ODI ರ‍್ಯಾಂಕಿಂಗ್: ಎರಡನೇ ಸ್ಥಾನಕ್ಕೆ ಇಳಿದ ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ | Photo Credit : PTI
ದುಬೈ: ಭಾರತ ತಂಡವು ತವರಿನಲ್ಲೇ ನ್ಯೂಝಿಲೆಂಡ್ ತಂಡದ ವಿರುದ್ಧ 1-2ರ ಅಂತರದಲ್ಲಿ ಏಕದಿನ ಸರಣಿ ಪರಾಭವಗೊಂಡ ಬೆನ್ನಿಗೇ, ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕೂಡಾ ಐಸಿಸಿ ಏಕದಿನ ಕ್ರಿಕೆಟ್ ಶ್ರೇಯಾಂಕದಲ್ಲಿ ಅಗ್ರ ಸ್ಥಾನದಿಂದ ಎರಡನೆ ಸ್ಥಾನಕ್ಕೆ ಇಳಿದಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ಭಾರತ-ನ್ಯೂಝಿಲೆಂಡ್ ಏಕದಿನ ಸರಣಿಯಲ್ಲಿ ಸರಣಿ ಶ್ರೇಷ್ಠ ಪ್ರದರ್ಶನ ನೀಡಿದ್ದ ನ್ಯೂಝಿಲೆಂಡ್ ಬ್ಯಾಟರ್ ಡ್ಯಾರಿಲ್ ಮಿಚೆಲ್ ಅವರು ಕೊಹ್ಲಿ ಸ್ಥಾನವನ್ನು ಕಸಿದುಕೊಂಡು ಅಗ್ರಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. 37 ವರ್ಷದ ಬಳಿಕ ನ್ಯೂಝಿಲೆಂಡ್ ತಂಡವು ಭಾರತದ ನೆಲದಲ್ಲೇ ಸರಣಿ ಗೆಲುವು ಸಾಧಿಸುವಲ್ಲಿ ಡ್ಯಾರಿಲ್ ಮಿಚೆಲ್ ಪ್ರಮುಖ ಪಾತ್ರ ವಹಿಸಿದ್ದರು. ಒಟ್ಟು ಮೂರು ಪಂದ್ಯಗಳಲ್ಲಿ ಎರಡು ಶತಕ ಹಾಗೂ ಒಂದು ಅರ್ಧಶತಕದ ಸಾಧನೆಯೊಂದಿಗೆ ಅವರು ಒಟ್ಟು 352 ರನ್ ಗಳನ್ನು ಕಲೆ ಹಾಕುವ ಮೂಲಕ, ಅಗ್ರ ಸ್ಥಾನಕ್ಕೇರಿದ್ದಾರೆ.
ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ವಿರಾಟ್ ಕೊಹ್ಲಿ ಕೂಡಾ ಒಂದು ಶತಕ ಹಾಗೂ ಅರ್ಧ ಶತಕದ ನೆರವಿನಿಂದ ಒಟ್ಟು 240 ರನ್ ಗಳಿಸಿದ್ದರು. ಮೊದಲ ಪಂದ್ಯದಲ್ಲಿ 93 ರನ್ ಗಳಿಸಿದ ನಂತರ ವಿರಾಟ್ ಕೊಹ್ಲಿ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದ್ದರು. ವಿರಾಟ್ ಕೊಹ್ಲಿ ಇದೀಗ 795 ಅಂಕ ಗಳಿಸಿ ಎರಡನೆ ಸ್ಥಾನಕ್ಕೆ ಕುಸಿದಿದ್ದಾರೆ. ಹೀಗಾಗಿ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕಿರುವ ಅಂತರ ಕೂಡಾ ಹಿಗ್ಗಿದೆ.
ಮತ್ತೊಂದೆಡೆ, ನ್ಯೂಝಿಲೆಂಡ್ ಸರಣಿ ಮುಕ್ತಾಯದ ಬಳಿಕ ರೋಹಿತ್ ಶರ್ಮ ಮೂರನೆಯ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ. ಅವರ ಸ್ಥಾನಕ್ಕೆ ಅಫ್ಘಾನಿಸ್ತಾನದ ಇಬ್ರಾಹಿಂ ಝದ್ರಾನ್ ಏರಿದ್ದಾರೆ.
ಉಳಿದಂತೆ, ಶುಭಮನ್ ಗಿಲ್ 5ನೇ ಸ್ಥಾನದಲ್ಲಿ, ಪಾಕಿಸ್ತಾನದ ಬಾಬರ್ ಅಝಂ 6ನೇ ಸ್ಥಾನದಲ್ಲಿ, ಐರ್ಲೆಂಡ್ ನ ಹ್ಯಾರಿ ಟೆಕ್ಟರ್ 7ನೇ ಸ್ಥಾನದಲ್ಲಿ, ವೆಸ್ಟ್ ಇಂಡೀಸ್ ನ ಶಾಯ್ ಹೋಪ್ 8ನೇ ಸ್ಥಾನದಲ್ಲಿ, ಶ್ರೀಲಂಕಾದ ಚರಿತ್ ಅಸಲಂಕಾ 9ನೇ ಸ್ಥಾ ನದಲ್ಲಿದ್ದು, 10ನೇ ಸ್ಥಾನವನ್ನು ಭಾರತ ತಂಡದ ಬ್ಯಾಟರ್ ಗಳೇ ಆದ ಶ್ರೇಯಸ್ ಅಯ್ಯರ್ ಹಾಗೂ ಕೆ.ಎಲ್.ರಾಹುಲ್ ಹಂಚಿಕೊಂಡಿದ್ದಾರೆ.