ಟೆಸ್ಟ್ ಕ್ರಿಕೆಟ್ ಗೆ ವಿರಾಟ್ ಕೊಹ್ಲಿ ವಿದಾಯ : ಒಂದು ಯುಗದ ಅಂತ್ಯ
ವಿರಾಟ್ ಕೊಹ್ಲಿ | PTI
ಹೊಸದಿಲ್ಲಿ: ಜಾಗತಿಕ ಕ್ರಿಕೆಟ್ ಕಂಡ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ ಸೋಮವಾರ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದು, ಒಂದು ಯುಗದ ಅಂತ್ಯವಾಗಿದೆ.
ಕಳೆದ ಹದಿನಾಲ್ಕು ವರ್ಷಗಳ ಕಾಲ ಟೀಮ್ ಇಂಡಿಯಾದ ಟೆಸ್ಟ್ ತಂಡದ ಅವಿಭಾಜ್ಯ ಅಂಗವಾಗಿದ್ದ ಹಾಗೂ ನಾಯಕನಾಗಿ ಅನೇಕ ಐತಿಹಾಸಿಕ ಗೆಲುವುಗಳನ್ನು ತಂದುಕೊಟ್ಟಿದ್ದ ಕೊಹ್ಲಿ ಅವರ ಈ ನಿರ್ಧಾರ ಕ್ರಿಕೆಟ್ ಲೋಕಕ್ಕೆ ಅಚ್ಚರಿ ಮೂಡಿಸಿದೆ. ಆದರೆ ಇದು ತೀರಾ ಅನಿರೀಕ್ಷಿತವೂ ಆಗಿರಲಿಲ್ಲ.
ಕೊಹ್ಲಿ ನಿವೃತ್ತಿಯಿಂದ ಕ್ರಿಕೆಟ್ ಅಭಿಮಾನಿಗಳು ಮತ್ತು ವಿಶ್ಲೇಷಕರು ಭಾವುಕರಾಗಿದ್ದಾರೆ. ಇತ್ತೀಚೆಗಷ್ಟೇ ಇನ್ನೋರ್ವ ಸೂಪರ್ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಕೊಹ್ಲಿ ಅವರ ಈ ನಿರ್ಧಾರ ಬಂದಿರುವುದು ಮಹತ್ವ ಪಡೆದುಕೊಂಡಿದೆ.
ಎಲ್ಲಾ ಮಾದರಿ ಕ್ರಿಕೆಟ್ ಗಳಲ್ಲೂ ರಾಜನೇ ಆಗಿದ್ದ ’ಕಿಂಗ್ ಕೊಹ್ಲಿ’ ಟೆಸ್ಟ್ ಕ್ರಿಕೆಟ್ ಅನ್ನು ಅತಿಯಾಗಿ ಪ್ರೀತಿಸಿದ್ದರು. ಟಿ20 ಕ್ರಿಕೆಟ್ ನಿಂದಾಗಿ ಟೆಸ್ಟ್ ಕ್ರಿಕೆಟ್ ನ ಪ್ರಭಾವ ಜನಪ್ರಿಯತೆ ಕಡಿಮೆಯಾಗುತ್ತಿದ್ದಾಗ ಅದನ್ನು ಈವರೆಗೂ ಜೀವಂತವಾಗಿಟ್ಟ ಜನಪ್ರಿಯವಾಗಿ ಉಳಿಸಿದ ಶ್ರೇಯಸ್ಸಿನ ಬಹುಪಾಲು ವಿರಾಟ್ ಗೆ ಸಲ್ಲುತ್ತದೆ.
ಟೆಸ್ಟ್ ಕ್ರಿಕೆಟ್ ನ ಸವಾಲುಗಳು ಮತ್ತು ಅದರಿಂದ ಕಲಿತ ಪಾಠಗಳನ್ನು ಅವರು ಸ್ಮರಿಸಿದ್ದಾರೆ. ತಮ್ಮ ನಿರ್ಧಾರ ವೈಯಕ್ತಿಕವಾದುದು ಹಾಗೂ ಸರಿಯಾದ ಸಮಯ ಎಂದು ಅನಿಸಿದ್ದರಿಂದ ಈ ನಿರ್ಧಾರ ತೆಗೆದುಕೊಂಡಿದ್ದಾಗಿ ಸ್ಪಷ್ಟಪಡಿಸಿದ್ದಾರೆ.
ವಿರಾಟ್ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಲು ಹೊರಟಿದ್ದಾರೆ ಎಂದು ವರದಿಯಾದ ಬಳಿಕ ಕ್ರಿಕೆಟ್ ಅಭಿಮಾನಿಗಳೆಲ್ಲರೂ ದುಃಖಿತರಾಗಿದ್ದರು. ಆದರೆ ಬಿಸಿಸಿಐ ವಿರಾಟ್ ಅವರಲ್ಲಿ ತಮ್ಮ ನಿರ್ಧಾರವನ್ನು ಮರುಚಿಂತಿಸುವಂತೆ ಹೇಳಿತ್ತು ಎಂಬ ವರದಿಗಳು ಒಂದಿಷ್ಟು ಆಶಾ ಕಿರಣ ಮೂಡಿಸಿದ್ದವು. ಆದರೆ ಈಗ ಕಿಂಗ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಅವರ ಟೆಸ್ಟ್ ವೃತ್ತಿಜೀವನ ಸಾಧನೆ ಮತ್ತು ಸ್ಥಿರತೆಯ ಪ್ರತೀಕವಾಗಿದೆ. 2011 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ಟೆಸ್ಟ್ ಪದಾರ್ಪಣೆ ಮಾಡಿದಾಗಿನಿಂದ, ಅವರು ವಿಶ್ವದ ಅತ್ಯುತ್ತಮ ಬ್ಯಾಟರ್ ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡರು.
ಕೊಹ್ಲಿ ಅವರ ವೃತ್ತಿಜೀವನದ ಪ್ರಮುಖ ಹೈಲೈಟ್ ಗಳಲ್ಲಿ ಅವರ ನಾಯಕತ್ವದ ಅವಧಿ ಎದ್ದು ಕಾಣುತ್ತದೆ. 2014 ರಲ್ಲಿ ಎಂ.ಎಸ್ ಧೋನಿ ಅವರಿಂದ ನಾಯಕತ್ವವನ್ನು ವಹಿಸಿಕೊಂಡ ನಂತರ, ಕೊಹ್ಲಿ ಭಾರತ ಟೆಸ್ಟ್ ತಂಡವನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು. ಅವರ ನಾಯಕತ್ವದಲ್ಲಿ, ಭಾರತ ತಂಡವು ವಿಶ್ವದ ನಂಬರ್ 1 ಟೆಸ್ಟ್ ತಂಡವಾಗಿ ಹೊರಹೊಮ್ಮಿತು ಮತ್ತು ಹಲವು ಐತಿಹಾಸಿಕ ಸರಣಿಗಳನ್ನು ಗೆದ್ದುಕೊಂಡಿತು. ವಿಶೇಷವಾಗಿ ವಿದೇಶಿ ನೆಲದಲ್ಲಿ ಭಾರತದ ಪ್ರದರ್ಶನ ಕೊಹ್ಲಿ ನಾಯಕತ್ವದಲ್ಲಿ ಗಣನೀಯವಾಗಿ ಸುಧಾರಿಸಿತು.
ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾದಂತಹ ದೇಶಗಳಲ್ಲಿನ ಕಠಿಣ ಸವಾಲುಗಳನ್ನು ಮೆಟ್ಟಿ ನಿಂತು ಭಾರತ ತಂಡ ಸರಣಿ ಗೆಲುವುಗಳನ್ನು ಸಾಧಿಸಿತು. ಅವರ ಆಕ್ರಮಣಕಾರಿ ನಾಯಕತ್ವ ಶೈಲಿ ಮತ್ತು ತಂಡದಲ್ಲಿ ಗೆಲ್ಲುವ ಮನೋಭಾವವನ್ನು ತುಂಬಿದ ರೀತಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಯಿತು.
ನಾಯಕನಾಗಿ 68 ಟೆಸ್ಟ್ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ ಕೊಹ್ಲಿ, 40 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ. ಅವರ ನಾಯಕತ್ವದಲ್ಲಿ ಭಾರತವು ಮೊದಲ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗೆ ತಲುಪಿತ್ತು. ಬ್ಯಾಟಿಂಗ್ ನಲ್ಲಿ, ಕೊಹ್ಲಿ ಹಲವು ಸ್ಮರಣೀಯ ಟೆಸ್ಟ್ ಇನ್ನಿಂಗ್ಸ್ ಗಳನ್ನು ಆಡಿದ್ದಾರೆ. ಒತ್ತಡದ ಸಂದರ್ಭಗಳಲ್ಲಿ ತಂಡಕ್ಕೆ ಆಸರೆಯಾಗಿ ನಿಂತು ಶತಕಗಳನ್ನು ಸಿಡಿಸುವುದು ಅವರ ವಿಶೇಷತೆಯಾಗಿತ್ತು.
ಆಸ್ಟ್ರೇಲಿಯ ವಿರುದ್ಧ ಅಡಿಲೇಡ್ ನಲ್ಲಿ ಗಳಿಸಿದ ಅವರ ಆರಂಭಿಕ ಶತಕಗಳು, ದಕ್ಷಿಣ ಆಫ್ರಿಕಾ ವಿರುದ್ಧ ಪುಣೆಯಲ್ಲಿ ಗಳಿಸಿದ ಅಜೇಯ 254 ರನ್ ಅವರ ವೃತ್ತಿಜೀವನದ ಕೆಲವು ಪ್ರಮುಖ ಇನ್ನಿಂಗ್ಸ್ ಗಳಾಗಿವೆ.
ನಾಯಕನಾಗಿ 20 ಟೆಸ್ಟ್ ಶತಕಗಳನ್ನು ಗಳಿಸಿದ ಏಕೈಕ ಭಾರತೀಯ ಆಟಗಾರ ವಿರಾಟ್ ಕೊಹ್ಲಿ. ಸತತ ನಾಲ್ಕು ಟೆಸ್ಟ್ ಸರಣಿಗಳಲ್ಲಿ ದ್ವಿಶತಕ ಗಳಿಸಿದ ವಿಶ್ವದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಯೂ ವಿರಾಟ್ ಗಿದೆ.
ವೇಗವಾಗಿ 7000, 8000 ಟೆಸ್ಟ್ ರನ್ ಗಳನ್ನು ಗಳಿಸಿದ ಭಾರತೀಯ ಬ್ಯಾಟ್ಸ್ ಮನ್ ಆಗಿರುವ ಕೊಹ್ಲಿ 2018 ರಲ್ಲಿ ನಾಯಕನಾಗಿ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ನಿರ್ಮಿಸಿದ್ದಾರೆ.ಇದಲ್ಲದೆ, ಟೆಸ್ಟ್ ಶ್ರೇಯಾಂಕದಲ್ಲಿ ದೀರ್ಘಕಾಲದವರೆಗೆ ಅಗ್ರಸ್ಥಾನವನ್ನು ಅಲಂಕರಿಸಿದ್ದರು.
ವಿರಾಟ್ ಕೊಹ್ಲಿ ಅವರ ಟೆಸ್ಟ್ ಕ್ರಿಕೆಟ್ ನಿವೃತ್ತಿ ಒಂದು ಯುಗ ಅಂತ್ಯಗೊಂಡಂತೆ. ಅವರ ಆಕ್ರಮಣಕಾರಿ ಶೈಲಿ, ಅಸಾಧಾರಣ ಬ್ಯಾಟಿಂಗ್ ಕೌಶಲ್ಯ, ಮತ್ತು ನಾಯಕನಾಗಿ ತಂಡಕ್ಕೆ ನೀಡಿದ ಕೊಡುಗೆ ಭಾರತೀಯ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಲ್ಪಡುತ್ತದೆ.
ಅವರು ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿದ್ದರೂ, ಅವರ ಪರಂಪರೆ ಮತ್ತು ದಾಖಲೆಗಳು ಮುಂದಿನ ಪೀಳಿಗೆಯ ಕ್ರಿಕೆಟಿಗರಿಗೆ ಸ್ಫೂರ್ತಿಯಾಗಿ ಉಳಿಯುತ್ತವೆ.