×
Ad

ವೆಸ್ಟ್ ಇಂಡೀಸ್ | ಈಜುಕೊಳದಲ್ಲಿ ಮುಳುಗಿ ಇರ್ಫಾನ್ ಪಠಾಣ್‌ರ ಮೇಕಪ್ ಆರ್ಟಿಸ್ಟ್ ಮೃತ್ಯು

Update: 2024-06-24 12:59 IST

Photo: freepressjournal.in

ಆ್ಯಂಟಿಗುವಾ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ವೀಕ್ಷಕ ವಿವರಣೆಗಾರ ಇರ್ಫಾನ್ ಪಠಾಣ್‌ರ ಮೇಕಪ್ ಆರ್ಟಿಸ್ಟ್ ಫಯಾಝ್ ಅನ್ಸಾರಿ ಶುಕ್ರವಾರ ಹೋಟೆಲ್‌ನ ಈಜು ಕೊಳವೊಂದರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಈ ಬಾರಿಯ ಟಿ-20 ವಿಶ್ವಕಪ್ ಪಂದ್ಯಗಳು ವೆಸ್ಟ್ ಇಂಡೀಸ್ ಹಾಗೂ ಅಮೆರಿಕಾದಲ್ಲಿ ನಡೆಯುತ್ತಿವೆ. ಈ ಪೈಕಿ ಸೂಪರ್ ಎಂಟರ ಘಟ್ಟದ ಪಂದ್ಯಗಳು ವೆಸ್ಟ್ ಇಂಡೀಸ್‌ನಲ್ಲಿ ನಡೆಯುತ್ತಿವೆ. ಈ ಟೂರ್ನಮೆಂಟ್‌ನ ವೀಕ್ಷಕ ವಿವರಣೆಗಾರರಾಗಿ ವೆಸ್ಟ್ ಇಂಡೀಸ್‌ಗೆ ತೆರಳಿದ್ದ ಇರ್ಫಾನ್ ಪಠಾಣ್, ತಮ್ಮೊಂದಿಗೆ ಮೇಕಪ್ ಆರ್ಟಿಸ್ಟ್ ಫಯಾಝ್ ಅನ್ಸಾರಿಯನ್ನೂ ಕರೆದೊಯ್ದಿದ್ದರು.

ವೆಸ್ಟ್ ಇಂಡೀಸ್‌ನ ಹೋಟೆಲೊಂದರಲ್ಲಿ ವಾಸ್ತವ್ಯ ಹೂಡಿದ್ದ ಫಯಾಝ್ ಅನ್ಸಾರಿ, ಶುಕ್ರವಾರ ಸಂಜೆ ಹೋಟೆಲ್‌ನ ಈಜು ಕೊಳದಲ್ಲಿ ಈಜುವಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

 

22 ವರ್ಷದ ಫಯಾಝ್ ಅನ್ಸಾರಿ ಪಶ್ಚಿಮ ಬಂಗಾಳದ ಬಿಜ್ನೋರ್ ಜಿಲ್ಲೆಯ ನಾಗಿನ ತಾಲ್ಲೂಕಿನ ಮೊಹಲ್ಲಾ ಖಾಝಿ ಸರಾಯಿ ಗ್ರಾಮದ ನಿವಾಸಿಯಾಗಿದ್ದರು. ನಂತರ ಮುಂಬೈಗೆ ತಮ್ಮ ವಾಸ್ತವ್ಯ ಬದಲಿಸಿದ್ದ ಅನ್ಸಾರಿ, ಅಲ್ಲಿ ಕ್ಷೌರದ ಅಂಗಡಿಯನ್ನು ತೆರೆದಿದ್ದರು. ಆಗ ಇರ್ಫಾನ್ ಪಠಾಣ್ ಮೇಕಪ್‌ಗೆಂದು ಅವರ ಕ್ಷೌರದ ಅಂಗಡಿಗೆ ಭೇಟಿ ನೀಡುತ್ತಿದ್ದರು. ಇದರ ಬೆನ್ನಿಗೇ ಅನ್ಸಾರಿಯನ್ನು ತಮ್ಮ ಖಾಸಗಿ ಮೇಕಪ್ ಕಲಾವಿದರನ್ನಾಗಿಸಿಕೊಂಡಿದ್ದ ಇರ್ಫಾನ್ ಪಠಾಣ್, ಅವರನ್ನು ತಮ್ಮೊಂದಿಗೆ ಅಂತಾರಾಷ್ಟ್ರೀಯ ಪ್ರವಾಸಗಳಿಗೆ ಕರೆದೊಯ್ಯುತ್ತಿದ್ದರು ಎಂದು ಹೇಳಲಾಗಿದೆ.

ಕೇವಲ ಎರಡು ತಿಂಗಳ ಹಿಂದಷ್ಟೆ ವಿವಾಹವಾಗಿದ್ದ ಫಯಾಝ್ ಅನ್ಸಾರಿ, ಎಂಟು ದಿನಗಳ ಹಿಂದಷ್ಟೆ ತಮ್ಮ ಸ್ವಗ್ರಾಮದಿಂದ ಮುಂಬೈಗೆ ತೆರಳಿದ್ದರು ಎನ್ನಲಾಗಿದೆ. ಈ ಅನಿರೀಕ್ಷಿತ ಅಪಘಾತದಿಂದ ಅವರ ಕುಟುಂಬವು ದುಃಖತಪ್ತವಾಗಿದೆ.

ಫಯಾಝ್ ಅನ್ಸಾರಿಯ ಮೃತದೇಹವನ್ನು ಭಾರತಕ್ಕೆ ರವಾನಿಸುವ ವ್ಯವಸ್ಥೆಯ ಉಸ್ತುವಾರಿಯನ್ನು ಇರ್ಫಾನ್ ಪಠಾಣ್ ಅವರೇ ವಹಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News