×
Ad

ಐಸಿಸಿ ಒತ್ತಡಕ್ಕೆ ಮಣಿಯುವುದಿಲ್ಲ: ಬಾಂಗ್ಲಾದೇಶ ಸರಕಾರದ ಸಲಹೆಗಾರ ಆಸಿಫ್ ನಝ್ರುಲ್ ಘೋಷಣೆ

Update: 2026-01-20 19:33 IST

Photo Credit : PTI 

ಢಾಕಾ: ಜನವರಿ 21ರೊಳಗೆ ಟಿ20 ವಿಶ್ವಕಪ್‌ ನಲ್ಲಿ ಭಾಗವಹಿಸುವ ಕುರಿತು ತೀರ್ಮಾನ ಕೈಗೊಳ್ಳಬೇಕು ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಗಡುವು ನೀಡಿರುವ ಹೊರತಾಗಿಯೂ, ಯಾವುದೇ ಪರಿಸ್ಥಿತಿಯಲ್ಲಿಯೂ ಟಿ20 ವಿಶ್ವಕಪ್‌ ನಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಬಾಂಗ್ಲಾದೇಶ ರಾಷ್ಟ್ರೀಯ ತಂಡ ಪ್ರಯಾಣಿಸುವುದಿಲ್ಲ ಎಂದು ಮಂಗಳವಾರ ಬಾಂಗ್ಲಾದೇಶ ಸರಕಾರದ ಕಾನೂನು ಮತ್ತು ಕ್ರೀಡಾ ವಿಷಯಗಳ ಸಲಹೆಗಾರ ಆಸಿಫ್ ನಝ್ರುಲ್ ಪುನರುಚ್ಚರಿಸಿದ್ದಾರೆ.

20 ತಂಡಗಳು ಪಾಲ್ಗೊಳ್ಳಲಿರುವ ಟಿ20 ವಿಶ್ವಕಪ್‌ನಲ್ಲಿ ಭಾರತಕ್ಕೆ ತೆರಳುವುದಿಲ್ಲ ಎಂಬ ನಿರ್ಧಾರಕ್ಕೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಅಚಲವಾಗಿ ಅಂಟಿಕೊಂಡರೆ, ಸದ್ಯದ ಶ್ರೇಯಾಂಕಗಳ ಪ್ರಕಾರ ಸ್ಕಾಟ್‌ಲ್ಯಾಂಡ್ ತಂಡ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.

“ನಮ್ಮ ಸ್ಥಾನದಲ್ಲಿ ಸ್ಕಾಟ್‌ಲ್ಯಾಂಡ್ ತಂಡವನ್ನು ಸೇರಿಸಲಾಗುತ್ತದೆ ಎಂಬ ಕುರಿತು ನನಗೆ ಮಾಹಿತಿ ಇಲ್ಲ. ಒಂದು ವೇಳೆ ಭಾರತೀಯ ಕ್ರಿಕೆಟ್ ಮಂಡಳಿಯ ಒತ್ತಡಕ್ಕೆ ಮಣಿದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಯಾವುದೇ ಸಕಾರಣವಲ್ಲದ ಷರತ್ತುಗಳನ್ನು ವಿಧಿಸಿ ನಮ್ಮ ಮೇಲೆ ಒತ್ತಡ ಹೇರಿದರೆ, ಆ ಷರತ್ತುಗಳನ್ನು ನಾವು ಒಪ್ಪಿಕೊಳ್ಳುವುದಿಲ್ಲ,” ಎಂದು ಆಸಿಫ್ ನಝ್ರುಲ್ ಸುದ್ದಿಗಾರರಿಗೆ ಸ್ಪಷ್ಟಪಡಿಸಿದ್ದಾರೆ.

“ಈ ಹಿಂದೆ ಪಾಕಿಸ್ತಾನ ಭಾರತಕ್ಕೆ ಪ್ರಯಾಣಿಸುವುದಿಲ್ಲ ಎಂದು ಹೇಳಿದಾಗ, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಸ್ಥಳ ಬದಲಾವಣೆ ಮಾಡಿದ ನಿದರ್ಶನವಿದೆ. ನಾವು ತಾರ್ಕಿಕ ನೆಲೆಯಲ್ಲಿ ಸ್ಥಳ ಬದಲಾವಣೆ ಕೋರಿದ್ದೇವೆ. ಒತ್ತಡ ಹೇರುವ ಮೂಲಕ ಭಾರತದಲ್ಲೇ ಆಡುವಂತೆ ನಮ್ಮ ಮೇಲೆ ಬಲವಂತ ಮಾಡಲಾಗದು,” ಎಂದೂ ಅವರು ಹೇಳಿದ್ದಾರೆ.

ಎಲ್ಲ ಕಡೆಯ ಅನಿಶ್ಚಿತ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್‌ ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪಟ್ಟಿಯಿಂದ ಬಾಂಗ್ಲಾದೇಶದ ವೇಗಿ ಮುಸ್ತಫಿಝುರ್ ರಹ್ಮಾನ್ ಅವರನ್ನು ಕೈಬಿಡುವಂತೆ ಭಾರತೀಯ ಕ್ರಿಕೆಟ್ ಮಂಡಳಿ ಸೂಚನೆ ನೀಡಿದ ಬಳಿಕ ಈ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News