ತಾನೆದುರಿಸಿದ ಅತ್ಯಂತ ಕಠಿಣ ಬೌಲರ್‌ಗಳ ಹೆಸರನ್ನು ಹಂಚಿಕೊಂಡ ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ | PTI
ಬೆಂಗಳೂರು: ಟೆಸ್ಟ್ ಕ್ರಿಕೆಟ್ ಮಾದರಿಯಲ್ಲಿ ತಾವೆದುರಿಸಿದ ಅತ್ಯಂತ ಕಠಿಣ ಬೌಲರ್ ಇಂಗ್ಲೆಂಡ್ ತಂಡದ ಜೇಮ್ಸ್ ಆ್ಯಂಡರ್ಸನ್ ಎಂದು ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ. ಹಾಗೆಯೇ, ಏಕದಿನ ಕ್ರಿಕೆಟ್ ಮಾದರಿಯಲ್ಲಿ ಶ್ರೀಲಂಕಾ ತಂಡದ ವೇಗಿ ಲಸಿತ್ ಮಲಿಂಗ ಹಾಗೂ ಇಂಗ್ಲೆಂಡ್ ತಂಡದ ಸ್ಪಿನ್ನರ್ ಆದಿಲ್ ರಶೀದ್ ತಾವೆದುರಿಸಿದ ಅತ್ಯಂತ ಕಠಿಣ ಬೌಲರ್‌ಗಳು ಎಂದು ಅವರು ಹೆಸರಿಸಿದ್ದಾರೆ.
ಅಲ್ಲದೆ, ಟಿ-20 ಕ್ರಿಕೆಟ್ ಮಾದರಿಯಲ್ಲಿ ಸುನೀಲ್ ನರೈನ್ ತಾವೆದುರಿಸಿದ ಅತ್ಯಂತ ಕಠಿಣ ಬೌಲರ್ ಎಂದೂ ಅವರು ಹೇಳಿಕೊಂಡಿದ್ದಾರೆ.
ಆರ್‌ಸಿಬಿ ಪಾಡ್‌ಕಾಸ್ಟ್‌ನ ಮುಂಬರುವ ಸಂಚಿಕೆಯಲ್ಲಿ ದಕ್ಷಿಣ ಆಫ್ರಿಕಾ ತಂಡದ ಮಾಜಿ ವಿಕೆಟ್ ಕೀಪರ್ ಮಾರ್ಕ್ ಬೌಷರ್ ಅವರೊಂದಿಗೆ ನಡೆಸಿರುವ ಸಂವಾದದಲ್ಲಿ, ನನಗೆ ಒಂದಿಷ್ಟು ಗಾಲ್ಫ್ ಕ್ರೀಡೆಯನ್ನು ಆಡುವಂತೆ ಸಲಹೆ ನೀಡಿದ್ದು ಮಾರ್ಕ್ ಬೌಷರ್ ಎಂದು ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ.
"ನಾನು ಆರಂಭದಲ್ಲಿ ಆಟವಾಡಿದ ಎಲ್ಲ ಆಟಗಾರರ ಪೈಕಿ, ಮಾರ್ಕ್ ಬೌಷರ್ ನನ್ನ ಮೇಲೆ ತೀವ್ರ ಪ್ರಭಾವ ಬೀರಿದರು. ನನ್ನ ದೌರ್ಬಲ್ಯವೇನಿರಬಹುದೆಂದು ಅವರು ಗುರುತಿಸಿದರು. ನಾನು ಮುಂದಿನ ಹಂತಕ್ಕೆ ಹೋಗಬೇಕಿತ್ತು. ಹೀಗಾಗಿ, ನಾನು ಅವರಲ್ಲಿ ಏನೂ ಕೇಳದೆ ಅದನ್ನು ಸಾಧಿಸುವುದು ಅಗತ್ಯವಾಗಿತ್ತು. ಈಗ ಮೂರ್ನಾಲ್ಕು ವರ್ಷಗಳಿಂದ ನಾನು ವೀಕ್ಷಕ ವಿವರಣೆ ನೀಡಲು ಬಂದಾಗ, ನೀವು ಭಾರತಕ್ಕಾಗಿ ಆಡದಿರುವುದು ನೀವು ನಿಮಗೇ ಮಾಡಿಕೊಳ್ಳುತ್ತಿರುವ ವಂಚನೆ ಎಂದು ಮಾರ್ಕ್ ಬೌಷರ್ ನನಗೆ ಹೇಳಿದ್ದರು" ಎಂದೂ ಅವರು ಹೇಳಿಕೊಂಡಿದ್ದಾರೆ.