×
Ad

ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ವಿರಾಟ್ ಕೊಹ್ಲಿ

Update: 2025-05-12 11:59 IST

ವಿರಾಟ್‌ ಕೊಹ್ಲಿ (PTI)

ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಸೋಮವಾರ ಟೆಸ್ಟ್ ಪಂದ್ಯದಿಂದ ನಿವೃತ್ತಿ ಪ್ರಕಟಿಸಿದ್ದಾರೆ. ಇನ್‌ ಸ್ಟಾಗ್ರಾಮ್ ಪೋಸ್ಟ್ ಮೂಲಕ ತನ್ನ ನಿವೃತ್ತಿಯ ನಿರ್ಧಾರವನ್ನು ಪ್ರಕಟಿಸಿದರು.

‘‘ಟೆಸ್ಟ್ ಕ್ರಿಕೆಟ್‌ ನಲ್ಲಿ ನಾನು ಮೊದಲ ಬಾರಿ ಬ್ಯಾಗಿ ಬ್ಲ್ಯೂ ಧರಿಸಿ 14 ವರ್ಷಗಳಾಗಿವೆ. ಟೆಸ್ಟ್ ಕ್ರಿಕೆಟ್ ಪಂದ್ಯವು ನನ್ನನ್ನು ಇಷ್ಟೊಂದು ದೂರ ಕರೆದೊಯ್ಯುತ್ತದೆ ಎಂದು ಎಂದಿಗೂ ಊಹಿಸಿರಲಿಲ್ಲ. ಟೆಸ್ಟ್ ಪಂದ್ಯವು ನನ್ನನ್ನು ಪರೀಕ್ಷಿಸಿತು, ನನ್ನನ್ನು ರೂಪಿಸಿತು, ಜೀವನದ ಪಾಠಗಳನ್ನು ಕಲಿಸಿತು. ಈ ಮಾದರಿಯ ಕ್ರಿಕೆಟ್‌ ನಿಂದ ದೂರ ಸರಿಯುವುದು ಅಷ್ಟೊಂದು ಸುಲಭವಾಗಿರಲಿಲ್ಲ, ಆದರೆ ಇದು ನಿವೃತ್ತಿಗೆ ಸರಿಯಾದ ಸಮಯ ಎಂದು ಭಾವಿಸಿರುವೆ. ನಾನು ನನ್ನಲ್ಲಿದ್ದ ಎಲ್ಲವನ್ನೂ ನೀಡಿದ್ದೇನೆ. ನಾನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಪಡೆದಿರುವೆ ’’ ಎಂದು ಕೊಹ್ಲಿ ಅವರು ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.

2011ರಲ್ಲಿ ಜಮೈಕಾದ ಕಿಂಗ್‌ ಸ್ಟನ್‌ನಲ್ಲಿ ವೆಸ್ಟ್‌ಇಂಡೀಸ್ ತಂಡದ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ್ದ 36ರ ಹರೆಯದ ಕೊಹ್ಲಿ ತನ್ನ 14 ವರ್ಷಗಳ ವೃತ್ತಿಜೀವನದಲ್ಲಿ 123 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 46.85ರ ಸರಾಸರಿಯಲ್ಲಿ 30 ಶತಕ ಹಾಗೂ 31 ಅರ್ಧಶತಕಗಳ ಸಹಿತ ಒಟ್ಟು 9,230 ರನ್ ಕಲೆ ಹಾಕಿದ್ದಾರೆ.

2016ರಿಂದ 2019ರ ತನಕ ಉಚ್ಛ್ರಾಯ

ಸ್ಥಿತಿಯಲಿದ್ದ ಕೊಹ್ಲಿ ಇತ್ತೀಚೆಗಿನ ದಿನಗಳಲ್ಲಿ ವಿದೇಶಿ ಕ್ರಿಕೆಟ್ ಪ್ರವಾಸದ ಸವಾಲಿನ ಪರಿಸ್ಥಿತಿಯಲ್ಲಿ ಫಾರ್ಮ್ ಕಳೆದುಕೊಂಡು ತೀವ್ರ ಟೀಕೆಗೆ ಒಳಗಾಗಿದ್ದರು. ಆಸ್ಟ್ರೇಲಿಯದಲ್ಲಿ ನಡೆದಿದ್ದ ತನ್ನ ಕೊನೆಯ ಟೆಸ್ಟ್ ಸರಣಿ 2024-25ರ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಗಳಿಸಿದ ಹೊರತಾಗಿಯೂ 5 ಪಂದ್ಯಗಳಲ್ಲಿ ಕೇವಲ 190 ರನ್ ಗಳಿಸಿದ್ದರು.

►ಭಾರತದ ಅತ್ಯಂತ ಯಶಸ್ವಿ ನಾಯಕ ಕೊಹ್ಲಿ

ಕೊಹ್ಲಿ 2014ರಲ್ಲಿ ಭಾರತ ತಂಡದ ನಾಯಕನಾಗಿ ನೇಮಕಗೊಂಡರು. ನಾಯಕನಾಗಿ ಭಾರತೀಯ ತಂಡದಲ್ಲಿ ಗೆಲ್ಲುವ ಮನಸ್ಥಿತಿಯನ್ನು ತುಂಬಿದ್ದರು. ಫಿಟ್ನೆಸ್ ಹಾಗೂ ತೀವ್ರ ಸ್ಪರ್ಧಾತ್ಮಕತೆಗೆ ಹೆಚ್ಚಿನ ಒತ್ತು ನೀಡಿದ್ದರು. ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡವು 68 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 40ರಲ್ಲಿ ಜಯ, 11ರಲ್ಲಿ ಡ್ರಾ ಸಾಧಿಸಿತ್ತು. ಗೆಲುವಿನ ಶೇಕಡಾವಾರು 58.82ರಷ್ಟಿತ್ತು. ಕೊಹ್ಲಿ ಭಾರತದ ಅತ್ಯಂತ ಯಶಸ್ವಿ ನಾಯಕನೆಂಬ ದಾಖಲೆಯನ್ನು ತನ್ನದಾಗಿಸಿಕೊಂಡಿದ್ದಾರೆ.

ಕೊಹ್ಲಿ ನಾಯಕನಾಗಿ 2018-19ರಲ್ಲಿ ಪ್ರಮುಖ ಐತಿಹಾಸಿಕ ಸಾಧನೆಯನ್ನು ಮಾಡಿದ್ದರು. ಆಗ ಭಾರತವು ಆಸ್ಟ್ರೇಲಿಯ ನೆಲದಲ್ಲಿ ಮೊತ್ತ ಮೊದಲ ಬಾರಿ ಟೆಸ್ಟ್ ಸರಣಿಯನ್ನು ಜಯಿಸಿತ್ತು. ಭಾರತ ತಂಡವು ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರಲು ತಂಡದ ನಾಯಕತ್ವವಹಿಸಿದ್ದರು. ಇದರೊಂದಿಗೆ ತನ್ನ ತಂಡವನ್ನು ವಿಶ್ವ ಕ್ರಿಕೆಟ್‌ ನಲ್ಲಿ ಪ್ರಬಲ ಶಕ್ತಿಯನ್ನಾಗಿ ರೂಪಿಸಿದ್ದರು.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗಿಂತ ಮುಂಚಿತವಾಗಿ ಕೊಹ್ಲಿ ಈ ಘೋಷಣೆ ಮಾಡಿದ್ದಾರೆ. ಈ ಮೂಲಕ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಸ್ಮರಣೀಯ ಅಧ್ಯಾಯವೊಂದು ಅಂತ್ಯವಾಗಿದೆ.

ಉನ್ನತ ಮಟ್ಟದ ಫಿಟ್ನೆಸ್ ಹಾಗೂ ಅಚಲ ಬದ್ದತೆಗೆ ಹೆಸರುವಾಸಿಯಾಗಿದ್ದ ಕೊಹ್ಲಿ ಭಾರತೀಯ ಟೆಸ್ಟ್ ಕ್ರಿಕೆಟ್‌ ನಲ್ಲಿ ಹೊಸತನ ಹಾಗೂ ಆಕ್ರಮಣಕಾರಿತನ ನೀಡಿದ್ದರು.

ಕೊಹ್ಲಿ ಟೆಸ್ಟ್ ಕ್ರಿಕೆಟಿಗೆ ವಿದಾಯ ಘೋಷಿಸಿದ ಬೆನ್ನಿಗೆ ಅಭಿಮಾನಿಗಳು, ಮಾಜಿ ಆಟಗಾರರು ಹಾಗೂ ಜಗತ್ತಿನಾದ್ಯಂತದ ಕ್ರಿಕೆಟ್ ಲೆಜೆಂಡ್‌ಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡುಲ್ಕರ್, ಮಾಜಿ ಆರಂಭಿಕ ಬ್ಯಾಟರ್ ಹಾಗೂ ಹಾಲಿ ಕೋಚ್ ಗೌತಮ್ ಗಂಭೀರ್, ಮಾಜಿ ಕೋಚ್ ರವಿ ಶಾಸ್ತ್ರಿ ಹಾಗೂ ಕೊಹ್ಲಿ ಅವರ ಸಹೋದರ ವಿಕಾಸ್ ಅವರು ಕೊಹ್ಲಿಯ ಸಾಧನೆಯನ್ನು ಸ್ಮರಿಸಿದರು.

ಭಾರತ ತಂಡವು 2024ರಲ್ಲಿ ಕೆರಿಬಿಯನ್‌ನಲ್ಲಿ ಟಿ20 ವಿಶ್ವಕಪ್ ಗೆಲ್ಲಲು ಪ್ರಮುಖ ಪಾತ್ರವಹಿಸಿದ ನಂತರ ಟಿ20 ಕ್ರಿಕೆಟ್‌ ನಿಂದ ಕೊಹ್ಲಿ ನಿವೃತ್ತಿಯಾಗಿದ್ದರು. ಕೊಹ್ಲಿ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಆಡುವುದನ್ನು ಮುಂದುವರಿಸಲಿದ್ದಾರೆ.

ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟಿಗೆ ವಿದಾಯ ಹೇಳಿದ ಕೆಲವೇ ದಿನಗಳಲ್ಲಿ ಕೊಹ್ಲಿ ಕೂಡ ರೋಹಿತ್ ದಾರಿ ಹಿಡಿದಿದ್ದಾರೆ. ಮುಂಬರುವ ಭಾರತದ ಇಂಗ್ಲೆಂಡ್ ಪ್ರವಾಸಕ್ಕೆ ಮೊದಲು ಈ ಇಬ್ಬರು ಹಿರಿಯ ಬ್ಯಾಟರ್‌ಗಳು ಆಯ್ಕೆಯ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಶುಭಮನ್ ಗಿಲ್ ನಾಯಕನ ಸ್ಥಾನಕ್ಕೇರುವ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದಾರೆ.

ಕೊಹ್ಲಿ ಅವರು ತನ್ನ 14 ವರ್ಷಗಳ ವೃತ್ತಿಜೀವನದಲ್ಲಿ ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್ ಹಾಗೂ ಸುನೀಲ್ ಗವಾಸ್ಕರ್ ನಂತರ ಭಾರತದ ಪರ 4ನೇ ಗರಿಷ್ಠ ಟೆಸ್ಟ್ ಸ್ಕೋರರ್ ಎನಿಸಿಕೊಂಡಿದ್ದಾರೆ.

►ವಿರಾಟ್ ಕೊಹ್ಲಿ ಟೆಸ್ಟ್ ಅಂಕಿ-ಅಂಶ

ಪಂದ್ಯಗಳು: 123

ಒಟ್ಟು ರನ್: 9,230

ಗರಿಷ್ಠ ಸ್ಕೋರ್: 2019ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಔಟಾಗದೆ 254

ಸರಾಸರಿ: 46.85

100: 30

50: 31

*ಟೆಸ್ಟ್ ಕ್ರಿಕೆಟ್‌ ನಲ್ಲಿ ಕೊಹ್ಲಿಯ ‘ವಿರಾಟ್’ ಸಾಧನೆ

-ಭಾರತೀಯ ಬ್ಯಾಟರ್ ಆಗಿ ಕ್ಯಾಲೆಂಡರ್ ವರ್ಷದಲ್ಲಿ ಗರಿಷ್ಠ ರನ್: 2012, 2015, 2016, 2018 ಹಾಗೂ 2023

-ಸತತ 2 ಕ್ಯಾಲೆಂಡರ್ ವರ್ಷಗಳಲ್ಲಿ 1 ಸಾವಿರಕ್ಕೂ ಅಧಿಕ ರನ್ ಗಳಿಸಿದ ಏಕೈಕ ಬ್ಯಾಟರ್

-ಭಾರತೀಯ ನಾಯಕನಾಗಿ ಗರಿಷ್ಠ ಸ್ಕೋರ್: ಔಟಾಗದೆ 254(2019ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ)

-ಭಾರತೀಯ ನಾಯಕನಾಗಿ ಗರಿಷ್ಠ ರನ್: 5,864

-ಭಾರತದ ಪರ ಗರಿಷ್ಠ ದ್ವಿಶತಕ: 7

-ನಾಯಕನಾಗಿ ಗರಿಷ್ಠ ದ್ವಿಶತಕ: 6

-ಭಾರತದ ನಾಯಕನಾಗಿ ಗರಿಷ್ಠ ಗೆಲುವು: 40

- ಸತತ ಸರಣಿಗಳಲ್ಲಿ ದ್ವಿಶತಕಗಳು: 4

-ಪುರುಷರ ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ಗರಿಷ್ಠ ರೇಟಿಂಗ್ ಪಾಯಿಂಟ್ಸ್ ಪಡೆದ ಭಾರತೀಯ: 937(2018)

-ಆಸ್ಟ್ರೇಲಿಯದಲ್ಲಿ ಟೆಸ್ಟ್ ಸರಣಿ ಗೆದ್ದ ಏಶ್ಯದ ಮೊದಲ ನಾಯಕ(2018-19)

-ನಾಯಕನಾಗಿ ಸತತ ಅತಿ ಹೆಚ್ಚು ಟೆಸ್ಟ್ ಸರಣಿ ಗೆಲುವು: 9

-ಆಸ್ಟ್ರೇಲಿಯದಲ್ಲಿ ಗರಿಷ್ಠ ಶತಕಗಳನ್ನು ಸಿಡಿಸಿದ ಭಾರತೀಯ: 7

-ಟೆಸ್ಟ್ ಕ್ರಿಕೆಟ್‌ ನಲ್ಲಿ ಭಾರತದ ಪರ 4ನೇ ಗರಿಷ್ಠ ರನ್ ಸ್ಕೋರರ್: 9,230 ರನ್

► ಟೆಸ್ಟ್ ಕ್ರಿಕೆಟ್‌ ನಲ್ಲಿ ವಿರಾಟ್ ಕೊಹ್ಲಿ ಅವರ ಅತ್ಯಂತ ವಿವಾದಾತ್ಮಕ ಕ್ಷಣಗಳು

ವಿರಾಟ್ ಕೊಹ್ಲಿ ಅವರು ಟೆಸ್ಟ್ ವೃತ್ತಿಜೀವನದಲ್ಲಿ ಆಟಗಾರನಾಗಿ ಹಾಗೂ ನಾಯಕನಾಗಿದ್ದಾಗ ಮೈದಾನದೊಳಗೆ ಅತ್ಯಂತ ವಿವಾದಾತ್ಮಕ ಕ್ಷಣಗಳಿಗೂ ಸಾಕ್ಷಿಯಾದರು.

2012ರಲ್ಲಿ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಟೆಸ್ಟ್ ಪಂದ್ಯದ ವೇಳೆ ಕೊಹ್ಲಿ ಮೊದಲ ಬಾರಿ ಪ್ರಮುಖ ವಿವಾದದಿಂದ ಸುದ್ದಿಯಾಗಿದ್ದರು. ಫೀಲ್ಡಿಂಗ್ ಮಾಡುತ್ತಿದ್ದಾಗ ಆಸ್ಟ್ರೇಲಿಯ ಪ್ರೇಕ್ಷಕರು ನಿರಂತರವಾಗಿ ನಿಂದಿಸಿದ್ದರಿಂದ ಆಕ್ರೋಶಗೊಂಡಿದ್ದ ಕೊಹ್ಲಿ ಅವರು ಪ್ರೇಕ್ಷಕರಿಗೆ ಮಧ್ಯ ಬೆರಳು ತೋರಿಸಿದ್ದರು. ಕೊಹ್ಲಿ ಅವರ ಈ ಸನ್ನೆಗೆ ಐಸಿಸಿ ಪಂದ್ಯಶುಲ್ಕದಲ್ಲಿ ಶೇ.50ರಷ್ಟು ದಂಡ ವಿಧಿಸಿತ್ತು. ಪ್ರೇಕ್ಷಕರು ನನ್ನನ್ನು ನಿಂದಿಸಿದ್ದರಿಂದ ಹೀಗೆ ಮಾಡಿದ್ದೆ ಎಂದು ಕೊಹ್ಲಿ ತನ್ನ ನಡವಳಿಕೆಯನ್ನು ಸಮರ್ಥಿಸಿಕೊಂಡಿದ್ದರು.

2014ರ ಅಡಿಲೇಡ್ ಟೆಸ್ಟ್‌ನಲ್ಲಿ ಎಂ.ಎಸ್. ಧೋನಿ ಅನುಪಸ್ಥಿತಿಯಲ್ಲಿ ಮೊದಲ ಬಾರಿ ನಾಯಕನಾಗಿದ್ದ ಕೊಹ್ಲಿ ಅವರು ಮಿಚೆಲ್ ಜಾನ್ಸನ್ ಹಾಗೂ ಬ್ರಾಡ್ ಹ್ಯಾಡಿನ್‌ರೊಂದಿಗೆ ಮಾತಿನ ಚಕಮಕಿ ನಡೆಸಿದ್ದರು. ಬೌನ್ಸರ್‌ಗಳಿಂದ ಪೆಟ್ಟು ತಿಂದು, ಕೀಟಲೆಗಳನ್ನು ಎದುರಿಸಿದ್ದರೂ ಕೊಹ್ಲಿ 2 ಶತಕಗಳನ್ನು ಸಿಡಿಸಿ ಭಾರತದ ಆಕ್ರಮಣಕಾರಿ ಪ್ರತಿಕ್ರಿಯೆಗೆ ನೆರವಾಗಿದ್ದರು.

2017ರಲ್ಲಿ ಆಸ್ಟ್ರೇಲಿಯದ ವಿರುದ್ಧ ಬೆಂಗಳೂರಿನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಪ್ರಮುಖ ವಿವಾದಕ್ಕೆ ಒಳಗಾಗಿದ್ದರು. ಅಂಪೈರ್ ತೀರ್ಪು ಪರಾಮರ್ಶೆಗೆ(ಡಿಆರ್‌ಎಸ್)ಸ್ಟೀವ್ ಸ್ಮಿತ್ ಡ್ರೆಸ್ಸಿಂಗ್ ರೂಮ್‌ ನತ್ತ ನೋಡುವ ಮೂಲಕ ಆಸ್ಟ್ರೇಲಿಯವು ವ್ಯವಸ್ಥಿತವಾಗಿ ವಂಚನೆಯಲ್ಲಿ ತೊಡಗಿತ್ತು ಎಂದು ಕೊಹ್ಲಿ ಆರೋಪಿಸಿದ್ದರು.

2021ರ ಲಾರ್ಡ್ಸ್ ಟೆಸ್ಟ್‌ನಲ್ಲಿ ಕೊಹ್ಲಿ ಅವರು ಜೋಸ್ ಬಟ್ಲರ್ ಹಾಗೂ ಒಲಿ ರಾಬಿನ್ಸನ್ ಜೊತೆ ತೀವ್ರ ವಾಗ್ವಾದ ನಡೆಸಿದ್ದರು. ಭಾರತಕ್ಕೆ ಸ್ಮರಣೀಯ ಗೆಲುವು ತಂದುಕೊಡಲು ಶ್ರಮಿಸಿದ್ದರು.

2014 ಹಾಗೂ 2018ರ ಇಂಗ್ಲೆಂಡ್ ಕ್ರಿಕೆಟ್ ಪ್ರವಾಸದ ವೇಳೆ ಜೇಮ್ಸ್ ಆ್ಯಂಡರ್ಸನ್‌ರೊಂದಿಗೆ ವೈರತ್ವ ಸಾಧಿಸಿದ್ದ ಕೊಹ್ಲಿ ಅವರು 2014ರಲ್ಲಿ ಆ್ಯಂಡರ್ಸನ್ ವಿರುದ್ಧ ರನ್‌ಗಾಗಿ ಪರದಾಡಿದ್ದರು. 2018ರ ಸರಣಿಯಲ್ಲಿ 593 ರನ್ ಗಳಿಸಿ ತಿರುಗೇಟು ನೀಡಿದ್ದರು.

2024ರಲ್ಲಿ ಆಸ್ಟ್ರೇಲಿಯದ ಪ್ರವಾಸದ ವೇಳೆ ಎಂಸಿಜಿಯಲ್ಲಿ ನಡೆದಿದ್ದ ಬಾಕ್ಸಿಂಗ್ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ಪಂದ್ಯವನ್ನಾಡಿದ ಸ್ಯಾಮ್ ಕಾನ್‌ಸ್ಟಾಸ್ ಅವರ ಭುಜಕ್ಕೆ ಕೊಹ್ಲಿ ಡಿಕ್ಕಿ ಹೊಡೆದಿದ್ದರು. ಇದಕ್ಕೆ ಐಸಿಸಿ ದಂಡ ವಿಧಿಸಿತ್ತು. ‘ಕೊಹ್ಲಿ ಒಳ್ಳೆಯ ವ್ಯಕ್ತಿ, ಕ್ರಿಕೆಟ್‌ ನ ಲೆಜೆಂಡ್ ಆಗಿದ್ದಾರೆ’ ಎಂದು ಕಾನ್‌ಸ್ಟಾಸ್ ಪಂದ್ಯದ ನಂತರ ಹೇಳಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News