ರಣಜಿಯಲ್ಲೂ ಸದ್ದು ಮಾಡದ ವಿರಾಟ್ ಕೊಹ್ಲಿ: ರೈಲ್ವೇಸ್ ವೇಗಿಯ ಬಾಲ್‌ನಲ್ಲಿ ಕ್ಲೀನ್ ಬೌಲ್ಡ್!
ವಿರಾಟ್ ಕೊಹ್ಲಿ | PTI
ಹೊಸದಿಲ್ಲಿ: ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ದಿಲ್ಲಿ ಹಾಗೂ ರೈಲ್ವೇಸ್ ತಂಡಗಳ ನಡುವೆ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ತಮ್ಮ ಅಭಿಮಾನಿಗಳನ್ನು ನಿರಾಶೆಗೊಳಿಸಿದ್ದು, ಕೇವಲ 6 ರನ್ ಗಳಿಸಿ ಮೈದಾನದಿಂದ ನಿರ್ಗಮಿಸಿದರು. ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಕಣ್ತುಂಬಿಕೊಳ್ಳಲು ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಕಿಕ್ಕಿರಿದು ನೆರೆದಿದ್ದ ಅವರ ಅಭಿಮಾನಿಗಳು, ಕೊಹ್ಲಿ ಔಟಾಗುತ್ತಿದ್ದಂತೆಯೆ ದೊಡ್ಡ ಪ್ರಮಾಣದಲ್ಲಿ ಕ್ರೀಡಾಂಗಣದಿಂದ ನಿರ್ಗಮಿಸಿದರು.
ವಿರಾಟ್ ಕೊಹ್ಲಿಯನ್ನು ರೈಲ್ವೇಸ್ ತಂಡದ ವೇಗಿ ಹಿಮಾಂಶು ಸಂಗ್ವಾನ್ ಬೌಲ್ಡ್ ಮಾಡಿದರು. 13 ವರ್ಷಗಳ ನಂತರ ದೇಶೀಯ ಕ್ರಿಕೆಟ್ ಗೆ ಮರಳಿರುವ ವಿರಾಟ್ ಕೊಹ್ಲಿ, ಯಶ್ ಧುಲ್ ಬಹುಬೇಗನೆ ನಿರ್ಗಮಿಸಿದ ನಂತರ, ದಿಲ್ಲಿ ತಂಡಕ್ಕೆ ಆಸರೆಯಾಗಬಹುದು ಎಂದು ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳು ನಿರೀಕ್ಷಿಸಿದ್ದರು. ನಾಲ್ಕನೆಯವರಾಗಿ ವಿರಾಟ್ ಕೊಹ್ಲಿ ಕ್ರೀಸಿಗೆ ಬರುತ್ತಿದ್ದಂತೆಯೆ, ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳು “ಕೊಹ್ಲಿ, ಕೊಹ್ಲಿ” ಎಂಬ ಘೋಷಣೆಗಳನ್ನು ಕೂಗಿದರು.
ಆದರೆ, 36 ವರ್ಷದ ವಿರಾಟ್ ಕೊಹ್ಲಿ, ಕೇವಲ 15 ಬಾಲ್ ಗಳನ್ನು ಎದುರಿಸಿ ರೈಲ್ವೇಸ್ ವೇಗಿ ಹಿಮಾಂಶು ಸಂಗ್ವಾನ್ ಗೆ ವಿಕೆಟ್ ಒಪ್ಪಿಸಿದರು. ಹಿಮಾಂಶು ಸಂಗ್ವಾನ್ ಅವರ ಬಾಲನ್ನು ಅದ್ಭುತವಾಗಿ ಬೌಂಡರಿಗೆ ಬಾರಿಸಿದ ವಿರಾಟ್ ಕೊಹ್ಲಿ, ಅವರ ನಂತರದ ಇನ್ ಸ್ವಿಂಗರ್ ಅನ್ನು ಅಂದಾಜಿಸುವಲ್ಲಿ ವಿಫಲವಾಗಿ, ಕ್ಲೀನ್ ಬೌಲ್ಡ್ ಆದರು.
ವಿರಾಟ್ ಕೊಹ್ಲಿ ಔಟಾದ ನಂತರ, ಮೂರು ವಿಕೆಟ್ ಕಳೆದುಕೊಂಡು ಕೇವಲ 86 ರನ್ ಗಳಿಸಿರುವ ದಿಲ್ಲಿ ತಂಡ ಸಂಕಷ್ಟಕ್ಕೆ ಸಿಲುಕಿದೆ. ಅದಿನ್ನೂ ರೈಲ್ವೇಸ್ ಮೊತ್ತಕ್ಕಿಂತ 155 ರನ್ ಗಳಿಂದ ಹಿಂದುಳಿದಿದೆ.