೊಳಿಸುವತ್ತ ದೃಷ್ಟಿ ಹರಿಸಿದ್ದು, ಎಜ್‌ ಬಾಸ್ಟನ್‌ನಲ್ಲಿ ಪಂತ್ ಅವರ ಫಾರ್ಮ್ ನಿರ್ಣಾಯಕವಾಗಿದೆ. ಎಡಗೈ ಬ್ಯಾಟರ್ ಪಂತ್ ತನ್ನ ಬಿರುಸಿನ ಬ್ಯಾಟಿಂಗ್‌ ನ ಮೂಲಕ ಇನ್ನಷ್ಟು ದಾಖಲೆ ಮುರಿಯುವ ಮೂಲಕ ಭಾರತದ ವಿಶ್ವಾಸವನ್ನು ಹೆಚ್ಚಿಸಲಿದ್ದಾರೆಯೇ ಎಂದು ನೋಡಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News