ವಿರಾಟ್ ಕೊಹ್ಲಿಯ ಬಿಳಿ ಗಡ್ಡದ ಚಿತ್ರ ವೈರಲ್; ಗರಿಗೆದರಿದ ಏಕದಿನ ಕ್ರಿಕೆಟ್ ನಿವೃತ್ತಿ ಕುರಿತ ಚರ್ಚೆ!
ವಿರಾಟ್ ಕೊಹ್ಲಿ | PC : X \ @DoctorLFC
ಲಂಡನ್: ಬಿಳಿ ಗಡ್ಡದೊಂದಿಗಿರುವ ಇತ್ತೀಚಿನ ಫೋಟೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ, ಕ್ರಿಕೆಟಾಗ ವಿರಾಟ್ ಕೊಹ್ಲಿ ಮತ್ತೆ ಚರ್ಚೆಯ ಕೇಂದ್ರಬಿಂದುವಾಗಿದ್ದಾರೆ. ಲಂಡನ್‌ನಲ್ಲಿ ಶಶ್ ಪಟೇಲ್ ಎಂಬವರೊಂದಿಗಿರುವ ಈ ಚಿತ್ರವು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದು, ಕೆಲವರು ಇದನ್ನು ಕಿಂಗ್ ಕೊಹ್ಲಿಯ ಏಕದಿನ ಕ್ರಿಕೆಟ್ ನಿವೃತ್ತಿಯ ಸಂಕೇತವಾಗಿರಬಹುದು ಎಂದು ಊಹಿಸಿದ್ದಾರೆ.
ಜುಲೈ 10ರಂದು ಯುವರಾಜ್ ಸಿಂಗ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಕೊಹ್ಲಿ ಕಾಣಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ಟೆಸ್ಟ್ ನಿವೃತ್ತಿ ಕುರಿತು ಮಾತನಾಡುವಾಗ, ತಮ್ಮ ಗಡ್ಡಕ್ಕೆ ಪ್ರತಿ ಕೆಲವು ದಿನಗಳಿಗೊಮ್ಮೆ ಬಣ್ಣ ಹಚ್ಚುವ ಬಗ್ಗೆ ತಮಾಷೆಯಾಗಿ ಉಲ್ಲೇಖಿಸಿದ್ದರು.
ಕೊಹ್ಲಿಯ ಈ ರೀತಿಯ 'ಲುಕ್' ಮೊದಲ ಬಾರಿಯೇನು ಗಮನ ಸೆಳೆಯುತ್ತಿರುವುದಲ್ಲ. 2023ರ ಜುಲೈನಲ್ಲಿ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ತೆಗೆಯಲಾದ ಫೋಟೋದಲ್ಲೂ ಅವರ ಬೂದು ಗಡ್ಡ ಅಭಿಮಾನಿಗಳ ಗಮನಕ್ಕೆ ಬಂದಿತ್ತು.
ಕಳೆದ ವರ್ಷ ವೆಸ್ಟ್ ಇಂಡೀಸ್ ನಲ್ಲಿ ಭಾರತ ವಿಶ್ವಕಪ್ ಗೆದ್ದ ನಂತರ ಕೊಹ್ಲಿ ಟಿ20 ಅಂತರಾಷ್ಟ್ರೀಯ ಪಂದ್ಯಗಳಿಂದ ನಿವೃತ್ತರಾದರು. ಮೇ 2025ರಲ್ಲಿ 14 ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿ ಕ್ರಿಕೆಟ್ ಜಗತ್ತಿಗೆ ಅಚ್ಚರಿ ಉಂಟುಮಾಡಿದ್ದರು. ಈ ತಿಂಗಳು ಮೈದಾನಕ್ಕೆ ಮರಳುವ ನಿರೀಕ್ಷೆಯಿದ್ದರೂ, ಭಾರತದ ಬಾಂಗ್ಲಾದೇಶ ಪ್ರವಾಸ ಮುಂದೂಡಲ್ಪಟ್ಟಿರುವುದರಿಂದ ಅವರ ವಾಪಸ್ಸು ವಿಳಂಬವಾಗಿದೆ.
ಈಗ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅಕ್ಟೋಬರ್ ನಲ್ಲಿ ನಡೆಯುವ ಆಸ್ಟ್ರೇಲಿಯಾದ ಸೀಮಿತ ಓವರ್ ಗಳ ಪ್ರವಾಸದಲ್ಲಿ ಭಾರತ ತಂಡವನ್ನು ಮತ್ತೆ ಸೇರುವ ಸಾಧ್ಯತೆ ಇದೆ. ಈ ಸರಣಿಯಲ್ಲಿ ಭಾರತವು ಮೂರು ಏಕದಿನ ಹಾಗೂ ಐದು ಟಿ20 ಪಂದ್ಯಗಳನ್ನು ಆಡಲಿದೆ.