×
Ad

3ನೇ ಏಕದಿನ | ವೆಸ್ಟ್‌ಇಂಡೀಸ್‌ಗೆ ಹೀನಾಯ ಸೋಲು

Update: 2025-10-24 20:39 IST

Photo Credit : PTI

ಢಾಕಾ, ಅ.24: ವೆಸ್ಟ್‌ಇಂಡೀಸ್ ವಿರುದ್ಧ 3ನೇ ಹಾಗೂ ಕೊನೆಯ ಏಕದಿನ ಪಂದ್ಯವನ್ನು 179 ರನ್‌ಗಳ ಅಂತರದಿಂದ ಗೆದ್ದುಕೊಂಡಿರುವ ಬಾಂಗ್ಲಾದೇಶ ಕ್ರಿಕೆಟ್ ತಂಡವು 2-1 ಅಂತರದಿಂದ ಸರಣಿಯನ್ನು ವಶಪಡಿಸಿಕೊಂಡಿದೆ.

ಈ ಗೆಲುವಿನ ಮೂಲಕ ಬಾಂಗ್ಲಾದೇಶವು 2024ರ ಮಾರ್ಚ್ ನಂತರ ಮೊದಲ ಬಾರಿ ಏಕದಿನ ಸರಣಿ ಗೆದ್ದಿದೆ. ಇದಕ್ಕೂ ಮೊದಲು ಸತತ 4 ಸರಣಿಗಳನ್ನು ಬಾಂಗ್ಲಾದೇಶ ಸೋತಿತ್ತು.

ಬಾಂಗ್ಲಾದೇಶದ ಸ್ಪಿನ್ನರ್‌ಗಳು ಪಂದ್ಯದಲ್ಲಿ ಎಲ್ಲ 10 ವಿಕೆಟ್‌ಗಳನ್ನು ಉರುಳಿಸಿ ಪ್ರಾಬಲ್ಯ ಮೆರೆದರು. ರಿಶಾದ್ ಹುಸೇನ್ 54 ರನ್‌ಗೆ 3 ವಿಕೆಟ್‌ಗಳನ್ನು ಕಬಳಿಸಿ ಬೌಲಿಂಗ್ ದಾಳಿಯ ನೇತೃತ್ವವಹಿಸಿದರು. ಏಕದಿನ ಸರಣಿಯೊಂದರಲ್ಲಿ 12 ವಿಕೆಟ್‌ಗಳನ್ನು ಉರುಳಿಸಿದ ಬಾಂಗ್ಲಾದೇಶದ ಸ್ಪಿನ್ನರ್ ಎಂಬ ನೂತನ ದಾಖಲೆ ನಿರ್ಮಿಸಿದರು.

ನಸುಮ್ ಅಹ್ಮದ್(3-11)ವೆಸ್ಟ್‌ಇಂಡೀಸ್‌ನ ಅಗ್ರ ಸರದಿಯನ್ನು ಭೇದಿಸಿದರು. ಮೆಹದಿ ಹಸನ್ ಹಾಗೂ ತನ್ವೀರ್ ಇಸ್ಲಾಂ ತಲಾ 2 ವಿಕೆಟ್‌ಗಳನ್ನು ಪಡೆದರು. ವೇಗದ ಬೌಲರ್ ಮುಸ್ತಫಿಝರ‌್ರಹ್ಮಾನ್ ಬೌಲಿಂಗ್ ಮಾಡುವ ಅಗತ್ಯಬೀಳಲಿಲ್ಲ.

ವೆಸ್ಟ್‌ಇಂಡೀಸ್ 30.1 ಓವರ್‌ಗಳಲ್ಲಿ 117 ರನ್‌ಗೆ ಗಂಟುಮೂಟೆ ಕಟ್ಟಿದ ಪರಿಣಾಮ ಬಾಂಗ್ಲಾದೇಶವು ವಿಂಡೀಸ್ ವಿರುದ್ಧ ಅತಿದೊಡ್ಡ ಅಂತರದ ಗೆಲುವು ದಾಖಲಿಸಿದೆ.

ಇದಕ್ಕೂ ಮೊದಲು ಟಾಸ್ ಜಯಿಸಿದ ಬಾಂಗ್ಲಾದೇಶ ಬ್ಯಾಟಿಂಗ್ ಆಯ್ದುಕೊಂಡಿತು. ಆರಂಭಿಕ ಆಟಗಾರರಾದ ಸೈಫ್ ಹಸನ್(80 ರನ್, 72 ಎಸೆತ, 6 ಬೌಂಡರಿ, 6 ಸಿಕ್ಸರ್) ಹಾಗೂ ಸೌಮ್ಯ ಸರ್ಕಾರ್(91 ರನ್, 86 ಎಸೆತ, 7 ಬೌಂಡರಿ,4 ಸಿಕ್ಸರ್) 176 ರನ್ ಜೊತೆಯಾಟ ನಡೆಸಿ ಭದ್ರ ಬುನಾದಿ ಹಾಕಿಕೊಟ್ಟರು. ಬಾಂಗ್ಲಾದೇಶ 8 ವಿಕೆಟ್ ನಷ್ಟಕ್ಕೆ 296 ರನ್ ಗಳಿಸಲು ನೆರವಾದರು.

ವಿಂಡೀಸ್‌ನ ಅಕೀಲ್ ಹುಸೇನ್(4-41)ಜೀವನಶ್ರೇಷ್ಠ ಬೌಲಿಂಗ್ ಮಾಡಿದರು.

ಉಭಯ ತಂಡಗಳು ಅ.27ರಿಂದ ಟಿ-20 ಸರಣಿಯನ್ನು ಆಡಲಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News