84ನೇ ಅಂತರ್‌ರಾಷ್ಟ್ರೀಯ ಶತಕ ಸಿಡಿಸಿದ ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ | Photo Credit : PTI
ರಾಯ್ಪುರ, ಡಿ.3: ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಈಗ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ತನ್ನ ಶ್ರೇಷ್ಠ ಫಾರ್ಮ್ ಮುಂದುವರಿಸಿದ್ದು, ತಾನೋರ್ವ ವಿಶ್ವ ಶ್ರೇಷ್ಠ ಕ್ರಿಕೆಟಿಗ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು.
ರಾಂಚಿಯಲ್ಲಿ ನಡೆದಿದ್ದ ಮೊದಲ ಏಕದಿನ ಪಂದ್ಯದಲ್ಲಿ ಆಕರ್ಷಕ ಶತಕ ಗಳಿಸಿದ್ದ ಭಾರತದ ಶ್ರೇಷ್ಠ ಆಟಗಾರ ಕೊಹ್ಲಿ ಅವರು ಶಾಹೀದ್ ವೀರ್ ನಾರಾಯಣ ಸಿಂಗ್ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಎರಡನೇ ಪಂದ್ಯದಲ್ಲಿ ಮತ್ತೊಂದು ಶತಕ ಸಿಡಿಸಿ ಮಿಂಚಿದ್ದಾರೆ.
ರಾಂಚಿಯಲ್ಲಿ 120 ಎಸೆತಗಳಲ್ಲಿ 135 ರನ್ ಗಳಿಸಿ ಭಾರತ ತಂಡ 17 ರನ್‌ನಿಂದ ಗೆಲ್ಲಲು ನೆರವಾಗಿದ್ದ ಕೊಹ್ಲಿ, ಕೇವಲ 90 ಎಸೆತಗಳಲ್ಲಿ ಮತ್ತೊಮ್ಮೆ ಮೂರಂಕೆಯನ್ನು ದಾಟಿದರು.
ಕೊಹ್ಲಿ ಅವರು ಏಕದಿನ ಕ್ರಿಕೆಟ್‌ನಲ್ಲಿ 53ನೇ ಹಾಗೂ ಎಲ್ಲ ಮಾದರಿಗಳ ಕ್ರಿಕೆಟ್(ಟೆಸ್ಟ್, ಏಕದಿನ, ಟಿ20)ಗಳಲ್ಲಿ 84ನೇ ಶತಕವನ್ನು ಸಿಡಿಸಿ ಗಮನ ಸೆಳೆದರು.
ಕೊಹ್ಲಿ ಅವರು ಗರಿಷ್ಠ ಅಂತರ್ರಾಷ್ಟ್ರೀಯ ಶತಕ ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಒಟ್ಟು 100 ಶತಕಗಳನ್ನು ಗಳಿಸಿರುವ ಸಚಿನ್ ತೆಂಡುಲ್ಕರ್ ಮೊದಲ ಸ್ಥಾನದಲ್ಲಿದ್ದಾರೆ.
ಭಾರತದ ಮಾಜಿ ನಾಯಕ ಕೊಹ್ಲಿ ಇದೀಗ ನಾಲ್ಕು ವಿವಿಧ ದೇಶಗಳ ವಿರುದ್ಧ ಏಳು ಹಾಗೂ ಅದಕ್ಕಿಂತ ಹೆಚ್ಚು ಶತಕಗಳನ್ನು ಗಳಿಸಿರುವ ಸಾಧನೆ ಮಾಡಿದ್ದಾರೆ. ಶ್ರೀಲಂಕಾದ ವಿರುದ್ಧ 10 ಶತಕ, ವೆಸ್ಟ್‌ಇಂಡೀಸ್ ವಿರುದ್ಧ 9, ಆಸ್ಟ್ರೇಲಿಯ ವಿರುದ್ಧ ಎಂಟು ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ 7 ಶತಕಗಳನ್ನು ಗಳಿಸಿದ್ದಾರೆ. ಕೇವಲ ಸಚಿನ್ ತೆಂಡುಲ್ಕರ್ ಮಾತ್ರ ಹಲವು ಎದುರಾಳಿ ತಂಡಗಳ ವಿರುದ್ಧ ಇದೇ ರೀತಿಯ ಸಾಧನೆ ಮಾಡಿದ್ದಾರೆ. ತೆಂಡುಲ್ಕರ್ ಅವರು ಆಸ್ಟ್ರೇಲಿಯ ವಿರುದ್ಧ 9 ಹಾಗೂ ಶ್ರೀಲಂಕಾ ತಂಡದ ವಿರುದ್ಧ 8 ಶತಕಗಳನ್ನು ದಾಖಲಿಸಿದ್ದಾರೆ.
ಮಾರ್ಕೊ ಜಾನ್ಸನ್ ಬೌಲಿಂಗ್ ನಲ್ಲಿ ಒಂದು ರನ್ ಗಳಿಸುವ ಮೂಲಕ ಕೊಹ್ಲಿ ಶತಕ ಪೂರೈಸಿದರು. ಆಗ ಸ್ಟೇಡಿಯಂನಲ್ಲಿ ನೆರೆದಿದ್ದ ಪ್ರೇಕ್ಷಕರು ‘ಕೊಹ್ಲಿ, ಕೊಹ್ಲಿ’ಎಂದು ಕೂಗುತ್ತಾ ಸಂಭ್ರಮಿಸಿದರು.
ಕೊಹ್ಲಿ ಇದೀಗ ಏಕದಿನ ಇನಿಂಗ್ಸ್ ನಲ್ಲಿ 11 ಬಾರಿ ಸತತ ಎರಡು ಅಥವಾ ಅದಕ್ಕಿಂತ ಹೆಚ್ಚು ಶತಕಗಳನ್ನು ದಾಖಲಿಸಿ ಮಹತ್ವದ ಸಾಧನೆ ಮಾಡಿದ್ದಾರೆ. ಎಬಿ ಡಿ ವಿಲಿಯರ್ಸ್ ಆರು ಬಾರಿ ಈ ಸಾಧನೆ ಮಾಡಿದ್ದರು.