ನಾಳೆ(ನ.2) ಮಹಿಳೆಯರ ಏಕದಿನ ವಿಶ್ವಕಪ್ ಫೈನಲ್; ಚೊಚ್ಚಲ ಪ್ರಶಸ್ತಿಯ ನಿರೀಕ್ಷೆಯಲ್ಲಿ ಭಾರತ, ದಕ್ಷಿಣ ಆಫ್ರಿಕಾ ತಂಡ
Photo Credit : @BCCI
ಹೊಸದಿಲ್ಲಿ, ನ.1: ಭಾರತ ಹಾಗೂ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡಗಳು ನವಿ ಮುಂಬೈನ ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ರವಿವಾರ ನಡೆಯಲಿರುವ ಮಹಿಳೆಯರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಹೋರಾಟ ನಡೆಸಲಿವೆ. ಆಸ್ಟ್ರೇಲಿಯ ಹಾಗೂ ಇಂಗ್ಲೆಂಡ್ ಫೈನಲ್ ತಲುಪದ ಕಾರಣ ಈ ಪಂದ್ಯದಲ್ಲಿ ಗೆಲ್ಲುವ ತಂಡವು ಪಂದ್ಯಾವಳಿಯ ಇತಿಹಾಸದಲ್ಲಿ ಮೊದಲ ಬಾರಿ ಮಹಿಳೆಯರ ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿಯಲಿದೆ.
ಉಭಯ ತಂಡಗಳು ತಮ್ಮ ಮೊದಲ ವಿಶ್ವ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿವೆ. ಭಾರತ ತಂಡವು ಹಾಲಿ ಚಾಂಪಿಯನ್ ಆಸ್ಟ್ರೇಲಿಯ ತಂಡವನ್ನು ಹಾಗೂ ದಕ್ಷಿಣ ಆಫ್ರಿಕಾ ತಂಡವು ಇಂಗ್ಲೆಂಡ್ ತಂಡವನ್ನು ಮಣಿಸುವ ಮೂಲಕ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿವೆ.
45,300 ಪ್ರೇಕ್ಷಕರ ಸಾಮರ್ಥ್ಯದ ಡಿ.ವೈ. ಪಾಟೀಲ್ ಸ್ಟೇಡಿಯಂ ಪ್ರಸಕ್ತ ಪಂದ್ಯಾವಳಿಯ ವೇಳೆ ಭಾರತದ ಪಾಲಿಗೆ ಅದೃಷ್ಟದ ಮೈದಾನವಾಗಿತ್ತು. ಗ್ರೂಪ್ ಹಂತದಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಗೆಲುವು ದಾಖಲಿಸಿದ್ದ ಭಾರತವು ಸೆಮಿ ಫೈನಲ್‌ನಲ್ಲಿ 7 ಬಾರಿಯ ಚಾಂಪಿಯನ್ ಆಸ್ಟ್ರೇಲಿಯಕ್ಕೆ ಸೋಲುಣಿಸಿತ್ತು. ಬಾಂಗ್ಲಾದೇಶ ವಿರುದ್ಧ ಲೀಗ್ ಪಂದ್ಯದ ಫಲಿತಾಂಶ ಬಂದಿರಲಿಲ್ಲ. ದಕ್ಷಿಣ ಆಫ್ರಿಕಾ ತಂಡವು ಈ ಮೈದಾನದಲ್ಲಿ ಈ ತನಕ ಆಡಿಲ್ಲ.
ಈ ಎರಡು ತಂಡಗಳು ಅಕ್ಟೋಬರ್ 9ರಂದು ಪಂದ್ಯಾವಳಿಯ ಲೀಗ್ ಹಂತದಲ್ಲಿ ಕೊನೆಯ ಬಾರಿ ಮುಖಾಮುಖಿಯಾಗಿದ್ದವು. ಆಗ ದಕ್ಷಿಣ ಆಫ್ರಿಕಾವು 3 ವಿಕೆಟ್ ಗಳ ಅಂತರದಿಂದ ಜಯಶಾಲಿಯಾಗಿತ್ತು. ನಾಡಿನ್ ಡಿ ಕ್ಲಾರ್ಕ್ ಔಟಾಗದೆ 84 ರನ್ ಹಾಗೂ 2 ವಿಕೆಟ್ ಗಳನ್ನು ಉರುಳಿಸುವ ಮೂಲಕ ಆಲ್‌ರೌಂಡ್ ಪ್ರದರ್ಶನ ನೀಡಿದ್ದರು.
ಹೆಡ್-ಟು-ಹೆಡ್ ದಾಖಲೆಯಲ್ಲಿ ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ ಮೇಲುಗೈ ಹೊಂದಿದ್ದು, 34 ಏಕದಿನ ಪಂದ್ಯಗಳ ಪೈಕಿ 20ರಲ್ಲಿ ಜಯ ದಾಖಲಿಸಿದೆ.
ಭಾರತ ತಂಡದ ಫೈನಲ್ ಹಾದಿ ಸುಗಮವಾಗಿರಲಿಲ್ಲ. ಉತ್ತಮ ಆರಂಭ ಪಡೆದಿದ್ದ ಭಾರತೀಯರು ಪಂದ್ಯಾವಳಿಯ ಮಧ್ಯಭಾಗದಲ್ಲಿ ದಕ್ಷಿಣ ಆಫ್ರಿಕಾ ಸಹಿತ ಸತತ 3 ಪಂದ್ಯಗಳಲ್ಲಿ ಸೋಲನುಭವಿಸಿ ಲೀಗ್ ಹಂತದಲ್ಲಿ 4ನೇ ಸ್ಥಾನ ಪಡೆದಿದ್ದರು. ಸೆಮಿ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯ ನೀಡಿದ್ದ 339 ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು.
ಸೆಮಿ ಫೈನಲ್‌ನಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದ ಜೆಮಿಮಾ ರೊಡ್ರಿಗಸ್ ಔಟಾಗದೆ 127 ರನ್ ಕಲೆ ಹಾಕಿ ಜೀವನಶ್ರೇಷ್ಠ ಇನಿಂಗ್ಸ್‌ನ ಮೂಲಕ ಭಾರತ ತಂಡ ಅಜೇಯ ಗೆಲುವಿನ ಓಟದಲ್ಲಿದ್ದ ಆಸ್ಟ್ರೇಲಿಯಕ್ಕೆ ಸೋಲುಣಿಸಲು ನೆರವಾಗಿದ್ದರು. ನಾಯಕಿ ಹರ್ಮನ್‌ಪ್ರೀತ್ ಕೌರ್(89 ರನ್)ಬೆಂಬಲದೊಂದಿಗೆ ಜೆಮಿಮಾ ದೊಡ್ಡ ಮೊತ್ತವನ್ನು ದಿಟ್ಟವಾಗಿ ಬೆನ್ನಟ್ಟಿದರು. ಭಾರತವು ಮಹಿಳೆಯರ ವಿಶ್ವಕಪ್ ನ ನಾಕೌಟ್ ಇತಿಹಾಸದಲ್ಲಿ ಗರಿಷ್ಠ ಮೊತ್ತವನ್ನು ಯಶಸ್ವಿಯಾಗಿ ಚೇಸ್ ಮಾಡಿದೆ.
ದಕ್ಷಿಣ ಆಫ್ರಿಕಾದ ವಿಶ್ವಕಪ್ ಅಭಿಯಾನ ಅತ್ಯುತ್ತಮವಾಗಿದ್ದು, ಪಂದ್ಯಾವಳಿಯಲ್ಲಿ ಹೆಚ್ಚು ಸ್ಥಿರ ಪ್ರದರ್ಶನ ನೀಡಿದೆ. ಲೀಗ್ ಹಂತದಲ್ಲಿ ಆಸ್ಟ್ರೇಲಿಯ ಹಾಗೂ ಇಂಗ್ಲೆಂಡ್ ವಿರುದ್ಧ ಸೋತಿದ್ದರೂ ಅಂಕಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿತ್ತು. ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದ ಇಂಗ್ಲೆಂಡ್ ತಂಡವನ್ನು ಮೊದಲ ಸೆಮಿ ಫೈನಲ್‌ನಲ್ಲಿ 125 ರನ್ ಗಳ ಅಂತರದಿಂದ ಮಣಿಸಿ ಪ್ರಾಬಲ್ಯ ಮೆರೆದಿತ್ತು. ಲೀಗ್ ಹಂತದಲ್ಲಿ ಕೇವಲ 69 ಹಾಗೂ 97 ರನ್ ಗಳಿಸಿ ಆಲೌಟಾಗಿ ಮುಜುಗರ ಅನುಭವಿಸಿದ್ದರೂ ಆ ಹಿನ್ನಡೆಯಿಂದ ಬೇಗನೆ ಚೇತರಿಸಿಕೊಂಡಿತು.
ದಕ್ಷಿಣ ಆಫ್ರಿಕಾ ತಂಡದ ನಾಯಕಿ ಲೌರಾ ವಾಲ್ವಾರ್ಟ್ ಪಂದ್ಯಾವಳಿಯ ಗರಿಷ್ಠ ರನ್ ಸ್ಕೋರರ್ ಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.44 ವಿಕೆಟ್ ಗಳ ಮೂಲಕ ಇತ್ತೀಚೆಗೆ ವಿಶ್ವಕಪ್ ನ ಸಾರ್ವಕಾಲಿಕ ಶ್ರೇಷ್ಠ ಬೌಲರ್ ಎನಿಸಿಕೊಂಡಿದ್ದ ಮರಿಝಾನ್ ಕಾಪ್ ಬೌಲಿಂಗ್ ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ.
ಭಾರತ ತಂಡವು ಈ ಹಿಂದೆ 2005 ಹಾಗೂ 2017ರಲ್ಲಿ ಫೈನಲ್ ಗೆ ತಲುಪಿತ್ತು. ಆದರೆ ಕ್ರಮವಾಗಿ ಆಸ್ಟ್ರೇಲಿಯ ಹಾಗೂ ಇಂಗ್ಲೆಂಡ್ ತಂಡಗಳ ವಿರುದ್ಧ ಸೋಲನುಭವಿಸಿ ರನ್ನರ್ಸ್ ಅಪ್ ಗೆ ತೃಪ್ತಿಪಟ್ಟುಕೊಂಡಿತ್ತು. ಪ್ರತಿಷ್ಠಿತ ಪ್ರಶಸ್ತಿಗಾಗಿ ಇದೀಗ 3ನೇ ಬಾರಿ ಪ್ರಯತ್ನಿಸಲಿದೆ.
2017 ಹಾಗೂ 2022ರಲ್ಲಿ ಸೆಮಿ ಫೈನಲ್ ನಲ್ಲೇ ನಿರ್ಗಮಿಸಿದ್ದ ದಕ್ಷಿಣ ಆಫ್ರಿಕಾ ತಂಡವು ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿ ಫೈನಲ್‌ಗೆ ಲಗ್ಗೆ ಇಟ್ಟಿದ್ದು, ಚರಿತ್ರೆ ನಿರ್ಮಿಸುವ ಗುರಿ ಇಟ್ಟುಕೊಂಡಿದೆ.
ದಕ್ಷಿಣ ಆಫ್ರಿಕಾ ತಂಡ ಭಾರತ ವಿರುದ್ಧದ ಹಿಂದಿನ 3 ವಿಶ್ವಕಪ್ ಸ್ಪರ್ಧೆಗಳಲ್ಲಿ ಸೋತಿಲ್ಲ. ಪ್ರಸಕ್ತ ವಿಶ್ವಕಪ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಗಳನ್ನು(31)ಸಿಡಿಸಿರುವ ಏಕೈಕ ತಂಡವಾಗಿದೆ.
ಭಾರತ(ಸಂಭಾವ್ಯ): 1.ಸ್ಮತಿ ಮಂಧಾನ, 2. ಶೆಫಾಲಿ ವರ್ಮಾ, 3.ಜೆಮಿಮಾ ರೊಡ್ರಿಗಸ್, 4. ಹರ್ಮನ್‌ಪ್ರೀತ್ ಕೌರ್(ನಾಯಕ), 5. ದೀಪ್ತಿ ಶರ್ಮಾ, 6. ರಿಚಾ ಘೋಷ್(ವಿಕೆಟ್‌ಕೀಪರ್), 7. ಅಮನ್‌ಜೋತ್ ಕೌರ್, 8. ರಾಧಾ ಯಾದವ್/ಸ್ನೇಹ ರಾಣಾ, 9. ಕ್ರಾಂತಿ ಗೌಡ್,10. ಶ್ರೀಚರಣಿ, 11.ರೇಣುಕಾ ಸಿಂಗ್.
ದಕ್ಷಿಣ ಆಫ್ರಿಕಾ(ಸಂಭಾವ್ಯ): 1. ಲೌರಾ ವಾಲ್ವಾರ್ಟ್(ನಾಯಕಿ), 2. ತಝ್ಮಿನ್ ಬ್ರಿಟ್ಸ್, 3. ಅನ್ನೆಕ್ ಬಾಷ್/ಮಸಬಟ ಕ್ಲಾಸ್, 4. ಸುನ್ ಲುಸ್, 5. ಮರಿಝಾನ್ ಕಾಪ್, 6. ಸಿನಾಲೊ ಜಾಫ್ಟ(ವಿಕೆಟ್‌ಕೀಪರ್), 7. ಅನ್ನೆರೀ ಡೆರ್ಕ್‌ಸೆನ್, 8. ಟ್ರೈಯೊನ್ , 9. ನಾಡಿನ್ ಡಿ ಕ್ಲಾರ್ಕ್, 10. ಅಯಬೊಂಗ ಖಾಖಾ, 11.ನಾನ್ಕುಲುಲೆಕಾ ಮ್ಲಾಬಾ.