ವಿರಾಟ್ ಕೊಹ್ಲಿಯ ಮೊಣಕಾಲಿನ ಊತ ಗಂಭೀರವಾಗಿಲ್ಲ: ಶುಭಮನ್ ಗಿಲ್ ಸ್ಪಷ್ಟನೆ
ವಿರಾಟ್ ಕೊಹ್ಲಿ, ಶುಭಮನ್ ಗಿಲ್ | PTI
ಹೊಸದಿಲ್ಲಿ: ಭಾರತದ ಬ್ಯಾಟಿಂಗ್ ಆಧಾರಸ್ತಂಭ ವಿರಾಟ್ ಕೊಹ್ಲಿ ಆರೋಗ್ಯವಂತರಾಗಿದ್ದು, ಇಂಗ್ಲೆಂಡ್ ವಿರುದ್ಧ ರವಿವಾರ ನಡೆಯಲಿರುವ ಎರಡನೇ ಏಕದಿನ ಅಂತರರಾಷ್ಟ್ರೀಯ ಪಂದ್ಯಕ್ಕೆ ಲಭ್ಯ ಇರಲಿದ್ದಾರೆ ಎಂದು ಟೀಮ್ ಇಂಡಿಯಾದ ಉಪ ನಾಯಕ ಶುಭಮನ್ ಗಿಲ್ ಹೇಳಿದ್ದಾರೆ. ಈ ಮೂಲಕ ಕೊಹ್ಲಿ ಫಿಟ್ನೆಸ್ ಕುರಿತ ಕಳವಳಕ್ಕೆ ಸಂಬಂಧಿಸಿ ಸ್ಪಷ್ಟನೆ ನೀಡಿದ್ದಾರೆ.
ಪಾಕಿಸ್ತಾನ ಹಾಗೂ ದುಬೈನಲ್ಲಿ ಫೆಬ್ರವರಿ 19ರಿಂದ ಆರಂಭವಾಗಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡವು ಅಂತಿಮ ತಯಾರಿ ನಡೆಸುತ್ತಿದ್ದು, ಕೊಹ್ಲಿ ಬಲ ಮೊಣಕಾಲಿನಲ್ಲಿ ಊತ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ನಾಗ್ಪುರದಲ್ಲಿ ಗುರುವಾರ ನಡೆದಿದ್ದ ಏಕದಿನ ಸರಣಿಯಲ್ಲಿ ಮೊದಲ ಪಂದ್ಯದಿಂದ ವಂಚಿತರಾಗಿದ್ದರು.
87 ರನ್ ಗಳಿಸಿ ಇಂಗ್ಲೆಂಡ್ ವಿರುದ್ಧ ನಾಗ್ಪುರದಲ್ಲಿ ಭಾರತ ತಂಡವು 4 ವಿಕೆಟ್ಗಳಿಂದ ಗೆಲ್ಲಲು ನೆರವಾಗಿದ್ದ ಗಿಲ್, ‘‘ಕೊಹ್ಲಿ ಅವರ ಮೊಣಕಾಲಿನ ಗಾಯ ಗಂಭೀರವಾಗಿಲ್ಲ, ನಿನ್ನೆಯ(ಬುಧವಾರ)ಪ್ರಾಕ್ಟೀಸ್ ವೇಳೆ ಅವರು ಚೆನ್ನಾಗಿದ್ದರು. ಗುರುವಾರ ಬೆಳಗ್ಗೆ ಏಳುವಾಗ ಅವರ ಮೊಣಕಾಲಿನಲ್ಲಿ ಊತ ಇತ್ತು. ಅವರು ಖಂಡಿತವಾಗಿಯೂ 2ನೇ ಏಕದಿನ ಪಂದ್ಯದ ವೇಳೆ ತಂಡಕ್ಕೆ ವಾಪಸಾಗಲಿದ್ದಾರೆ’’ಎಂದು ಹೇಳಿದ್ದಾರೆ.