×
Ad

ಚೆಕ್ ಅಮಾನ್ಯ ಪ್ರಕರಣ: ವಿರೇಂದ್ರ ಸೆಹ್ವಾಗ್ ಸಹೋದರನ ಬಂಧನ

Update: 2025-03-07 22:34 IST

ವಿನೋದ್ ಸೆಹ್ವಾಗ್ , ವಿರೇಂದ್ರ ಸೆಹ್ವಾಗ್ | PC : X 

ಹೊಸದಿಲ್ಲಿ: ಏಳು ಕೋಟಿ ರೂ. ಚೆಕ್ ಅಮಾನ್ಯ ಪ್ರಕರಣದಲ್ಲಿ ಭಾರತೀಯ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಅವರ ಸಹೋದರ ವಿನೋದ್ ಸೆಹ್ವಾಗ್ ಅವರನ್ನು ಚಂಡಿಗಢ ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯ ನ್ಯಾಯಾಲಯ ವಿನೋದ್ ಸೆಹ್ವಾಗ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.

ಈ ಪ್ರಕರಣ ಜಾಲ್ಟಾ ಫುಡ್ ಆ್ಯಂಡ್ ಬಿವರೇಜ್ ಕಂಪೆನಿಗೆ ಸಂಬಂಧಿಸಿದೆ. ಇದರ ನಿರ್ದೇಶಕರಾಗಿರುವ ವಿನೋದ್ ಸೆಹ್ವಾಗ್, ವಿಷ್ಣು ಮಿತ್ತಲ್ ಹಾಗೂ ಸುಧೀರ್‌ಮಲ್ಹೋತ್ರ ವಿರುದ್ಧ ವರ್ಗಾವಣೀಯ ಲಿಖಿತ ಪತ್ರಗಳ ಅಧಿನಿಯಮ (ನೆಗೋಷಿಯೆಬಲ್ ಇನ್‌ಸ್ಟ್ರುಮೆಂಟ್ ಆ್ಯಕ್ಟ್)ದ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ದಿಲ್ಲಿಯ ಜಾಲ್ಟಾ ಫುಡ್ ಆ್ಯಂಡ್ ಬಿವರೇಜಸ್ ಕಂಪೆನಿ ತನ್ನ ಕಾರ್ಖಾನೆಯಿಂದ ಕೆಲವು ಸರಕುಗಳನ್ನು ಖರೀದಿಸಿದೆ ಎಂದು ಆರೋಪಿಸಿ ಹಿಮಾಚಲಪ್ರದೇಶದ ಬಡ್ಡಿಯಲ್ಲಿರುವ ಶ್ರೀ ನೈನಾ ಪ್ಲಾಸ್ಟಿಕ್ ಕಂಪೆನಿ ಮಾಲಕ ಕೃಷ್ಣ ಮೋಹನ್ ಪೊಲೀಸರಿಗೆ ದೂರು ಸಲ್ಲಿಸಿದ್ದರು.

ಈ ಸರಕುಗಳ ಶುಲ್ಕ ಪಾವತಿಗಾಗಿ ಕಂಪೆನಿ 7 ಕೋಟಿ ರೂ. ಚೆಕ್‌ ನೀಡಿತ್ತು. ಈ ಚೆಕ್ ಅನ್ನು ಮನಿಮಾಜ್ರಾದಲ್ಲಿರುವ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್‌ನಲ್ಲಿ ಜಮಾ ಮಾಡಲಾಗಿತ್ತು. ಆದರೆ, ಖಾತೆಯಲ್ಲಿ ಸಾಕಷ್ಟು ಹಣ ಇಲ್ಲದೇ ಇರುವುದರಿಂದ ಚೆಕ್ ಅಮಾನ್ಯಗೊಂಡಿತ್ತು.

ತನಗೆ ಹಣ ಸಿಗದೇ ಇದ್ದಾಗ ತಾನು ಪ್ರಕರಣ ದಾಖಲಿಸಿದೆ ಎಂದು ಮೋಹನ್ ತಿಳಿಸಿದ್ದಾರೆ. ನ್ಯಾಯಾಲಯ 2022ರಲ್ಲಿ ಎಲ್ಲಾ ಮೂರು ಮಂದಿಯನ್ನು ಪರಾರಿಯಾದವರು ಎಂದು ಘೋಷಿಸಿತ್ತು. ಅಲ್ಲದೆ, ಅವರು ವಿಚಾರಣೆಗೆ ಹಾಜರಾಗದೇ ಇರುವುದರಿಂದ 2023 ಸೆಪ್ಟಂಬರ್‌ನಲ್ಲಿ ಅವರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸುವಂತೆ ಆದೇಶಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News