ವಿಜಯ ಹಝಾರೆ ಟ್ರೋಫಿ: ವಿರಾಟ್ ಕೊಹ್ಲಿ ಲಭ್ಯ
ವಿರಾಟ್ ಕೊಹ್ಲಿ | Photo Credit : PTI
ಮುಂಬೈ, ಡಿ.3: ಮುಂಬರುವ ವಿಜಯ ಹಝಾರೆ ಟ್ರೋಫಿಗೆ ತಾನು ಲಭ್ಯವಿದ್ದೇನೆ ಎಂದು ದಿಲ್ಲಿ ಹಾಗೂ ಜಿಲ್ಲಾ ಕ್ರಿಕೆಟ್ ಅಸೋಸಿಯೇಶನ್‌ಗೆ(ಡಿಡಿಸಿಎ) ವಿರಾಟ್ ಕೊಹ್ಲಿ ಮಂಗಳವಾರ ಮಾಹಿತಿ ನೀಡಿದ್ದಾರೆ.
ಕೊಹ್ಲಿ ತನ್ನ ಲಭ್ಯತೆಯ ಬಗ್ಗೆ ಖಚಿತಪಡಿಸಿದ್ದಾರೆ. ಅವರು ದಿಲ್ಲಿ ಪರ ಆಡುವುದನ್ನು ನಾವು ಎದುರು ನೋಡುತ್ತಿದ್ದೇವೆ ಎಂದು ಡಿಡಿಸಿಎ ಅಧ್ಯಕ್ಷ ರೋಹನ್ ಜೇಟ್ಲಿ ಖಚಿತಪಡಿಸಿದ್ದಾರೆ.
ಪಂದ್ಯಾವಳಿಯಲ್ಲಿ ಕೊಹ್ಲಿ ಹೊರಗುಳಿಯಲಿದ್ದಾರೆಂಬ ವದಂತಿ ಹರಡಿತ್ತು. ದಿಲ್ಲಿ ಕ್ರಿಕೆಟ್ ಸಂಸ್ಥೆಗೆ ಕರೆ ಮಾಡಿರುವ ಕೊಹ್ಲಿ ಅವರು ಗ್ರೂಪ್ ಹಂತ ಪಂದ್ಯಗಳಿಗೆ ತಾನು ಲಭ್ಯವಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಪ್ರಮುಖ ದೇಶೀಯ 50 ಓವರ್‌ಗಳ ಸ್ಪರ್ಧಾವಳಿಯು ಡಿಸೆಂಬರ್ 24ರಿಂದ ಆರಂಭವಾಗಲಿದೆ. ದಿಲ್ಲಿ ತಂಡವು ಆಲೂರ್ ನಲ್ಲಿ ಆಡಲಿರುವ ತನ್ನ ಮೊದಲ ಪಂದ್ಯದಲ್ಲಿ ಆಂಧ್ರಪ್ರದೇಶ ತಂಡವನ್ನು ಎದುರಿಸಲಿದೆ.
ಕೊಹ್ಲಿ ಎಲ್ಲ ಏಳು ಗ್ರೂಪ್ ಪಂದ್ಯಗಳಲ್ಲಿ ಲಭ್ಯವಿರಲಿದ್ದಾರೆಯೇ ಎಂದು ಕಾದು ನೋಡಬೇಕಾಗಿದೆ. ಭಾರತ ತಂಡವು ಜನವರಿ 11ರಿಂದ ನ್ಯೂಝಿಲ್ಯಾಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ.