ವಾಲಿಬಾಲ್ ಪಂದ್ಯಾವಳಿ ಪಾಕಿಸ್ತಾನದಿಂದ ಉಝ್ಬೆಕಿಸ್ತಾನಕ್ಕೆ ವರ್ಗಾವಣೆ; ಭಾರತ ಪಾಲ್ಗೊಳ್ಳುವುದು ಖಚಿತ
ಸಾಂದರ್ಭಿಕ ಚಿತ್ರ | PC : olympics.com
ಹೊಸದಿಲ್ಲಿ: ಕಾವ (ಸೆಂಟ್ರಲ್ ಏಶ್ಯ ವಾಲಿಬಾಲ್ ಅಸೋಸಿಯೇಶನ್) ಪುರುಷರ ನೇಶನ್ಸ್ ಲೀಗ್ ಪಂದ್ಯಾವಳಿಯಿಂದ ಮೊದಲು ಹೊರಬಂದಿದ್ದ ಭಾರತ ಈಗ ಭಾಗವಹಿಸಲು ನಿರ್ಧರಿಸಿದೆ. ಪಂದ್ಯಾವಳಿಯ ಆತಿಥ್ಯ ಪಾಕಿಸ್ತಾನದಿಂದ ಉಝ್ಬೆಕಿಸ್ತಾನಕ್ಕೆ ಹೋದ ಬಳಿಕ ಭಾರತ ಈ ನಿರ್ಧಾರವನ್ನು ತೆಗೆದುಕೊಂಡಿದೆ.
ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‍ಎಐ)ದ ಬೆಂಗಳೂರಿನಲ್ಲಿರುವ ನೇತಾಜಿ ಸುಭಾಸ್ ಸದರ್ನ್ ಸೆಂಟರ್ (ಎನ್‍ಎಸ್‍ಎಸ್‍ಸಿ)ನಲ್ಲಿ ಮೇ 6 ಮತ್ತು 7ರಂದು ಆಟಗಾರರ ಆಯ್ಕೆ ನಡೆಯಲಿದೆ ಎಂದು ಭಾರತದಲ್ಲಿ ವಾಲಿಬಾಲ್ ಕ್ರೀಡೆಯನ್ನು ನಡೆಸುವ ಸಮಿತಿಯು ಶುಕ್ರವಾರ ಘೋಷಿಸಿದೆ. ಬಳಿಕ ತರಬೇತಿ ಶಿಬಿರವೊಂದು ನಡೆಯಲಿದೆ.
“ಕಾವದ ವಾರ್ಷಿಕ ಮಹಾಸಭೆಯು ಎಪ್ರಿಲ್ 25ರಂದು ನೇಪಾಳದಲ್ಲಿ ನಡೆಯಿತು. ಈ ಸಭೆಯಲ್ಲಿ, ಪಾಕಿಸ್ತಾನದಲ್ಲಿ ನಡೆಯುವ ಪಂದ್ಯಾವಳಿಯಲ್ಲಿ ಭಾಗವಹಿಸುವ ಬಗ್ಗೆ ಇತರ ದೇಶಗಳೂ ಅತೃಪ್ತಿ ವ್ಯಕ್ತಪಡಿಸಿದವು. ಹಾಗಾಗಿ, ಪಂದ್ಯಾವಳಿಯನ್ನು ಉಝ್ಬೆಕಿಸ್ತಾನಕ್ಕೆ ವರ್ಗಾಯಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಆದರೆ, ವೇಳಾಪಟ್ಟಿ ಮೊದಲಿನಂತೆಯೇ ಇರುತ್ತದೆ’’ ಎಂದು ಸಮಿತಿಗೆ ನಿಕಟವಾಗಿರುವ ಮೂಲವೊಂದು ತಿಳಿಸಿದೆ.
ಈ ಪಂದ್ಯಾವಳಿಯು ಇಸ್ಲಾಮಾಬಾದ್‍ನಲ್ಲಿ ನಡೆಯಬೇಕಾಗಿತ್ತು. 22 ಆಟಗಾರರು ಸೇರಿದಂತೆ 30 ಸದಸ್ಯರ ಭಾರತೀಯ ತಂಡವು ಅಲ್ಲಿಗೆ ತೆರಳಬೇಕಾಗಿತ್ತು. ಆದರೆ, ಎಪ್ರಿಲ್ 22ರಂದು ಪಹಲ್ಗಾಮ್‍ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ಭೀಕರ ದಾಳಿಯ ಬಳಿಕ ಚಿತ್ರಣ ಬದಲಾಯಿತು. ಎರಡು ದೇಶಗಳ ನಡುವಿನ ಉದ್ವಿಗ್ನತೆ ತಾರಕಕ್ಕೇರಿದ ಬಳಿಕ, ಭಾರತೀಯ ತಂಡಕ್ಕೆ ನೀಡಲಾಗಿದ್ದ ನಿರಾಕ್ಷೇಪಣಾ ಪತ್ರವನ್ನು ಭಾರತ ಸರಕಾರ ರದ್ದುಗೊಳಿಸಿತು.
ಮೇ 29ರಿಂದ ಜೂನ್ 4ರವರೆಗೆ ನಡೆಯಲಿರುವ ಪಂದ್ಯಾವಳಿಯಲ್ಲಿ ಆತಿಥೇಯ ಉಝ್ಬೆಕಿಸ್ತಾನ, ಭಾರತ, ಇರಾನ್, ತುರ್ಕ್‍ಮೆನಿಸ್ತಾನ್, ಕಿರ್ಗಿಸ್ತಾನ್, ತಜಿಕಿಸ್ತಾನ್ ಮತ್ತು ಪಾಕಿಸ್ತಾನ ಭಾಗವಹಿಸಲಿದೆ.