ಟಿ-20 ವಿಶ್ವಕಪ್| ಸೂಪರ್-8 ಹಂತಕ್ಕೇರಿದ ಮೊದಲ ತಂಡ ವೆಸ್ಟ್ಇಂಡೀಸ್: ನೇಪಾಳದ ವಿರುದ್ಧ 9 ವಿಕೆಟ್ ಗೆಲುವು
Photo Credit : x@windiescricket
ಮುಂಬೈ, ಫೆ.15: ನೇಪಾಳ ಕ್ರಿಕೆಟ್ ತಂಡವನ್ನು 9 ವಿಕೆಟ್ಗಳ ಅಂತರದಿಂದ ಮಣಿಸಿದ ವೆಸ್ಟ್ಇಂಡೀಸ್ ತಂಡ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಸೂಪರ್-8 ಹಂತಕ್ಕೇರಿದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ವಾಂಖೆಡೆ ಸ್ಟೇಡಿಯಂನಲ್ಲಿ ರವಿವಾರ ನೇಪಾಳ ತಂಡವನ್ನು ಪ್ರೋತ್ಸಾಹಿಸಲು ನೆರೆದಿದ್ದ ಸಾವಿರಾರು ನೇಪಾಳಿ ಕ್ರಿಕೆಟ್ ಅಭಿಮಾನಿಗಳು ಈ ಫಲಿತಾಂಶದಿಂದ ನಿರಾಶೆಗೊಂಡರು.
ನಾಲ್ಕು ವಿಕೆಟ್ ಗೊಂಚಲು ಕಬಳಿಸಿದ ಆಲ್ರೌಂಡರ್ ಜೇಸನ್ ಹೋಲ್ಡರ್ ನೇಪಾಳದ ಮಧ್ಯಮ ಸರದಿಯನ್ನು ಭೇದಿಸಿದರು. ಮೊದಲು ಬ್ಯಾಟಿಂಗ್ ಮಾಡಿದ್ದ ನೇಪಾಳ ತಂಡವನ್ನು 20 ಓವರ್ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 133 ರನ್‌ಗೆ ನಿಯಂತ್ರಿಸುವಲ್ಲಿ ನೆರವಾದರು.
ಎರಡನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 91 ರನ್ ಸೇರಿಸಿದ ನಾಯಕ ಶಾಯ್ ಹೋಪ್(ಔಟಾಗದೆ 61, 44 ಎಸೆತ, 5 ಬೌಂಡರಿ, 3 ಸಿಕ್ಸರ್)ಹಾಗೂ ಶಿಮ್ರೊನ್ ಹೆಟ್ಮೆಯರ್(ಔಟಾಗದೆ 46, 32 ಎಸೆತ, 4 ಬೌಂಡರಿ, 2 ಸಿಕ್ಸರ್)ವೆಸ್ಟ್ಇಂಡೀಸ್ ತಂಡಕ್ಕೆ ಇನ್ನೂ 28 ಎಸೆತಗಳು ಬಾಕಿ ಇರುವಾಗಲೇ ಗೆಲುವು ತಂದುಕೊಟ್ಟರು.
ಸತತ ಮೂರನೇ ಸೋಲು ಕಂಡಿರುವ ನೇಪಾಳ ತಂಡವು ಪಂದ್ಯಾವಳಿಯಿಂದ ಹೊರ ನಡೆದಿದೆ. 2019ರಿಂದ ಪ್ರತಿಷ್ಠಿತ ವಾಂಖೆಡೆ ಸ್ಟೇಡಿಯಂನಲ್ಲಿ ವೆಸ್ಟ್ಇಂಡೀಸ್ ತಂಡ ಟಿ-20 ಕ್ರಿಕೆಟ್‌ನಲ್ಲಿ ತನ್ನ ಅಜೇಯ ದಾಖಲೆಯನ್ನು ಕಾಯ್ದುಕೊಂಡಿದೆ.
ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ನೇಪಾಳ ತಂಡವು ಪವರ್ಪ್ಲೇನಲ್ಲಿ ಕೇವಲ 23 ರನ್ ಗಳಿಸಿ ನಾಲ್ಕು ವಿಕೆಟ್ಗಳನ್ನು ಬೇಗನೆ ಕಳೆದುಕೊಂಡಿತು. 11ನೇ ಓವರ್ನ ವೇಳೆಗೆ 46 ರನ್ಗೆ ಐದನೇ ವಿಕೆಟ್ ಕಳೆದುಕೊಂಡಿರುವ ನೇಪಾಳದ ಸ್ಥಿತಿ ಮತ್ತಷ್ಟು ಹದಗೆಟ್ಟಿತು.
ನೇಪಾಳ ತಂಡವು ಒಂದೆಡೆ ವಿಕೆಟ್ಗಳನ್ನು ಕಳೆದುಕೊಳ್ಳುತ್ತಿದ್ದರೂ ದೀಪೇಂದ್ರ ಸಿಂಗ್(58 ರನ್, 47 ಎಸೆತ, 3 ಬೌಂಡರಿ, 3 ಸಿಕ್ಸರ್) ಏಕಾಂಗಿ ಹೋರಾಟ ನೀಡಿದರು. ಹಿರಿಯ ಆಟಗಾರ ಸೋಮಪಾಲ್(ಔಟಾಗದೆ 26, 15 ಎಸೆತ) ಅವರೊಂದಿಗೆ ಏಳನೇ ವಿಕೆಟ್ಗೆ 54 ರನ್ ಜೊತೆಯಾಟ ನಡೆಸಿದರು.
19ನೇ ಓವರ್‌ನಲ್ಲಿ ಎರಡು ಬಾರಿ ಬೌಂಡರಿ ಗಳಿಸಿದ ದೀಪೇಂದ್ರ ಸಿಂಗ್ ತನ್ನ ಅರ್ಧಶತಕವನ್ನು ಪೂರೈಸಿದರು. ಸೋಮಪಾಲ್ ಅವರು ಹೋಲ್ಡರ್ ಬೌಲಿಂಗ್‌ನಲ್ಲಿ ಸತತ ಮೂರು ಬೌಂಡರಿಗಳನ್ನು ಬಾರಿಸಿದರು.
ಅಂತಿಮವಾಗಿ ಈ ಇಬ್ಬರ ಪ್ರಯತ್ನ ವ್ಯರ್ಥವಾಗಿದ್ದು, ವೆಸ್ಟ್ಇಂಡೀಸ್ ತಂಡವು ಅನಾಯಾಸವಾಗಿ ಗುರಿಯನ್ನು ಬೆನ್ನಟ್ಟಿತು.
ಆರಂಭಿಕ ಆಟಗಾರರಾದ ಹೋಪ್ ಹಾಗೂ ಬ್ರೆಂಡನ್ ಕಿಂಗ್(22 ರನ್,17 ಎಸೆತ) ಮೊದಲ ವಿಕೆಟ್ಗೆ 43 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಆ ನಂತರ ಹೋಪ್ ಹಾಗೂ ಹೆಟ್ಮೆಯರ್ 15.2 ಓವರ್ಗಳಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು.