ಬಿಸಿಸಿಐ ಆಂತರಿಕ ರಾಜಕೀಯದಿಂದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ: ಮಾಜಿ ಕ್ರಿಕೆಟಿಗ ಆರೋಪ
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ (Photo: PTI)
ಹೊಸದಿಲ್ಲಿ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಮುನ್ನ ಭಾರತ ತಂಡದ ಮಾಜಿ ನಾಯಕರಾದ ರೋಹಿತ್ ಶರ್ಮ ಹಾಗೂ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿದ್ದರು. ಇದು ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ, "ರೋಹಿತ್ ಶರ್ಮ ಹಾಗೂ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಗೊಳ್ಳಲು ಬಿಸಿಸಿಐ ಆಂತರಿಕ ರಾಜಕೀಯ ಕಾರಣ" ಎಂದು ಭಾರತ ತಂಡದ ಮಾಜಿ ಆಟಗಾರ ಕರ್ಸನ್ ಘಾವ್ರಿ ಟೀಕಿಸುವ ಮೂಲಕ ಮತ್ತೊಂದು ಸುತ್ತಿನ ವಿವಾದ ಸ್ಫೋಟಗೊಂಡಿದೆ.
ವಿಕ್ಕಿ ಲಾಲ್ವಾನಿ ಶೋನಲ್ಲಿ ಪಾಲ್ಹೊಂಡು ಮಾತನಾಡಿರುವ ಕರ್ಸನ್ ಘಾವ್ರಿ, "ರೋಹಿತ್ ಶರ್ಮ ಹಾಗೂ ವಿರಾಟ್ ಕೊಹ್ಲಿ ಇಬ್ಬರೂ ಭಾರತದ ಪರವಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಆಡುವುದನ್ನು ಮುಂದುವರಿಸಲು ಬಯಸಿದ್ದರು. ಆದರೆ, ಬಿಸಿಸಿಐನಲ್ಲಿನ ಆಂತರಿಕ ರಾಜಕೀಯದಿಂದಾಗಿ ಅವರು ಟೆಸ್ಟ್ ಕ್ರಿಕೆಟ್‌ನಿಂದ ನಿರ್ಗಮಿಸಬೇಕಾಯಿತು" ಎಂದು ಆರೋಪಿಸಿದ್ದಾರೆ.
"ಅವರು (ಕೊಹ್ಲಿ) ಖಂಡಿತವಾಗಿ ಭಾರತ ತಂಡದ ಪರವಾಗಿ ಸುಲಭವಾಗಿ ಇನ್ನೆರಡು ವರ್ಷಗಳ ಕಾಲ ಆಟವಾಡುತ್ತಿದ್ದರು. ಆದರೆ ಯಾವುದೋ ಒತ್ತಡದಿಂದ ಅವರು ನಿವೃತ್ತನಾಗಿದ್ದಾರೆ. ದುರದೃಷ್ಟವಶಾತ್, ಅವರು ನಿವೃತ್ತರಾದಾಗ ಬಿಸಿಸಿಐನಿಂದ ಗೌರವ ವಿದಾಯವೂ ದೊರೆಯಲಿಲ್ಲ" ಎಂದು ಅವರು ಟೀಕಿಸಿದ್ದಾರೆ.
"ಬಿಸಿಸಿಐಗೆ, ಭಾರತೀಯ ಕ್ರಿಕೆಟ್‌ಗೆ ಹಾಗೂ ಭಾರತೀಯ ಅಭಿಮಾನಿಗಳಿಗೆ ಅಷ್ಟು ಅದ್ಭುತ ಸೇವೆ ಸಲ್ಲಿಸಿದ್ದ ಆಟಗಾರರಿಗೆ ಅದ್ದೂರಿ ಹಾಗೂ ಅದ್ಭುತ ಗೌರವ ವಿದಾಯ ನೀಡಬೇಕಿತ್ತು" ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ.
ಇದಲ್ಲದೆ, ರೋಹಿತ್ ಶರ್ಮ ಹಾಗೂ ವಿರಾಟ್ ಕೊಹ್ಲಿ ಅವಧಿಗೂ ಮುನ್ನವೇ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗಲು ಆಯ್ಕೆ ಸಮಿತಿ ಕಾರಣ ಎಂದು ಅವರು ದೂರಿದ್ದಾರೆ.