×
Ad

35 ವರ್ಷಗಳ ಬಳಿಕ ಪಾಕ್ ನಲ್ಲಿ ವಿಂಡೀಸ್ ಗೆ ಟೆಸ್ಟ್ ಜಯ

Update: 2025-01-27 22:10 IST

PC : PTI 

ಮುಲ್ತಾನ್: ಆತಿಥೇಯ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯವನ್ನು ವೆಸ್ಟ್ ಇಂಡೀಸ್ ಸೋಮವಾರ ಕೇವಲ ಮೂರು ದಿನಗಳಲ್ಲಿ 120 ರನ್ಗಳ ಭರ್ಜರಿ ಅಂತರದಿಂದ ಗೆದ್ದಿದೆ. ಇದರೊಂದಿಗೆ ವೆಸ್ಟ್ ಇಂಡೀಸ್ 35 ವರ್ಷಗಳಲ್ಲಿ ಮೊದಲ ಬಾರಿಗೆ ಪಾಕಿಸ್ತಾನದಲ್ಲಿ ಟೆಸ್ಟ್ ಪಂದ್ಯವನ್ನು ಗೆದ್ದಿದೆ.

ಎರಡು ಪಂದ್ಯಗಳ ಸರಣಿಯು 1-1ರ ಸಮಬಲದಲ್ಲಿ ಮುಕ್ತಾಯಗೊಂಡಿದೆ.

ಪಾಕಿಸ್ತಾನವು ಮುಲ್ತಾನ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ತನ್ನ ಸ್ಪಿನ್ನರ್ಗಳಿಗೆ ಅನುಕೂಲವಾಗುವ ಪಿಚ್ಚನ್ನು ನಿರ್ಮಿಸಿದರೂ, ಆತಿಥೇಯರನ್ನು ಅವರದೇ ಗುಹೆಯಲ್ಲಿ ಕಟ್ಟಿಹಾಕುವಲ್ಲಿ ಪ್ರವಾಸಿಗರು ಯಶಸ್ವಿಯಾಗಿದ್ದಾರೆ. ವೆಸ್ಟ್ ಇಂಡೀಸ್ ಸ್ಪಿನ್ನರ್ ಜೋಮೆಲ್ ವಾರಿಕನ್ ಮೊದಲ ಇನಿಂಗ್ಸ್ನಲ್ಲಿ 4 ಮತ್ತು ದ್ವಿತೀಯ ಇನಿಂಗ್ಸ್ನಲ್ಲಿ 5 ವಿಕೆಟ್ಗಳನ್ನು ಪಡೆದಿದ್ದಾರೆ. ಅವರನ್ನು ಪಂದ್ಯಶ್ರೇಷ್ಠ ಮತ್ತು ಸರಣಿಶ್ರೇಷ್ಠ ಎರಡೂ ಪ್ರಶಸ್ತಿಗಳಿಂದ ಪುರಸ್ಕರಿಸಲಾಗಿದೆ. ಅವರು ಈ ಸರಣಿಯಲ್ಲಿ 19 ವಿಕೆಟ್ಗಳನ್ನು ಉರುಳಿಸಿದ್ದಾರೆ ಮತ್ತು 85 ರನ್ಗಳನ್ನು ಗಳಿಸಿದ್ದಾರೆ.

ಈ ಸೋಲಿನೊಂದಿಗೆ, ಪಾಕಿಸ್ತಾನವು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ. ಶಾನ್ ಮಸೂದ್ ನೇತೃತ್ವದ ತಂಡವು ಈಗ 14 ಪಂದ್ಯಗಳಲ್ಲಿ 5 ಜಯ ಮತ್ತು 9 ಸೋಲುಗಳೊಂದಿಗೆ 9ನೇ ಸ್ಥಾನದಲ್ಲಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಆರಂಭವಾದಂದಿನಿಂದ ಪಾಕಿಸ್ತಾನವು ಒಂದು ಚಕ್ರವನ್ನು ಪಟ್ಟಿಯ ತಳದಲ್ಲಿ ಕೊನೆಗೊಳಿಸುತ್ತಿರುವುದು ಇದೇ ಮೊದಲನೆಯದಾಗಿದೆ.

ಪಾಕಿಸ್ತಾನದ ಸ್ಪಿನ್ ಸ್ನೇಹಿ ಪಿಚ್ನ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಂಡ ವಿಂಡೀಸ್ ಸ್ಪಿನ್ನರ್ ವಾರಿಕನ್ ಈ ಪಂದ್ಯದಲ್ಲಿ ಒಂಭತ್ತು ವಿಕೆಟ್ಗಳನ್ನು ಪಡೆದರು.

ಕಳೆದ ಬಾರಿ ವೆಸ್ಟ್ ಇಂಡೀಸ್ ಪಾಕಿಸ್ತಾನದಲ್ಲಿ ಟೆಸ್ಟ್ ಪಂದ್ಯವೊಂದನ್ನು ಗೆದ್ದಿದ್ದು ಫೈಸಲಾಬಾದ್ನಲ್ಲಿ 1990 ನವೆಂಬರ್ನಲ್ಲಿ. ಆ ಬಳಿಕ, 1997 ಮತ್ತು 2006ರಲ್ಲಿ ಅದು ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದರೂ, ಪಂದ್ಯಗಳನ್ನು ಗೆಲ್ಲಲು ಅದಕ್ಕೆ ಸಾಧ್ಯವಾಗಿರಲಿಲ್ಲ.

ಗೆಲ್ಲಲು ಎರಡನೇ ಇನಿಂಗ್ಸ್ನಲ್ಲಿ 254 ರನ್ಗಳನ್ನು ಗಳಿಸುವ ಗುರಿಯನ್ನು ಪಡೆದ ಪಾಕಿಸ್ತಾನವು, ಪಂದ್ಯದ ಮೂರನೇ ದಿನವಾದ ಸೋಮವಾರ 4 ವಿಕೆಟ್ಗಳ ನಷ್ಟಕ್ಕೆ 76 ರನ್ ಇದ್ದಲ್ಲಿಂದ ತನ್ನ ಇನಿಂಗ್ಸ್ ಮುಂದುವರಿಸಿತು. ಅದರ ಗೆಲುವು ಸೌದ್ ಶಕೀಲ್ರನ್ನು ಅವಲಂಬಿಸಿತ್ತು. ಆದರೆ, 13 ರನ್ ಗಳಿಸಿದ ಶಕೀಲ್, ಕೆವಿನ್ ಸಿಂಕ್ಲೇರ್ಗೆ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು. ಆಗ ಪಾಕಿಸ್ತಾನದ ಸೋಲು ಖಚಿತವಾಗಿತ್ತು.

ಪಾಕಿಸ್ತಾನವು ತನ್ನ ದ್ವಿತೀಯ ಇನಿಂಗ್ಸನ್ನು 133 ರನ್ಗಳಿಗೆ ಮುಕ್ತಾಯಗೊಳಿಸಿತು.

ಬಾಬರ್ ಅಝಮ್ 31 ರನ್ ಗಳಿಸಿ ತಂಡದ ಗರಿಷ್ಠ ಸ್ಕೋರ್ದಾರರಾದರು. ಮುಹಮ್ಮದ್ ರಿಝ್ವಾನ್ 25 ರನ್ಗಳ ದೇಣಿಗೆ ನೀಡಿದರು.

ಜೋಮೆಲ್ ವಾರಿಕನ್ರ ಐದು ವಿಕೆಟ್ಗಳ ಹೊರತಾಗಿ, ಕೆವಿನ್ ಸಿಂಕ್ಲೇರ್ 3 ಮತ್ತು ಗುಡಕೇಶಿ 2 ವಿಕೆಟ್ಗಳನ್ನು ಉರುಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News