ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ | ಭಾರತ ತಂಡದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸ್ಥಾನ ತುಂಬುವರು ಯಾರು?
ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ | PTI
ಹೊಸದಿಲ್ಲಿ: ಟೀಮ್ ಇಂಡಿಯಾವು ಜೂನ್ 20ರಂದು ಹೆಡ್ಡಿಂಗ್ಲೆಯಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡುವ ಮೂಲಕ ತನ್ನ ಇಂಗ್ಲೆಂಡ್ ಕ್ರಿಕೆಟ್ ಪ್ರವಾಸವನ್ನು ಆರಂಭಿಸಲಿದೆ. ಎಲ್ಲರ ಕಣ್ಣು ಮುಂದಿನ ಪೀಳಿಗೆಯ ಭಾರತೀಯ ಬ್ಯಾಟರ್ಗಳತ್ತ ನೆಟ್ಟಿದೆ.
ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಇನ್ನು ಮುಂದೆ ಟೆಸ್ಟ್ ತಂಡದಲ್ಲಿ ಕಾಣಸಿಗುವುದಿಲ್ಲ. ಇದೀಗ ಎಲ್ಲರ ಗಮನ ಕೆ.ಎಲ್.ರಾಹುಲ್, ಯಶಸ್ವಿ ಜೈಸ್ವಾಲ್ ಹಾಗೂ ಹೊಸತಾಗಿ ನೇಮಕಗೊಂಡಿರುವ ನಾಯಕ ಶುಭಮನ್ ಗಿಲ್ರತ್ತ ಹರಿದಿದೆ.
►ಕೆ.ಎಲ್.ರಾಹುಲ್:
33ರ ವಯಸ್ಸಿನ ಕೆ.ಎಲ್.ರಾಹುಲ್ ತಂಡದ ಅತ್ಯಂತ ಅನುಭವಿ ಆಟಗಾರನಾಗಿದ್ದಾರೆ. ಇಂಗ್ಲೆಂಡ್ ವಿರುದ್ಧ ಆಡಿರುವ 13 ಟೆಸ್ಟ್ ಪಂದ್ಯಗಳಲ್ಲಿ ಮೂರು ಶತಕಗಳ ಸಹಿತ ಒಟ್ಟು 955 ರನ್ ಗಳಿಸಿದ್ದಾರೆ. ರಾಹುಲ್ ಓರ್ವ ಗುಣಮಟ್ಟದ ಆಟಗಾರ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಅಸ್ಥಿರ ಪ್ರದರ್ಶನ ಅವರಿಗೆ ಮುಳುವಾಗಿದೆ.
2018ರಲ್ಲಿ ದಿ ಓವಲ್ನಲ್ಲಿ ಭಾರತ ತಂಡವು 121 ರನ್ಗೆ 5 ವಿಕೆಟ್ಗಳನ್ನು ಕಳೆದುಕೊಂಡಿದ್ದಾಗ ರಾಹುಲ್ ಅವರು ಗಳಿಸಿರುವ 149 ರನ್ ಈಗಲೂ ಸ್ಮರಣೀಯವಾಗಿದೆ. ಆ ಸರಣಿಯಲ್ಲಿ ರಾಹುಲ್ ಅವರು ತನ್ನ ಉಳಿದಿರುವ 9 ಇನಿಂಗ್ಸ್ಗಳಲ್ಲಿ ಕೇವಲ 152 ರನ್ ಗಳಿಸಿದ್ದರು. 2021ರ ಪ್ರವಾಸದಲ್ಲೂ ಲಾರ್ಡ್ಸ್ ಕ್ರೀಡಾಂಗಣದಲ್ಲಿ 129 ರನ್ ಗಳಿಸಿ ಭಾರತದ ಗೆಲುವಿಗೆ ನೆರವಾಗಿದ್ದ ರಾಹುಲ್ ಆ ನಂತರ ಒಂದಂಕಿ ಸ್ಕೋರ್ಗಳನ್ನು ಗಳಿಸಿದ್ದರು.
ಇಂಗ್ಲೆಂಡ್ ವಾತಾವರಣದಲ್ಲಿ ರಾಹುಲ್ 34.11 ಸರಾಸರಿ ಹೊಂದಿದ್ದು, ಉತ್ತಮ ಆರಂಭವನ್ನು ದೊಡ್ಡ ಮೊತ್ತವನ್ನಾಗಿಸುವಲ್ಲಿ ಪರದಾಡುತ್ತಿದ್ದಾರೆ. 10 ವರ್ಷಕ್ಕೂ ಅಧಿಕ ಅನುಭವ ಹೊಂದಿರುವ ರಾಹುಲ್ ಮಧ್ಯಮ ಸರದಿಯಲ್ಲಿ ಭಾರತದ ಆಧಾರ ಸ್ತಂಭವಾಗಲಿದ್ದಾರೆಯೇ ಎಂದು ಕಾದುನೋಡಬೇಕಾಗಿದೆ.
►ಯಶಸ್ವಿ ಜೈಸ್ವಾಲ್:
ನಿರ್ಭಿತಿಯ ಬ್ಯಾಟಿಂಗ್ ನ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಬೆಳಕಿಗೆ ಬಂದಿರುವ 23ರ ಹರೆಯದ ಯಶಸ್ವಿ ಜೈಸ್ವಾಲ್ ಇಂಗ್ಲೆಂಡ್ ಪ್ರವಾಸದಲ್ಲಿ ಈ ಬಾರಿ ಭರವಸೆ ಮೂಡಿಸಿದ್ದಾರೆ. ಆಸ್ಟ್ರೇಲಿಯದಲ್ಲಿ ನಡೆದಿದ್ದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತದ ಪರ ಗರಿಷ್ಠ ರನ್ ಗಳಿಸಿದ್ದರು. ಜೈಸ್ವಾಲ್ ಸ್ವದೇಶದಲ್ಲಿ ಆಡಿರುವ 10 ಪಂದ್ಯಗಳಲ್ಲಿ 60.61ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿ ಎಲ್ಲರನ್ನು ಚಕಿತಗೊಳಿಸಿದ್ದಾರೆ. ಆದರೆ ಇಂಗ್ಲೆಂಡ್ ಪ್ರವಾಸವು ಜೈಸ್ವಾಲ್ ಪಾಲಿಗೆ ದೊಡ್ಡ ಸವಾಲಾಗಿದೆ. ವಿದೇಶದಲ್ಲಿ ಜೈಸ್ವಾಲ್ರ ಟೆಸ್ಟ್ ಸರಾಸರಿ 44.18 ರಷ್ಟಿದೆ. ಜೈಸ್ವಾಲ್ ಈ ತನಕ ಇಂಗ್ಲೆಂಡ್ ವೇಗಿಗಳಿಂದ ದೀರ್ಘ ಸ್ಪೆಲ್ಗಳನ್ನು ಎದುರಿಸಿಲ್ಲ.
ವಿರಾಟ್ ಇಲ್ಲವೇ ರೋಹಿತ್ ಆಗಲಿ ಮಾರ್ಗದರ್ಶನ ನೀಡಲು ಯಾರೂ ಇಲ್ಲ. ಹೀಗಾಗಿ ಅಗ್ರ ಕ್ರಮಾಂಕದಲ್ಲಿ ಭಾರತ ತಂಡವನ್ನು ದಿಟ್ಟವಾಗಿ ಮುನ್ನಡೆಸಬೇಕಾಗಿದೆ. ರನ್ಗಾಗಿ ಅವರ ಹಸಿವು ಹಾಗೂ ಅವರ ಭರ್ಜರಿ ಫಾರ್ಮ್ ಅವರನ್ನು ಪ್ರಮುಖ ಆಟಗಾರರನ್ನಾಗಿಸಿದೆ.
►ಶುಭಮನ್ ಗಿಲ್:
ಇಂಗ್ಲೆಂಡ್ ನಲ್ಲಿ ನಡೆಯಲಿರುವ ಟೆಸ್ಟ್ ಸರಣಿಯೊಂದರಲ್ಲಿ ಭಾರತ ತಂಡವನ್ನು ಮುನ್ನಡೆಸುವ ಕಠಿಣ ಕೆಲಸ ಶುಭಮನ್ ಗಿಲ್ಗಿದೆ. ಸ್ವದೇಶದಲ್ಲಿ ಗಿಲ್ ಅವರ ಸರಾಸರಿ(42.03)ಪ್ರಭಾವಶಾಲಿಯಾಗಿದೆ. ಆದರೆ ವಿದೇಶದಲ್ಲಿ ಅದು 29.50ಕ್ಕೆ ಕುಸಿದಿದೆ. ಇಂಗ್ಲೆಂಡ್ ನೆಲದಲ್ಲಿ 3 ಪಂದ್ಯಗಳಲ್ಲಿ 14.66ರ ಸರಾಸರಿಯಲ್ಲಿ ಕೇವಲ 88 ರನ್ ಗಳಿಸಿದ್ದಾರೆ.
ಈಗಾಗಲೇ ಭಾರೀ ನಿರೀಕ್ಷೆಗಳನ್ನು ಮೂಡಿಸಿರುವ ಗಿಲ್ಗೆ ನಾಯಕತ್ವದ ಜವಾಬ್ದಾರಿಯು ಹೆಗಲೇರಿದೆ. ಗಿಲ್ ರನ್ ಗಳಿಸುವುದು ಮಾತ್ರವಲ್ಲ, ಆಧುನಿಕ ಕ್ರಿಕೆಟಿನ ಅತ್ಯಂತ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ತಂಡವನ್ನು ಹೇಗೆ ಮುನ್ನಡೆಸುತ್ತಾರೆಂದು ಮುಖ್ಯವಾಗಿದೆ. ಗಿಲ್ ತನಗೆ ಲಭಿಸಿರುವ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳಲಿದ್ದಾರೆ ಎಂದು ಮಾಜಿ ಸಹ ಆಟಗಾರ ಚೇತೇಶ್ವರ ಪೂಜಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾರತ ಕ್ರಿಕೆಟ್ ತಂಡವು 2011ರ ನಂತರ ಇದೇ ಮೊದಲ ಬಾರಿ ಕೊಹ್ಲಿ ಅಥವಾ ರೋಹಿತ್ರಿಲ್ಲದೆ ಈ ವರ್ಷ ಇಂಗ್ಲೆಂಡ್ ಪ್ರವಾಸ ಕೈಗೊಂಡಿದೆ. ರನ್ ಗಳಿಸುವ ಹಾಗೂ ನಾಯಕತ್ವದ ಹೊರೆಯು ರಾಹುಲ್, ಜೈಸ್ವಾಲ್ ಹಾಗೂ ಗಿಲ್ ನಡುವೆ ಹಂಚಿಹೋಗಿದೆ. ಈ ಮೂವರ ಪ್ರದರ್ಶನವು ಪ್ರಸಕ್ತ ಸರಣಿಯ ಫಲಿತಾಂಶವನ್ನು ರೂಪಿಸುವುದಲ್ಲದೆ, ವಿಶ್ವ ಟೆಸ್ಟ್ ಚಾಂಪಿಯನ್ ಸರಣಿಯಲ್ಲಿ ಭಾರತದ ಅದೃಷ್ಟಕ್ಕೆ ನಾಂದಿ ಹಾಡಬಹುದು.