×
Ad

ಮಹಿಳೆಯರ ಕ್ರಿಕೆಟ್ ವಿಶ್ವಕಪ್ : ಕಿವೀಸ್ ವಿರುದ್ಧ ದಕ್ಷಿಣ ಆಫ್ರಿಕಾ ಜಯಭೇರಿ

ನ್ಯೂಝಿಲ್ಯಾಂಡ್ 231 ರನ್‌ಗೆ ಆಲೌಟ್, ಮ್ಲಾಬಾಗೆ 4 ವಿಕೆಟ್

Update: 2025-10-06 22:02 IST

 Photo Credit : X

ಇಂದೋರ್, ಅ.6: ಟಾಝ್ಮಿನ್ ಬ್ರಿಟ್ಸ್ ಶತಕ (101 ರನ್, 89 ಎಸೆತ, 15 ಬೌಂಡರಿ, 1 ಸಿಕ್ಸರ್ )ಹಾಗೂ ಸುನೆ ಲುಸ್(ಔಟಾಗದೆ 83 ರನ್, 114 ಎಸೆತ, 10 ಬೌಂಡರಿ,1 ಸಿಕ್ಸರ್)ಅರ್ಧಶತಕದ ಕೊಡುಗೆಯ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡವು ಮಹಿಳೆಯರ ಏಕದಿನ ಕ್ರಿಕೆಟ್ ವಿಶ್ವಕಪ್‌ನ 7ನೇ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ತಂಡವನ್ನು 6 ವಿಕೆಟ್‌ಗಳ ಅಂತರದಿಂದ ಮಣಿಸಿದೆ.

ಸೋಮವಾರ ನಡೆದ ಪಂದ್ಯದಲ್ಲಿ ಗೆಲ್ಲಲು 232 ರನ್ ಗುರಿ ಪಡೆದಿದ್ದ ದಕ್ಷಿಣ ಆಫ್ರಿಕಾ ತಂಡವು 40.5 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 234 ರನ್ ಗಳಿಸಿದೆ.

ಆಫ್ರಿಕಾ ತಂಡವು 3ನೇ ಓವರ್‌ನಲ್ಲಿ ನಾಯಕಿ ಲೌರಾ ವಾಲ್ವರ್ಟ್ (14 ರನ್)ವಿಕೆಟನ್ನು ಕಳೆದುಕೊಂಡಿತು. ಆಗ 2ನೇ ವಿಕೆಟ್‌ಗೆ 159 ರನ್ ಜೊತೆಯಾಟ ನಡೆಸಿದ ಬ್ರಿಟ್ಸ್ ಹಾಗೂ ಲುಸ್ ತಂಡವನ್ನು ಆಧರಿಸಿದರು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಝಿಲ್ಯಾಂಡ್ ತಂಡ ಸೋಫಿ ಡಿವೈನ್(85 ರನ್, 98 ಎಸೆತ, 9 ಬೌಂಡರಿ)ಅರ್ಧಶತಕದ ಕೊಡುಗೆಯ ಹೊರತಾಗಿಯೂ ಎಡಗೈ ಸ್ಪಿನ್ನರ್ ನಾನ್ಕುಲುಲೆಕಾ ಮ್ಲಾಬಾ(4-40) ಸ್ಪಿನ್ ಮೋಡಿಗೆ ಸಿಲುಕಿ ಕೇವಲ 231 ರನ್‌ಗೆ ಆಲೌಟಾಯಿತು.

ಡಿವೈನ್ ಹಾಗೂ ಬ್ರೂಕ್ ಹಾಲಿಡೇ(45 ರನ್, 37 ಎಸೆತ, 6 ಬೌಂಡರಿ)ನಾಲ್ಕನೇ ವಿಕೆಟ್‌ಗೆ 86 ರನ್ ಕಲೆ ಹಾಕಿ ನ್ಯೂಝಿಲ್ಯಾಂಡ್ ತಂಡದ ಮೊತ್ತವನ್ನು 250ರ ಗಡಿ ದಾಟಿಸುವ ವಿಶ್ವಾಸ ಮೂಡಿಸಿದ್ದರು. ಡಿವೈನ್ ಹಾಗೂ ಹಾಲಿಡೇ ವಿಕೆಟ್‌ಗಳನ್ನು ಕಬಳಿಸಿದ ಮ್ಲಾಬಾ ಕಿವೀಸ್‌ನ ರನ್ ವೇಗಕ್ಕೆ ಕಡಿವಾಣ ಹಾಕಿದರು.

ಒಂದು ಹಂತದಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 187 ರನ್ ಗಳಿಸಿದ್ದ ಕಿವೀಸ್ ತಂಡವು 47.5 ಓವರ್‌ಗಳಲ್ಲಿ 231 ರನ್‌ಗೆ ಆಲೌಟಾಗಿ ಕುಸಿತ ಕಂಡಿತು.

ತನ್ನ 300ನೇ ಅಂತರ್‌ರಾಷ್ಟ್ರೀಯ ಪಂದ್ಯವನ್ನಾಡಿದ ಡಿವೈನ್ ಆಸ್ಟ್ರೇಲಿಯದ ವಿರುದ್ಧ ಮೊದಲ ಲೀಗ್ ಪಂದ್ಯದಲ್ಲಿ 112 ರನ್ ಗಳಿಸಿದ್ದರೂ ನ್ಯೂಝಿಲ್ಯಾಂಡ್‌ಗೆ ಗೆಲುವು ದಕ್ಕಲಿಲ್ಲ. ಇಂದು ಕೂಡ ತನ್ನ 17ನೇ ಅರ್ಧಶತಕ(85 ರನ್) ಗಳಿಸಿದ ಡಿವೈನ್ ಔಟಾದ ನಂತರ ಕಿವೀಸ್ ಕುಸಿತದ ಹಾದಿ ಹಿಡಿಯಿತು. ಕಿವೀಸ್‌ನ ಕೊನೆಯ ಐವರು ಬ್ಯಾಟರ್‌ಗಳು ಕೇವಲ 22 ರನ್ ಗಳಿಸಲು ಶಕ್ತರಾದರು.

ಸಂಕ್ಷಿಪ್ತ ಸ್ಕೋರ್

ನ್ಯೂಝಿಲ್ಯಾಂಡ್: 47.5 ಓವರ್‌ಗಳಲ್ಲಿ 231 ರನ್‌ಗೆ ಆಲೌಟ್

(ಸೋಫಿ ಡಿವೈನ್ 85, ಬ್ರೂಕ್ ಹಾಲಿಡೇ 45, ಜಾರ್ಜಿಯಾ ಪ್ಲಿಮ್ಮರ್ 31, ನಾನ್ಕುಲುಲೆಕಾ ಮ್ಲಾಬಾ 4-40)

ದಕ್ಷಿಣ ಆಫ್ರಿಕಾ: 40.5 ಓವರ್‌ಗಳಲ್ಲಿ 234/4

(ಟಾಝ್ಮಿನ್ 101, ಸುನೆ ಲುಸ್ ಔಟಾಗದೆ 83, ಲಿಯಾ ಟಹುಹು 1-27, ಅಮೆಲಿಯಾ ಕೆರ್ 2-62)

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News